ತರೀಕೆರೆ: ವನ್ಯಜೀವಿಯಿಂದ ಆಗಿರುವ ಎಲ್ಲ ಬೆಳೆ ಹಾನಿ ಪರಿಹಾರವನ್ನು ಈ ತಿಂಗಳಾಂತ್ಯದೊಳಗೆ ಪಾವತಿಸುವಂತೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ತರೀಕೆರೆಯಲ್ಲಿ ಭಾನುವಾರ ಶಿವಮೊಗ್ಗ, ಉಂಬ್ಳೆಬೈಲು ಮತ್ತು ಚಿಕ್ಕಮಗಳೂರು ವಿಭಾಗದ ಹಿರಿಯ ಅರಣ್ಯಾಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ಕಾಡು ಪ್ರಾಣಿಗಳು ತೋಟ, ಹೊಲ, ಗದ್ದೆಗೆ ನುಗ್ಗಿ ಬೆಳೆ ನಷ್ಟ ಮಾಡಿದರೆ, ಆದಷ್ಟು ಶೀಘ್ರ ಪರಿಹಾರ ಪಾವತಿಸುವಂತೆ ಇತ್ತೀಚೆಗೆ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದ್ದು, ಈ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಸೂಚಿಸಿದರು.
ವನ್ಯಜೀವಿಯಿಂದ ಒಂದೇ ಒಂದು ಸಾವು ಸಂಭವಿಸಬಾರದು, ಆದರೆ ಕೈಮೀರಿ ಇಂತಹ ದುರ್ಘಟನೆಗಳು ನಡೆಯುತ್ತಿವೆ. ಕೂಡಲೇ ಹಾಲಿ ಇರುವ 8 ಬೋನಿನ ಜೊತೆಗೆ ಇನ್ನೂ 4 ಹೆಚ್ಚುವರಿ ಬೋನುಗಳನ್ನಿಟ್ಟು, ನಾಡಿಗೆ ಬರುವ ಚಿರತೆಗಳ ಸೆರೆಗೆ ತುರ್ತು ಕ್ರಮ ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ಒತ್ತುವರಿ ಆದರೆ ಆರ್.ಎಫ್.ಗಳೇ ಹೊಣೆ:
2015ರ ನಂತರ ಯಾವುದೇ ಹೊಸ ಅರಣ್ಯ ಒತ್ತುವರಿ ಆಗಿದ್ದರೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು. ಉಪಗ್ರಹ ಚಿತ್ರ ಆಧರಿಸಿ ಅರಣ್ಯ ಒತ್ತುವರಿ ಪತ್ತೆ ಹಚ್ಚಿ ಪ್ರಕರಣ ದಾಖಲಿಸಬೇಕು. ಇಲ್ಲವಾದರೆ ಆಯಾ ವಲಯದ ಅರಣ್ಯಾಧಿಕಾರಿ (ಆರ್.ಎಫ್.ಓ)ಗಳನ್ನೇ ಹೊಣೆ ಮಾಡಲಾಗುವುದು ಎಂದು ಎಚ್ಚರಿಸಿದರು.
ಅರಣ್ಯ ಸಿಬ್ಬಂದಿಯೇ ಕಾಳಿಂಗ ಹಿಡಿಯಬೇಕು:
ಕಾಳಿಂಗ ಸರ್ಪಗಳು ತೋಟ, ಮನೆಯ ಬಳಿ ಬಂದ ಬಗ್ಗೆ ದೂರು ಬಂದರೆ ಅರಣ್ಯ ಇಲಾಖೆಯ ಸಿಬ್ಬಂದಿಯೇ ಅದನ್ನು ಹಿಡಿಯಬೇಕು. ಇದಕ್ಕಾಗಿ ಮಲೆನಾಡು ಮತ್ತು ಕೊಡಗು ಜಿಲ್ಲೆಯಲ್ಲಿನ ಪ್ರತಿ ವಲಯದಲ್ಲಿ ಕನಿಷ್ಠ 5 ಸಿಬ್ಬಂದಿಗೆ ಕಾಳಿಂಗ ಸರ್ಪ ರಕ್ಷಣೆಯ ತರಬೇತಿ ಕೊಡಿಸಬೇಕು. ಕಾಳಿಂಗ ಸರ್ಪಗಳ ರಕ್ಷಣೆಗೆ ಖಾಸಗಿ ಸಂಸ್ಥೆಗಳ ನೆರವು ಪಡೆಯಬಾರದು ಎಂದು ತಿಳಿಸಿದರು.
ಸೆಕ್ಷನ್ 4 ವರದಿ ಸಲ್ಲಿಸಲು ಸೂಚನೆ:
ಚಿಕ್ಕಮಗಳೂರು ಜಿಲ್ಲೆಯಲ್ಲಿ ಈಗಾಗಲೇ ಸೆಕ್ಷನ್ 4 ಆಗಿ ಸೆಕ್ಷನ್ 17 ಆಗದ ಎಷ್ಟು ಪ್ರಕರಣ ಇದೆ ಮತ್ತು ಯಾವ ಹಂತದಲ್ಲಿದೆ ಎಂಬ ಬಗ್ಗೆ ಒಂದು ವಾರದೊಳಗೆ ಸಚಿವಾಲಯಕ್ಕೆ ಮಾಹಿತಿ ನೀಡಬೇಕು. ಅಜ್ಜಂಪುರ ತಾಲೂಕಿನಲ್ಲಿ ವೃಕ್ಷೋದ್ಯಾನ ನಿರ್ಮಾಣಕ್ಕೆ ಜಾಗವನ್ನು ಗುರುತಿಸಿ 10 ದಿನಗಳ ಒಳಗಾಗಿ ಪ್ರಸ್ತಾವನೆ ಸಲ್ಲಿಸುವಂತೆ ಎಂದು ಅಧಿಕಾರಿಗಳಿಗೆ ತಿಳಿಸಿದರು.
ಜನಸ್ನೇಹಿಯಾಗಿ:
ಅರಣ್ಯ ಸಿಬ್ಬಂದಿ ಮತ್ತು ರೈತರ ನಡುವೆ ಸ್ನೇಹಭಾವ ಇರಬೇಕು. ಅನ್ನದಾತರೊಂದಿಗೆ ಮತ್ತು ಸಾರ್ವಜನಿಕರೊಂದಿಗೆ ಹೆಚ್ಚು ಜನಸ್ನೇಹಿಯಾಗಿ ವರ್ತಿಸಿ, ಅವರ ಕುಂದು ಕೊರತೆ ಆಲಿಸಿ, ಸಾಧ್ಯವಾದಷ್ಟು ಶೀಘ್ರ ಪರಿಹಾರ ಒದಗಿಸಿ. ಹಿರಿಯ ಅಧಿಕಾರಿಗಳು ಕ್ಷೇತ್ರಕ್ಕೆ ಮತ್ತು ವನ್ಯಜೀವಿ ಸಂಘರ್ಷ ಇರುವ ಕಾಡಿನಂಚಿನ ಗ್ರಾಮಗಳಿಗೆ ತೆರಳಿ ಜನಸಂಪರ್ಕ ಸಭೆಗಳನ್ನು ನಡೆಸಿ ಎಂದು ಸೂಚಿಸಿದರು.
ತರೀಕೆರೆ ಶಾಸಕ ಜಿಎಚ್ ಶ್ರೀನಿವಾಸ ಮತ್ತು ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.

