ಗ್ರಾಮ ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ತಮ್ಮ ಹುದ್ದೆಗೆ ರಾಜೀನಾಮೆ ನೀಡುವುದು, ಅನರ್ಹಗೊಳ್ಳುವುದು ಮತ್ತು ಮರಣವನ್ನಪ್ಪಿದಲ್ಲಿ ಹುದ್ದೆಗೆ ಆಯ್ಕೆಯಾದವರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲು ಕನಿಷ್ಠ 15 ತಿಂಗಳು ಕಳೆದಿರಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಅಲ್ಲದೆ, ಪಂಚಾಯತ್‌ರಾಜ್‌ನಂತಹ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅವಿಶ್ವಾಸವೆಂಬ ಅಸ್ತ್ರವು ಅಧಿಕಾರ ಕೂಗುಮಾರಿಗಳಿಂದ ಅಪಾಯಕ್ಕೆ ಸಿಲುಕಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಯಲಹಂಕ ತಾಲೂಕಿನ ಬಾಗಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಪ್ರೀತಿ ಮುನೇಗೌಡ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ವಿಭಾಗೀಯ ಪೀಠ, ಈ ಆದೇಶ ನೀಡಿದೆ.
ಅಲ್ಲದೆ, ಅನೈತಿಕ ರಾಜಕೀಯ ಹಿತಾಸಕ್ತಿ ಈಡೇರಿಸುವುದು ಮತ್ತು ಕ್ಷುಲ್ಲಕ ಕಾರಣಗಳಿಗಾಗಿ ಅತೃಪ್ತ ಗುಂಪುಗಳಿಂದ ಅವಿಶ್ವಾಸ ಗೊತ್ತುವಳಿ ನಿರ್ಣಯ ಮಂಡಿಸುವ ಪ್ರವೃತ್ತಿಯನ್ನು ನಿಯಂತ್ರಿಸುವುದು ಪಂಚಾಯತ್ ರಾಜ್ ಕಾಯ್ದೆಯ ಸೆಕ್ಷನ್ 49(2)ರ ಮೂಲ ಉದ್ದೇಶವಾಗಿದೆ. ಹೀಗಾಗಿ, 15 ತಿಂಗಳ ಕಾಲ ಅವಿಶ್ವಾಸ ನಿರ್ಣಯ ಮಂಡಿಸುವುದಕ್ಕೆ ಅವಕಾಶವಿರುವುದಿಲ್ಲ. ಆದ್ದರಿಂದ ಅಧ್ಯಕ್ಷರ ಚುನಾವಣೆ ದಿನಾಂಕದಿಂದ ಮೊದಲ 15 ತಿಂಗಳವರೆಗೂ ಅವಿಶ್ವಾಸ ನಿರ್ಣಯ ಮಂಡಿಸುವುದಕ್ಕೆ ನಿರ್ಬಂಧವಿರಲಿದೆ ಎಂದು ಹೈಕೋರ್ಟ್ ತೀರ್ಪಿನಲ್ಲಿ ಹೇಳಿದೆ.
ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದ ಮಂಡಿಸಿ, ಕಾಯ್ದೆಯ ನಿಯಮಗಳ ಅನುಸಾರ 15 ತಿಂಗಳಿಗೆ ಮುನ್ನ ಅವಿಶ್ವಾಸ ನಿರ್ಣಯ ಮಂಡಿಸುವುದಕ್ಕೆ ಅವಕಾಶವಿಲ್ಲ. ಆದರೆ, ಈ ಪ್ರಕರಣದಲ್ಲಿ ಅರ್ಜಿದಾರರು ಅಧ್ಯಕ್ಷರಾಗಿ ಆಯ್ಕೆಯಾದ ಎಂಟು ತಿಂಗಳೊಳಗೆ ಅವಿಶ್ವಾಸ ನಿರ್ಣಯ ಮಂಡಿಸಲಾಗಿದೆ. ಅದನ್ನು ಪರಿಗಣಿಸುವುದು ಮತ್ತು ಚುನಾವಣಾ ಸಭೆಗೆ ನೋಟಿಸ್ ನೀಡುವುದು ನಿಯಮ ಬಾಹಿರ, ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
