ಬೆಂಗಳೂರು: ಶಾಲಾ ಮುಖ್ಯೋಪಾಧ್ಯಾಯರ ವಿರುದ್ಧ ಎಸ್‌ಸಿ/ ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಸೇರಿದಂತೆ ಹಲವು ಆರೋಪಗಳ ಅಡಿ ಸುಳ್ಳು ದೂರು ದಾಖಲಿಸಿದ್ದ ಶಿಕ್ಷಕನಿಂದ 1.5 ಲಕ್ಷ ರೂ. ವಸೂಲಿ ಮಾಡುವಂತೆ ಹೈಕೋರ್ಟ್ ಆದೇಶಿಸಿದೆ.
ಆಧಾರರಹಿತ ಆರೋಪ ಮಾಡಿ ಶಾಲೆಯ ಮುಖ್ಯ ಶಿಕ್ಷಕರ ವಿರುದ್ಧ ಹಲವು ದೂರುಗಳನ್ನು ದಾಖಲಿಸಿದ್ದ ಚಂದ್ರು ರಾಥೋಡ್ ಎಂಬುವರು ತಮ್ಮ ಕಾನೂನು ಹೋರಾಟಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ 1.5 ಲಕ್ಷ ರೂ. ನೆರವು ಪಡೆದಿದ್ದರು. ಆದರೆ, ದೂರುಗಳು ಕ್ಷುಲ್ಲಕವೆಂದು ಸಾಬೀತಾದ ಹಿನ್ನೆಲೆಯಲ್ಲಿ ನೆರವು ನೀಡಿದ್ದ ಹಣ ವಾಪಸ್ ಪಡೆಯವಂತೆ ಹೈಕೋರ್ಟ್ ಸರ್ಕಾರಕ್ಕೆ ಆದೇಶಿಸಿದೆ.
ಇದೇ ವೇಳೆ ಬಾಗಲಕೋಟೆ ಜಿಲ್ಲೆಯ ಮರಡಿ ಮಲ್ಲೇಶ್ವರ ಹೈಸ್ಕೂಲ್‌ನ ಮುಖ್ಯೋಪಾಧ್ಯಾಯರಾದ ಶಿವಲಿಂಗಪ್ಪ ಬಿ. ಕೆರಕಲಮಟ್ಟಿ ವಿರುದ್ಧ ದಾಖಲಿಸಿದ್ದ ಪ್ರಕರಣಗಳನ್ನು ನ್ಯಾಯಪೀಠ ರದ್ದುಗೊಳಿಸಿದೆ.
ಪೀಠ ತನ್ನ ತೀರ್ಪಿನಲ್ಲಿ, ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆ ಅಡಿ ಶಿಕ್ಷಕ ರಾಥೋಡ್ ಮುಖ್ಯೋಪಾಧ್ಯಾಯರ ವಿರುದ್ಧ ಕೇಸ್ ದಾಖಲಿಸಿದ್ದಾರೆ. ಇದಕ್ಕೆ ಸಮಾಜ ಕಲ್ಯಾಣ ಇಲಾಖೆ ಆರ್ಥಿಕ ನೆರವು ನೀಡಿದೆ. ಆದರೆ, ಇಂತಹ ನೆರವು ನೀಡುವ ಮೊದಲು ಸರ್ಕಾರ ನಿಜಕ್ಕೂ ಅವರು ದೌರ್ಜನ್ಯಕ್ಕೆ ಒಳಗಾಗಿದ್ದಾರೆಯೇ, ಹಿನ್ನೆಲೆ ಏನು ಎಂಬಿತ್ಯಾದಿಗಳ ಬಗ್ಗೆ ಪರಿಶೀಲನೆ ನಡೆಸಬೇಕಿತ್ತು ಎಂದು ನ್ಯಾಯಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ: 1988 ರ ಡಿಸೆಂಬರ್ 12 ರಂದು ರಾಥೋಡ್ ಶಿಕ್ಷಕರಾಗಿ ನೇಮಕಗೊಂಡಿದ್ದರು. ಆದರೆ, ದುರ್ನಡತೆ ಆರೋಪದಡಿ ಅವರನ್ನು 2012 ರಲ್ಲಿ ಸೇವೆಯಿಂದ ವಜಾಗೊಳಿಸಲಾಗಿತ್ತು. ಈ ವಿಚಾರವಾಗಿ ರಾಥೋಡ್ ಕಾನೂನು ಹೋರಾಟ ನಡೆಸಿದ್ದರು. ನಂತರ 2020ರಲ್ಲಿ ಹೈಕೋರ್ಟ್ ರಾಥೋಡ್ ಅವರನ್ನು ಮತ್ತೆ ಸೇವೆಗೆ ಸೇರಿಸಿಕೊಳ್ಳಬೇಕು ಹಾಗೂ ಹಿಂಬಾಕಿ ನೀಡಬೇಕು ಎಂದು ಸರ್ಕಾರಕ್ಕೆ ಆದೇಶಿಸಿತ್ತು.
ಆ ಬಳಿಕ, ಮುಖ್ಯೋಪಾಧ್ಯಾಯರು ತನ್ನನ್ನು ಮತ್ತೆ ಸೇವೆಗೆ ಸೇರಿಸಿಕೊಳ್ಳಲು 10 ಲಕ್ಷ ರೂಪಾಯಿ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಿ ರಾಥೋಡ್ ದೂರು ದಾಖಲಿಸಿದ್ದರು. ಆ ಬಳಿಕ 50 ಸಾವಿರ ಕೇಳಿದರೆಂದು ಮತ್ತೊಂದು ದೂರು ನೀಡಿದ್ದರು. 2020ರ ಜೂನ್ ನಲ್ಲಿ ತಮ್ಮ ಮೆಲೆ ದೌರ್ಜನ್ಯ ಎಸಗಿದ್ದಾರೆ ಎಂದು ಮೂರನೇ ದೂರು ದಾಖಲಿಸಿದ್ದರು. ಈ ಮೂರು ದೂರುಗಳನ್ನು ಬೇರೆ ಬೇರೆ ಪೊಲೀಸ್ ಠಾಣೆಗಳಲ್ಲಿ ದಾಖಲಿಸಿದ್ದರು ಮತ್ತು ಬೇರೆ ಬೇರೆಯವರನ್ನು ತನ್ನ ಪರ ಸಾಕ್ಷಿಗಳೆಂದು ನಮೂದಿಸಿದ್ದರು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ‘ರಾಥೋಡ್‌ಗೆ ಸುಳ್ಳು ಕೇಸುಗಳನ್ನು ದಾಖಲಿಸುವುದೇ ಒಂದು ಪ್ರವೃತ್ತಿಯಾಗಿದೆ. ಎಸ್‌ಸಿ/ಎಸ್‌ಟಿ ದೌರ್ಜನ್ಯ ತಡೆ ಕಾಯ್ದೆಯನ್ನು ದುರ್ಬಳಕೆ ಮಾಡಿಕೊಂಡು ಕೇಸ್ ದಾಖಲಿಸಿದ್ದಾರೆ ಮತ್ತು ಆ ಸುಳ್ಳು ಕೇಸುಗಳನ್ನು ನಡೆಸಲು ಸಮಾಜ ಕಲ್ಯಾಣ ಇಲಾಖೆಯಿಂದ ಆರ್ಥಿಕ ನೆರವು ಪಡೆದುಕೊಂಡಿದ್ದಾರೆ ‘ ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
(CRL.P No. 100396 of 2022)

