ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು.
ಅಕ್ರಮ ಸಂಬಂಧ ಇಟ್ಟುಕೊಂಡಿರುವ ಮಹಿಳೆಯು ತನ್ನ ಪತಿಯಿಂದ ಜೀವನಾಂಶ ಕೋರಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.
ಇದೇ ವೇಳೆ ಜೀವನಾಂಶ ನೀಡುವಂತೆ ಮ್ಯಾಜಿಸ್ಟ್ರೇಟ್ ನೀಡಿದ್ದ ಆದೇಶವನ್ನು ರದ್ದುಪಡಿಸಿದ್ದ ಸೆಷನ್ಸ್ ಕೋರ್ಟ್ ಆದೇಶವನ್ನು ಎತ್ತಿ ಹಿಡಿದಿದೆ. ಇದೇ ವೇಳೆ ಅನೈತಿಕ ಸಂಬಂಧ ಹೊಂದಿರುವ ಮಹಿಳೆಯು ತನ್ನ ಪತಿಯ ನೈತಿಕತೆಯನ್ನು ಪ್ರಶ್ನಿಸಲಾಗದು ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಚಿಕ್ಕಮಗಳೂರು ನ್ಯಾಯಾಲಯದ ಆದೇಶ ಪ್ರಶ್ನಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಕ್ರಿಮಿನಲ್ ಪುನರ್ ಪರಿಶೀಲನಾ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ, ಈ ಅಭಿಪ್ರಾಯ ವ್ಯಕ್ತಪಡಿಸಿ ಮಹಿಳೆಯ ಅರ್ಜಿ ವಜಾಗೊಳಿಸಿದೆ.
ಪೀಠ ತನ್ನ ತೀರ್ಪಿನಲ್ಲಿ, ಅರ್ಜಿದಾರರು ಅಕ್ರಮ ಸಂಬಂಧ ಹೊಂದಿರುವಾಗ ಹಾಗೂ ಪ್ರಾಮಾಣಿಕರಿಲ್ಲದಿದ್ದಾಗ ಪತಿಯಿಂದ ಜೀವನಾಂಶ ನೀಡಬೇಕೆಂಬ ವಾದ ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಪತಿ ಕಡೆಯಿಂದ ಆಕೆ ಯಾವುದೇ ನಿರೀಕ್ಷೆ ಮಾಡಬಾರದು,” ಎಂದು ಆದೇಶಿಸಿದೆ.
”ಅರ್ಜಿದಾರರು ಮತ್ತೊಬ್ಬ ವ್ಯಕ್ತಿಯೊಂದಿಗೆ ಓಡಿ ಹೋಗಿರುವ ಸಂಬಂಧ ದೂರು ದಾಖಲಾಗಿದ್ದು, ತನಿಖೆ ವೇಳೆ ಆಪ್ತನೊಂದಿಗೆ ನೆಲೆಸಲು ಇಚ್ಚಿಸುತ್ತಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಇದೇ ಆಧಾರದಲ್ಲಿ ವಿಚ್ಚೇದನವೂ ಮಂಜೂರಾಗಿದೆ. ಜತೆಗೆ, ಅರ್ಜಿದಾರರನ್ನು ಪಾಟಿ ಸವಾಲಿಗೆ ಒಳಪಡಿಸಿದಾಗ ಜೀವನ ನಡೆಸುವುದಕ್ಕಾಗಿ ಆದಾಯದ ಮೂಲಗಳಿಲ್ಲ ಎಂದು ತಿಳಿಸಿದ್ದಾರೆ. ಆದರೆ, ಸಾಕ್ಷಿಗಳ ಪ್ರಕಾರ ಮತ್ತೊಬ್ಬ ವ್ಯಕ್ತಿಯೊಂದಿಗೆ ನೆಲೆಸಿದ್ದು, ಅವರೇ ಜೀವನ ನೋಡಿಕೊಳ್ಳುತ್ತಿದ್ದಾರೆ. ಎಲ್ಲ ವೇಳೆಯೂ ಅವನೊಟ್ಟಿಗೆ ಇರುತ್ತಿರುವ ಅಂಶ ಸಾಕ್ಷಾಧಾರಗಳಿಂದ ತಿಳಿದು ಬಂದಿದೆ. ಆದ ಕಾರಣ ಪರಿಹಾರ ನೀಡಲಾಗದು,” ಎಂದು ಹೈಕೋರ್ಟ್ ತೀರ್ಪಿನಲ್ಲಿ ವಿವರಿಸಿದೆ.
(CRL.RP No. 56/2016)

