Law

ನೌಕರಿ ಕಾಯಂ ವಿಚಾರ: ಆದೇಶ ಪಾಲಿಸದ ಅಧಿಕಾರಿಗಳಿಗೆ ಜೈಲು ಶಿಕ್ಷೆ ವಿಧಿಸಿದ ಹೈಕೋರ್ಟ್

Share It

ನೌಕರರನ್ನು ಕಾಯಂಗೊಳಿಸುವಂತೆ ಹೈಕೋರ್ಟ್ ನೀಡಿದ್ದ ಆದೇಶವನ್ನು ಉದ್ದೇಶಪೂರ್ವಕವಾಗಿ ನಿರ್ಲಕ್ಷಿಸಿದ್ದ ಐವರು ಸರ್ಕಾರಿ ಅಧಿಕಾರಿಗಳಿಗೆ ಹೈಕೋರ್ಟ್ ತಲಾ ಒಂದು ತಿಂಗಳು ಜೈಲು ಶಿಕ್ಷೆ ಹಾಗೂ 1 ಸಾವಿರ ದಂಡ ವಿಧಿಸಿ ಆದೇಶಿಸಿದೆ.

ಇಬ್ಬರು ಐಎಎಸ್ ಅಧಿಕಾರಿಗಳು ಹಾಗೂ ಎ.ಪಿ.ಎಸ್.ಆರ್.ಟಿ.ಸಿ ಯ ಮೂವರು ಅಧಿಕಾರಿಗಳಿಗೆ ಶಿಕ್ಷೆ ವಿಧಿಸಿ ಆಂದ್ರ ಪ್ರದೇಶ ಹೈಕೋರ್ಟ್ ನ ನ್ಯಾಯಾಧೀಶ ಮನ್ಮಧರಾವ್ ಆದೇಶ ಹೊರಡಿಸಿದ್ದಾರೆ.

ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಸೇವೆ ಕಾಯಂಗೊಳಿಸುವಂತೆ ಹಾಗೂ ವೇತನ ಸರಿಪಡಿಸುವಂತೆ ಕೋರಿ ನೌಕರರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ 2022ರ ಆಗಸ್ಟ್ 1ರಂದು ಇತ್ಯರ್ಥಪಡಿಸಿತ್ತು. ನೌಕರರನ್ನು ಕಾಯಂಗೊಳಿಸುವಂತೆ ಹಾಗೂ ಬಾಕಿ ವೇತನವನ್ನು ಶೇ.7ರ ಬಡ್ಡಿ ದರದೊಂದಿಗೆ ಪಾವತಿಸುವಂತೆ ಆದೇಶಿಸಿತ್ತು. ಆದರೆ, ಅಧಿಕಾರಿಗಳು ನ್ಯಾಯಾಲಯದ ಆದೇಶವನ್ನು ಈವರೆಗೂ ಪಾಲಿಸಿರಲಿಲ್ಲ.

ಆದೇಶ ಪಾಲಿಸದ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧ ಹೈಕೋರ್ಟ್ ನಲ್ಲಿ ನ್ಯಾಯಾಂಗ ನಿಂದನೆ ದಾಖಲಿಸಲಾಗಿತ್ತು. ನ್ಯಾಯಾಂಗ ನಿಂದನೆ ಪ್ರಕರಣವನ್ನು ವಿಚಾರಣೆ ಕೈಗೆತ್ತಿಕೊಂಡ ಬಳಿಕ ಅಧಿಕಾರಿಗಳು ತಾವು ಹೈಕೋರ್ಟ್ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿರುವುದಾಗಿ ವಾದ ಮಂಡಿಸಿದ್ದರು. ಆದರೆ, ಮೇಲ್ಮನವಿಗೆ ಯಾವುದೇ ತಡೆ ಇಲ್ಲದಿದ್ದಾಗ ನ್ಯಾಯಾಂಗ ನಿಂದನೆ ಅಡಿ ವಿಚಾರಣೆ ಮುಂದುವರೆಸಬಹುದು ಹಾಗೂ ಕ್ರಮ ಜರುಗಿಸಬಹುದು ಎಂದು ಹೈಕೋರ್ಟ್ ಹೇಳಿದೆ.

ಹಾಗೆಯೇ, ಹೈಕೋರ್ಟ್ ಆದೇಶ ಮಾಡಿರುವುದು ಆಗಸ್ಟ್ 2022 ರಲ್ಲಿ. ಅಧಿಕಾರಿಗಳು ಸಮರ್ಥಿಸಿಕೊಳ್ಳುವಂತೆ ಅವರು ಆದೇಶವನ್ನು 2 ತಿಂಗಳಲ್ಲಿ ಪಾಲಿಸಬೇಕಿತ್ತು. ಇಲ್ಲವೇ ಪಾಲಿಸಲು ಸಮಸ್ಯೆ ಇದ್ದಲ್ಲಿ ಹೆಚ್ಚುವರಿ ಕಾಲಾವಕಾಶ ಕೋರಿ ಮನವಿ ಮಾಡಬೇಕಿತ್ತು. ಅಧಿಕಾರಿಗಳು ಯಾವುದನ್ನೂ ಪಾಲಿಸಿಲ್ಲ ಎಂದು ಹೈಕೋರ್ಟ್ ಅಧಿಕಾರಿಗಳ ನಡೆಗೆ ತೀರ್ವ ಅಸಮಾಧಾನ ವ್ಯಕ್ತಪಡಿಸಿದೆ.

ಅಂತಿಮವಾಗಿ ಐವರು ಅಧಿಕಾರಿಗಳಿಗೆ ತಲಾ ಒಂದು ತಿಂಗಳು ಜೈಲು ಶಿಕ್ಷೆ, ಒಂದು ಸಾವಿರ ದಂಡ ವಿಧಿಸಿದೆ. ದಂಡ ಪಾವತಿಸಲು ವಿಫಲವಾದರೆ ಒಂದು ವಾರ ಹೆಚ್ಚುವರಿ ಜೈಲು ಶಿಕ್ಷೆ ಅನುಭವಿಸುಂತೆ ತಿಳಿಸಿದೆ. ಅಲ್ಲದೇ, ಅಧಿಕಾರಿಗಳು ಶಿಕ್ಷೆ ಅನುಭವಿಸಲು ಹೈಕೋರ್ಟ್ ರಿಜಿಸ್ಟ್ರಾರ್ (ನ್ಯಾಯಾಂಗ) ಎದುರು ಶರಣಾಗುವಂತೆ ಆದೇಶಿಸಿದೆ.

(CONTEMPT CASE No.4259 of 2022)


Share It

You cannot copy content of this page