News

ಬ್ರಾಹ್ಮಣರ ಅಭಿವೃದ್ಧಿಗೆ ಕಾಂಗ್ರೆಸ್ ಸರ್ಕಾರ ಸದಾ ಸ್ಪಂದಿಸುತ್ತಿದೆ: ದಿನೇಶ್ ಗುಂಡೂರಾವ್

Share It

ಮೈಸೂರು: ಬ್ರಾಹ್ಮಣರಿಗೆ ಕಾಂಗ್ರೆಸ್ ಸರ್ಕಾರ ಸ್ಪಂದಿಸುವುದಿಲ್ಲ ಎನ್ನುವ ಭಾವನೆ ಸ್ವಲ್ಪಮಟ್ಟದಲ್ಲಿ ಇದೆ. ಆದರೆ ಅದು ಸತ್ಯಕ್ಕೆ ದೂರವಾಗಿದೆ. ಮಂಡ್ಯದಲ್ಲಿ ಬ್ರಾಹ್ಮಣ ಸಂಘದ ಕಟ್ಟಡಕ್ಕೆ 35 ಲಕ್ಷ ಮತ್ತು ಬೆಳಗಾವಿ ಗಾಯತ್ರಿ ಭವನಕ್ಕೆ 1.5 ಕೋಟಿ ಹಣವನ್ನು ನಾನೇ ಮುಂದೆ ನಿಂತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಕೊಡಿಸಿದ್ದೇನೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

ಶನಿವಾರ ಮೈಸೂರಿನಲ್ಲಿ ಬ್ರಾಹ್ಮಣ ಅಭಿವೃದ್ಧಿ ಮಂಡಳಿಯ ವಿಶ್ಮಾಮಿತ್ರ ಪ್ರತಿಭಾ ಪುರಸ್ಕಾರ ಮತ್ತು ಸಹಾಯಧನ ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಅರ್ಚಕರ ತಸ್ತೀಕ್ ಹಣ ಮೂರು ಬಾರಿ ಹೆಚ್ಚಳ ಮಾಡಿದ್ದು ಸಿದ್ದರಾಮಯ್ಯನವರು. ಬ್ರಾಹ್ಮಣರ ಸಮಸ್ಯೆ ಆಲಿಸಲು ಅಭಿವೃದ್ಧಿ ಮಂಡಳಿ ಸ್ಥಾಪಿಸಬೇಕು ಎಂದು ನಾನು, ದೇಶಪಾಂಡೆ, ರಮೇಶ್ ಕುಮಾರ್ ಅವರು ಸಿದ್ದರಾಮಯ್ಯ ಅವರಲ್ಲಿ ಕೇಳಿಕೊಂಡಾಗ ಮರು ಮಾತಾಡದೇ ಇದು ಆಗಬೇಕಾದ ಕೆಲಸ ಮಾಡೋಣ ಎಂದು ಸಕಾರಾತ್ಮಕವಾಗಿ ಸ್ಪಂದಿಸಿದ್ದನ್ನು ಈಗ ಸ್ಮರಿಸಬೇಕಾಗುತ್ತದೆ. ಈ ಮಂಡಳಿಯಿಂದ ಎಷ್ಟೋ ಜನರಿಗೆ ಅನುಕೂಲ ಆಗುತ್ತಿದೆ ಎಂದು ತಿಳಿಸಿದರು.

ಪ್ರತಿಭಾ ಪುರಸ್ಕಾರ, ಕಿರು ಸಾಲ ಯೋಜನೆ, ಉನ್ನತ ಶಿಕ್ಷಣಕ್ಕೆ ಸಹಾಯ ಹೀಗೆ ವಿವಿಧ ಕಾರ್ಯಕ್ರಮಕ್ಕೆ ಅನುಕೂಲವಾಗಿದೆ. ಬ್ರಾಹ್ಮಣರು ಅಂದರೆ ಮುಂದುವರಿದ ಜನಾಂಗ ಎಂಬ ಭಾವನೆ ವ್ಯಾಪಕವಾಗಿದೆ. ಆದರೆ ಅವರಲ್ಲೂ ಬಡತನ ಇದೆ, ಹಲವಾರು ತೊಂದರೆಗಳಿವೆ. ಬ್ರಾಹ್ಮಣರ ಸಮಸ್ಯೆಯನ್ನು ಸರ್ಕಾರಕ್ಕೆ ಮುಟ್ಟಿಸಲು ಅಭಿವೃದ್ಧಿ ಮಂಡಳಿ ನೆರವಾಗುತ್ತಿದೆ. ಈ ಸರ್ಕಾರದಲ್ಲಿಯೂ ರಾಮಲಿಂಗರೆಡ್ಡಿಯವರು ಮುಜರಾಯಿ ಇಲಾಖೆ ಮೂಲಕ ಬ್ರಾಹ್ಮಣರಿರೆ ಹಲವಾರು ಸವಲತ್ತುಗಳನ್ನು ನೀಡಿದ್ದಾರೆ. ನಮ್ಮ ಸರ್ಕಾರದ ಎಲ್ಲ ಯೋಜನೆಗಳು ಎಲ್ಲ ವರ್ಗದ ಬಡವರಿಗೆ ಅನುಕೂಲವಾಗಲಿ ಎಂದು ರೂಪಿಸಿದ್ದೇವೆ ಎಂದರು.

ಬ್ರಾಹ್ಮಣ ಅಭಿವೃದ್ಧಿ ಮಂಡಳಿಗೆ ಪ್ರತಿ ವರ್ಷ ಅನುದಾನ ನೀಡುತ್ತಿದ್ದೇವೆ. ಹಿಂದಿನ ಸರ್ಕಾರಗಳು ಎಷ್ಟು ಅನುದಾನ ನೀಡಿದ್ದವು ಎನ್ನುವುದನ್ನೂ ಪರೀಕ್ಷಿಸಿ. ರಾಜಕಾರಣ ಏನೆ ಇರಲಿ ಕಾಂಗ್ರೆಸ್ ಸರ್ಕಾರ ಬ್ರಾಹ್ಮಣರಿಗೆ ಸಹಾಯ ಮಾಡಲ್ಲ ಎನ್ನುವ ಭಾವನೆ ಬಿಡಿ. ಬಡವರ ಪರ, ಎಲ್ಲರನ್ನೂ ಜೋಡಿಸುವ ಕೆಲಸ ನಮ್ಮ ಸರ್ಕಾರ ಮಾಡುತ್ತಿದೆ ಎಂದು ದಿನೇಶ್ ಗುಂಡೂರಾವ್ ಹೇಳಿದರು.


Share It

You cannot copy content of this page