ಬೆಂಗಳೂರು: ಪ್ರಾಜೆಕ್ಟ್ ವಾಕಲೂರು ಅಭಿಯಾನದ ಅಂಗವಾಗಿ 6 ನೇ ಆವೃತಿಯ ಫುಟ್‌ಪಾತ್ ವಾಕ್ ಶನಿವಾರ ಯಲಹಂಕದಲ್ಲಿ ನಡೆಯಿತು. ಉತ್ತರ ನಗರ ಪಾಲಿಕೆಯ ಈ ಅಭಿಯಾನಕ್ಕೆ 100 ಕ್ಕೂ ಹೆಚ್ಚು ನಡಿದಾರರು ಶ್ಲಾಘಿಸಿ, ನಮ್ಮ ಫುಟ್‌ಪಾತ್‌ಗಳು ಬೆಂಗಳೂರಿನಲ್ಲಿಯೇ ಅತ್ಯುತ್ತಮ ಎಂದು ವರ್ಣಿಸಿದರು.
10 ಕಿ.ಮೀ ಫುಟ್‌ಪಾತ್ ವಾಕ್ ಗೆ ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಅವರು ಹಸಿರು ನಿಶಾನೆ ತೋರಿ ಚಾಲನೆ ನೀಡಿದರು. ಉತ್ತರ ನಗರ ಪಾಲಿಕೆಯ ಆಯುಕ್ತ ಪೊಮ್ಮಲ ಸುನಿಲ್ ಕುಮಾರ್ ಅವರು ಹೆಚ್ಚುವರಿ ಆಯುಕ್ತ ಮೊಹಮ್ಮದ್ ನಯೀಮ್ ಮೋಮಿನ್, ಜಂಟಿ ಆಯುಕ್ತೆ ಪಲ್ಲವಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಇನ್ನು ಈ ವಾಕ್ ನಲ್ಲಿ ಸ್ಥಳೀಯ ನಿವಾಸಿಗಳು, ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿಗಳು ಹಾಗೂ ನಗರದ ವಿವಿಧ ಭಾಗಗಳಿಂದ ಬಂದಿದ್ದ ವಿವಿಧ ವಯೋಮಾನದ 100 ಕ್ಕೂ ಹೆಚ್ಚು ನಡಿದಾರರು ಬಂದಿದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಪೊಮ್ಮಲ ಸುನಿಲ್ ಕುಮಾರ್, ನಾಗರಿಕರು, ದಿ ಅಗ್ಲಿ ಇಂಡಿಯನ್ ತಂಡ, ನಗರ ಪಾಲಿಕೆ ಸಿಬ್ಬಂದಿಗಳ ಜಂಟಿ ಪ್ರಯತ್ನ ಮೆಚ್ಚುವಂತದ್ದಾಗಿದೆ. ಇಂತಹ ಸಹಕಾರಿ ಕಾರ್ಯಗಳು ಹೆಚ್ಚು ಜನಪರ ಕಾಳಜಿಯನ್ನು ಪ್ರಚುರಪಡಿಸಿ ಸ್ವಚ್ಛ ಬೆಂಗಳೂರನ್ನು ನಿರ್ಮಿಸಲು ಸಹಕಾರಿಯಾಗಲಿದೆ ಎಂದು ಅಭಿಪ್ರಾಯಪಟ್ಟರು.
ಪ್ರಾಜೆಕ್ಟ್ ವಾಕಲೂರು ಅಭಿಯಾನದ ಸಂಯೋಜಕ ಅರುಣ್ ಪೈ ಮಾತನಾಡಿ ಅಧಿಕಾರಿಗಳೊಂದಿಗೆ ನಾಗರಿಕರು ಸಹಕರಿಸಿದಲ್ಲಿ ಪರಿಣಾಮಕಾರಿ ಮತ್ತು ದೀರ್ಘಕಾಲದ ಫಲಿತಾಂಶಗಳು ದೊರೆಯುತ್ತವೆ ಎಂದು ಹೇಳಿದರು.
ಫುಟ್‌ಪಾತ್ ವಾಕ್ ಸಾಗಿದ ಮಾರ್ಗ:
10 ಕಿ.ಮೀ ಫುಟ್‌ಪಾತ್ ವಾಕ್ ದೊಡ್ಡಬಳ್ಳಾಪುರ ಮುಖ್ಯರಸ್ತೆಯ ಶೇಷಾದ್ರಿಪುರಂ ಕಾಲೇಜಿನಿಂದ ಪ್ರಾರಂಭವಾಗಿ, ರೇಡಿಯಲ್ 1 ನೇ ಎ ಮುಖ್ಯರಸ್ತೆ, 16 ನೇ ಬಿ ಕ್ರಾಸ್, ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆಯಲ್ಲಿ ಸಾಗಿತು. ಈ ಅಭಿಯಾನದ ಮುಖ್ಯ ಉದ್ದೇಶ ನಾಗರಿಕರು ಯಾವುದೇ ಭಯಭೀತಿ. ಅಡ್ಡಿ ಆತಂಕಗಳನ್ನು ಎದುರಿಸದೆ ನಡೆಯುವುದಾಗಿತ್ತು. ಪಾದಚಾರಿಗಳು ಅಡೆತಡೆಗಳಿದ್ದರೆ ಫೋಟೋ ವಿಡಿಯೋ ಮಾಡಿ ಪಾಲಿಕೆಗೆ ದೂರನ್ನು ನೀಡಿದರೆ ಅದನ್ನು ತಕ್ಷಣ ಸರಿಪಡಿಸಲಾಗುವುದು ಎನ್ನುವುದನ್ನು ತಿಳಿಸುವುದಾಗಿತ್ತು. ಪ್ರಮುಖವಾಗಿ ಇಂದಿನ ವಾಕ್ ನಲ್ಲಿ ಪ್ರತಿ 1 ಕಿ.ಮೀ. ನಂತರ ಪಾದಚಾರಿಗಳು ಎಷ್ಟು ಅಡೆತಡೆಗಳನ್ನು ಎದುರಿಸಿದರು ಎನ್ನುವದನ್ನು ವಿಚಾರಿಸಿದ್ದು ಮೆಚ್ಚುಗೆಗೆ ಪಾತ್ರವಾಯಿತು.
