ವಿವಾಹೇತರ ಸಂಬಂಧ ಹಾಗೂ ಅಸಿಂಧು ವಿವಾಹಗಳಿಂದ ಜನಿಸಿದ ಮಕ್ಕಳಿಗೂ ತಮ್ಮ ಪೋಷಕರ ಪೂರ್ವಜರ ಆಸ್ತಿಯಲ್ಲಿ ಹಕ್ಕು ಇದೆ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಸುಪ್ರೀಂಕೋರ್ಟ್ ತನ್ನ ತೀರ್ಪಿನಲ್ಲಿ, ಇಂತಹ ಮಕ್ಕಳು ಶಾಸನಬದ್ಧವಾಗಿ ವಾರಸುದಾರತ್ವ ಪಡೆದಿರುತ್ತಾರೆ. ಆದರೆ, ‘ಹಿಂದೂ ಉತ್ತರಾಧಿಕಾರ ಕಾಯ್ದೆ’ ಅಡಿ ಮಾತ್ರವೇ ಈ ಹಕ್ಕು ಪ್ರತಿಪಾದಿಸಬಹುದಾಗಿದೆ ಎಂದು ಹೇಳಿದೆ.
ಅಸಿಂಧು ಮದುವೆಗಳಿಂದ ಅಥವಾ ವಿವಾಹೇತರ ಸಂಬಂಧಗಳಿಂದ ಜನಿಸಿದ ಮಕ್ಕಳಿಗೆ ಹಿಂದೂ ಅವಿಭಜಿತ ಕುಟುಂಬಗಳ ಪೋಷಕರ ಪೂರ್ವಜರ ಆಸ್ತಿಯಲ್ಲಿ ಯಾವುದೇ ಹಕ್ಕು ಇರುವುದಿಲ್ಲ ಎಂದು ಈ ಹಿಂದೆ ಸುಪ್ರೀಂಕೋರ್ಟ್ ಹೇಳಿತ್ತು. ಕೇವಲ ಪೋಷಕರ ಸ್ವಯಾರ್ಜಿತ ಆಸ್ತಿಯ ಹಕ್ಕನ್ನು ಮಾತ್ರ ಆ ಮಕ್ಕಳು ಹೊಂದಿರುತ್ತಾರೆ ಎಂದು ಅಭಿಪ್ರಾಯಪಟ್ಟಿತ್ತು. ಈ ತೀರ್ಪು ಹಿಂದೆ ನೀಡಿದ್ದ ನ್ಯಾಯಾಲಯದ ತೀರ್ಪನ್ನು ಸಂಪೂರ್ಣವಾಗಿ ಬದಲಾಯಿಸಿದೆ.
ಯಾವುದೇ ವ್ಯಕ್ತಿ ಮೃತಪಟ್ಟರೆ, ಆತ ಪಡೆದ ಆಸ್ತಿಯಲ್ಲಿ ಮೊದಲೇ ವಿಭಜನೆ ನಡೆದಿದ್ದರೆ, ಹಿಂದೂ ವಿವಾಹ ಕಾಯ್ದೆಯ ಸೆಕ್ಷನ್ 16ರ ಅಡಿ ಕಾನೂನಾತ್ಮಕವಾಗಿ ಹೊಂದಿರುವ ಮಕ್ಕಳು ಸೇರಿದಂತೆ ಎಲ್ಲಾ ಉತ್ತರಾಧಿಕಾರಿಗಳಿಗೆ ಆಸ್ತಿಯಲ್ಲಿ ಪಾಲು ಪಡೆಯಲು ಅರ್ಹತೆ ಇರುತ್ತದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಗೊಂದಲಕ್ಕೆ ತೆರೆ: ಕಾನೂನುಬಾಹಿರ ವಿವಾಹಗಳಿಂದ ಜನಿಸಿದ ಮಕ್ಕಳಿಗೂ ಪಿತ್ರಾರ್ಜಿತ ಆಸ್ತಿಯಲ್ಲಿ ಹಕ್ಕು ಇರುತ್ತದೆ ಎಂದು ಮದ್ರಾಸ್ ಹೈಕೋರ್ಟ್ ತೀರ್ಪು ನೀಡಿತ್ತು. ಆದರೆ, 2011 ರಲ್ಲಿ ಸುಪ್ರೀಂ ಕೋರ್ಟ್ ದ್ವಿಸದಸ್ಯ ಪೀಠ ಮದ್ರಾಸ್ ಹೈಕೋರ್ಟ್ ತೀರ್ಪನ್ನು ರದ್ದುಗೊಳಿಸಿತ್ತು. ಅಂತಹ ಮಕ್ಕಳು ಪೋಷಕರ ಸ್ವಯಾರ್ಜಿತ ಆಸ್ತಿ ಮೇಲೆ ಮಾತ್ರ ಹಕ್ಕು ಹೊಂದಿರುತ್ತಾರೆ ಎಂದು ಹೇಳಿತ್ತು. ಈ ತೀರ್ಪು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ನ ಉನ್ನತ ಪೀಠಕ್ಕೆ ಮೇಲ್ಮನವಿ ಸಲ್ಲಿಸಲಾಗಿತ್ತು. ಇದರ ವಿಚಾರಣೆಯನ್ನು ಪೂರ್ಣಗೊಳಿಸಿದ ಸುಪ್ರೀಂಕೋರ್ಟ್ ಗೊಂದಲಗಳಿಗೆ ತೆರೆ ಎಳೆದಿದೆ.

