News

ಯಾರಿಗೂ ಹೆದರುವ, ಜಗ್ಗುವ ಮಾತೇ ಇಲ್ಲ: ಡಿ.ಕೆ ಶಿವಕುಮಾರ್

Share It

ಬೆಂಗಳೂರು: ಈ ದೇಶದ ಪ್ರಧಾನಮಂತ್ರಿ, ಗೃಹ ಸಚಿವರಿಗೆ ಹೆದರದೇ ಜೈಲಿಗೆ ಹೋಗಿ ಬಂದಿರುವವನು ನಾನು. ಯಾರಿಗೂ ಹೆದರುವ, ಜಗ್ಗುವ ಮಾತೇ ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದರು.

ಕರ್ನಾಟಕ ಅಪಾರ್ಟ್ಮೆಂಟ್ (ಮಾಲೀಕತ್ವ ಮತ್ತು ನಿರ್ವಹಣೆ) ವಿಧೇಯಕ 2025 ಕುರಿತು ಅಪಾರ್ಟ್ಮೆಂಟ್ ಅಸೋಸಿಯೇಷನ್ ಗಳ ಪ್ರತಿನಿಧಿಗಳೊಂದಿಗೆ ಅವರು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಶನಿವಾರ ಸಂವಾದ ನಡೆಸಿ ಮಾತನಾಡಿದ ಅವರು, ಕಿರಣ್ ಹೆಬ್ಬಾರ್ ಎಂಬಾತ ತಾನು ಅಂಪಾರ್ಟ್ಮೆಂಟ್ ಮಾಲೀಕ ಎಂದು ಪತ್ರ ಬರೆದಿದ್ದು, ನಮಗೆ ಬೆದರಿಕೆ ಹಾಕಲು ಮುಂದಾಗಿದ್ದಾನೆ. ನಮ್ಮಲ್ಲಿ ಬಹುದೊಡ್ಡ ಮತದಾರರ ಸಮೂಹವಿದ್ದು, ಬೆಂಗಳೂರಿನ 1.30 ಕೋಟಿ ಮತದಾರರ ಮೇಲೆ ಪರಿಣಾಮ ಬೀರಬಲ್ಲೆವು. ಸರ್ಕಾರಗಳು ನಮ್ಮನ್ನು ನಿರ್ಲಕ್ಷಿಸಿದ್ದು, ಆಡಳಿತ ಪಕ್ಷ ನಮ್ಮ ಮನವಿ ನಿರ್ಲಕ್ಷಿಸಿದರೆ ಸದ್ಯದಲ್ಲೇ ಜಿಬಿಎ ಚುನಾವಣೆ ಬರುತ್ತಿದೆ ಎಂದು ಎಚ್ಚರಿಕೆ ನೀಡಿದ್ದಾನೆ. ಯಾರೇ ಆಗಲಿ ಯಾರ ಜೊತೆ ಮಾತನಾಡುತ್ತಿದ್ದೇವೆ ಎಂಬುದರ ಬಗ್ಗೆ ಕನಿಷ್ಠ ಪರಿಜ್ಞಾನ ಇಟ್ಟುಕೊಳ್ಳಬೇಕು ಎಂದು ಕಿಡಿಕಾರಿದರು.

ನಾನು ನಿಮ್ಮನ್ನು ಕರೆದು ಅಭಿಪ್ರಾಯ ಪಡೆಯುವ ಅಗತ್ಯವಿರಲಿಲ್ಲ. ನಾವು ನಿಮ್ಮ ಮೇಲೆ ಪ್ರೀತಿ ವಿಶ್ವಾಸವಿಟ್ಟು ಕರೆದಿದ್ದೇವೆ. ಗಾಂಧೀಜಿ ಒಂದು ಮಾತು ಹೇಳಿದ್ದಾರೆ. ನಿಮ್ಮನ್ನು ನೀವು ನಿಯಂತ್ರಿಸಬೇಕಾದರೆ ನಿಮ್ಮ ಮೆದುಳನ್ನು ಪ್ರಯೋಗಿಸಿ, ಬೇರೆಯವರನ್ನು ನಿಯಂತ್ರಿಸಬೇಕಾದರೆ ನಿಮ್ಮ ಹೃದಯವನ್ನು ಪ್ರಯೋಗಿಸಿ. ನಾನು ನನ್ನ ಹೃದಯದಿಂದ ಜನರ ಮನಸ್ಸು ಗೆದ್ದಿದ್ದೇನೆ. ನಾನು ಸತತವಾಗಿ 8 ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದೇನೆ. ಕಳೆದ ಚುನಾವಣೆಯಲ್ಲಿ ನಾನು ಪ್ರಚಾರಕ್ಕೆ ಹೋಗಲಿಲ್ಲ. ವಿರೋಧ ಪಕ್ಷದ ನಾಯಕ ಅಶೋಕ್ ನನ್ನ ವಿರುದ್ಧ ಸ್ಪರ್ಧಿಸಿದ್ದರೂ ಜನ ನನಗೆ 1.23 ಲಕ್ಷ ಮತಗಳ ಅಂತರದಲ್ಲಿ ಗೆಲ್ಲಿಸಿದ್ದಾರೆ. ಇದು ರಾಜ್ಯದ ಇತಿಹಾಸದಲ್ಲೇ ಅತಿ ದೊಡ್ಡ ಅಂತರದ ಗೆಲುವಾಗಿದೆ ಎಂದು ತಿಳಿಸಿದರು.

ಸರ್ಕಾರ ಅಪಾರ್ಟ್ಮೆಂಟ್ ನಿವಾಸಿಗಳ ಪರ:

ಈ ಸರ್ಕಾರ ಅಪಾರ್ಟ್ಮೆಂಟ್ ನಿವಾಸಿಗಳು ಹಾಗೂ ಮನೆ ಖರೀದಿದಾರರ ಪರವಾಗಿ ನಿಲ್ಲುತ್ತದೆ. ಈ ಕಾರಣಕ್ಕೆ ಕರ್ನಾಟಕ ಅಪಾರ್ಟ್ಮೆಂಟ್ ಮಾಲೀಕತ್ವ ಮತ್ತು ನಿರ್ವಹಣೆ ವಿಧೇಯಕ 2025ಕ್ಕೆ ಸಂಬಂಧಿಸಿದಂತೆ ಅಪಾರ್ಟ್ಮೆಂಟ್ ಅಸೋಸಿಯೇಷನ್ ಗಳ ಪ್ರತಿನಿಧಿಗಳ ಅಭಿಪ್ರಾಯ ಸಂಗ್ರಹಿಸುತ್ತಿದ್ದೇವೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದರು.

ಈ ಸರ್ಕಾರ ನನ್ನದಲ್ಲ, ನಿಮ್ಮದು:

ಯಾರೆಲ್ಲಾ ಈ ಸಂವಾದ ಕಾರ್ಯಕ್ರಮದಲ್ಲಿ ನಿಮ್ಮ ಸಲಹೆ ನೀಡಲು ಸಾಧ್ಯವಾಗಿಲ್ಲವೋ ಅವರುಗಳು gbasuggesion@gmail.com ಗೆ ನಿಮ್ಮ ಮೇಲ್ ಮಾಡಬಹುದಾಗಿದೆ. 10 ದಿನಗಳಲ್ಲಿ ನಿಮ್ಮ ಸಲಹೆ ಕಳುಹಿಸಿ. ನಾನು ಎಲ್ಲವನ್ನು ಪರಿಶೀಲಿಸುತ್ತೇನೆ. ನಿಮ್ಮ ಸಲಹೆ, ಸಮಸ್ಯೆಗಳನ್ನು ನಾನು ಆಲಿಸಿದ್ದೇನೆ. ನಿಮ್ಮ ಸಲಹೆಗಳು ಅತ್ಯುತ್ತಮವಾಗಿವೆ. ನಿಮ್ಮ ಸಮಸ್ಯೆಗಳ ಬಗ್ಗೆ ಅರಿವಿದೆ. ನಾನೂ ಅಪಾರ್ಟ್ ಮೆಂಟ್ ಗಳನ್ನು ಹೊಂದಿದ್ದೇನೆ. ನಿಮ್ಮ ಜೊತೆ ನಿಂತು, ಸಮಸ್ಯೆ ಪರಿಹರಿಸಲು ಬದ್ಧನಾಗಿದ್ದೇನೆ. ಈ ಸರ್ಕಾರ ನನ್ನದಲ್ಲ, ನಿಮ್ಮದು ಎಂದು ತಿಳಿಸಿದರು.

ಜಿಬಿಎ ಚುನಾವಣೆಯಲ್ಲಿ ಸಹಾಯ ಬಯಸುತ್ತೇನೆ:

ನಾನು ನಿಮಗೆ ಸಹಾಯ ಮಾಡುವುದರ ಜೊತೆಗೆ ನಿಮ್ಮ ಸಹಾಯವನ್ನು ಮತಗಳ ಮೂಲಕ ಬಯಸುತ್ತೇನೆ. ಜಿಬಿಎ ಚುನಾವಣೆಯಲ್ಲಿ ನೀವು ನಮ್ಮ ಜತೆ ನಿಲ್ಲಿ ಎಂದು ಕೋರುತ್ತೇನೆ. ನಿಮ್ಮ ಮೇಲೆ ನಂಬಿಕೆ ಇಟ್ಟಿದ್ದೇನೆ. ಅದಕ್ಕಾಗಿ ಯಾರೂ ಜಾರಿಗೆ ತರದ ಕಾನೂನನ್ನು ಜಾರಿಗೆ ತರಲು ಮುಂದಾಗಿದ್ದೇನೆ. ನನಗೆ ನಿರಾಸೆ ಮಾಡಬೇಡಿ ಎಂದು ತಿಳಿಸಿದರು.

ಬೆಂಗಳೂರಿನಲ್ಲಿ ಶಾಶ್ವತ ಹೆಜ್ಜೆಗುರುತು ಬಿಟ್ಟು ಹೋಗುವ ಆಸೆ:

ಬಹಳ ಉತ್ಸಾಹದಿಂದ ಬೆಂಗಳೂರು ನಗರದ ಇಲಾಖೆ ಜವಾಬ್ದಾರಿ ವಹಿಸಿಕೊಂಡೆ. ಬೆಂಗಳೂರಿನಲ್ಲಿ ಬದಲಾವಣೆ ತರಬೇಕು, ನನ್ನ ಕೆಲಸಗಳ ಮೂಲಕ ನನ್ನ ಹೆಸರು ಶಾಶ್ವತವಾಗಿ ಉಳಿಯಬೇಕು, ಶಾಶ್ವತ ಹೆಜ್ಜೆ ಗುರುತು ಬಿಟ್ಟು ಹೋಗುವ ಆಸೆ ನನಗೆ ಇದೆ. ಬೆಂಗಳೂರಿನ ಸಮಸ್ಯೆ ನಿವಾರಿಸಿ, ನಗರದ ಸ್ವರೂಪ ಬದಲಿಸಲು, ಅನೇಕ ಯೋಜನೆ ಕೈಗೊಂಡಿದ್ದೇವೆ. ಬಹಳ ಅಧ್ಯಯನ ಮಾಡಿ 2 ಟನಲ್ ರಸ್ತೆ ನಿರ್ಮಾಣಕ್ಕೆ ಮುಂದಾಗಿದ್ದೇನೆ, 130 ಕಿ.ಮೀ ಉದ್ದದ ಬೆಂಗಳೂರು ಬಿಸಿನೆಸ್ ಕಾರಿಡಾರ್ ಅನ್ನು 26 ಸಾವಿರ ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುತ್ತಿದ್ದೇವೆ. ಯಾರು ಏನೇ ಟೀಕೆ ಮಾಡಿದರೂ ನಾವು ಈ ಯೋಜನೆ ಮಾಡೇ ಮಾಡುತ್ತೇವೆ. ಪ್ರಧಾನಮಂತ್ರಿಗಳು ಹಾಗೂ ಕೇಂದ್ರ ಸಚಿವ ನಿತೀನ್ ಗಡ್ಕರಿ ಅವರು ಈ ಯೋಜನೆ ಮುಂದುವರಿಸುವಂತೆ ನನಗೆ ತಿಳಿಸಿದ್ದಾರೆ ಎಂದರು.

ಸಂಚಾರ ದಟ್ಟಣೆ ನಿವಾರಣೆಗೆ ಸಾಕಷ್ಟು ಅಧ್ಯಯನ:

ಬೆಂಗಳೂರಿನ ಸಂಚಾರ ದಟ್ಟಣೆ ನಿವಾರಣೆಗೆ ನಾನು ಸಾಕಷ್ಟು ಅಧ್ಯಯನ ನಡೆಸಿದ ನಂತರ ಟನಲ್ ರಸ್ತೆ ಉತ್ತಮ ಆಯ್ಕೆಯಾಗಿದೆ ಎಂದು ಪರಿಗಣಿಸಿದ್ದೇನೆ. ರಸ್ತೆ ಅಗಲೀಕರಣಕ್ಕೆ ನಾವು ಯಾವುದೇ ಕಟ್ಟಡ ಕೆಡವಲು ಆಗುವುದಿಲ್ಲ. 2013ರ ಕಾಯ್ದೆ ಅನುಸಾರ ಆಸ್ತಿ ಮೌಲ್ಯದ ದುಪ್ಪಟ್ಟು ಪರಿಹಾರ ನೀಡಬೇಕು. ಈಗ ಬೆಂಗಳೂರಿನ ಆಸ್ತಿ ಮೌಲ್ಯ ಹೆಚ್ಚಾಗಿದೆ. ಟನಲ್ ಯೋಜನೆ ಜೊತೆಗೆ 40 ಕಿ.ಮೀ ಡಬಲ್ ಡೆಕ್ಕರ್ ಮೆಲ್ಸೇತುವೆ, ಭಾರತದಲ್ಲಿ ಅತಿ ದೊಡ್ಡ ಡಬಲ್ ಡೆಕ್ಕರ್ ಆಗಲಿದೆ. 117 ಕಿ.ಮೀ ಹೊಸ ಮೇಲ್ಸೇತುವೆಗಳನ್ನು ನಿರ್ಮಾಣ ಮಾಡಲಾಗುತ್ತಿದೆ. 300 ಕಿ.ಮೀ ನಷ್ಟು ಬಫರ್ ರಸ್ತೆ ನಿರ್ಮಾಣ ಮಾಡುತ್ತಿದ್ದೇವೆ. 50×80 ವಿಸ್ತೀರ್ಣದವರೆಗಿನ ನಿವೇಶನದಲ್ಲಿ ಹೊಸದಾಗಿ ಕಟ್ಟಡ ನಿರ್ಮಾಣ ಮಾಡುವವರಿಗೆ ಕಟ್ಟಡ ನಕ್ಷೆ ಸುಲಭವಾಗಿ ಅನುಮತಿ ಸಿಗುವಂತೆ ಮಾಡಲು ನಂಬಿಕೆ ನಕ್ಷೆ ಯೋಜನೆ ಜಾರಿಗೆ ತಂದಿದ್ದೇವೆ. ಪ್ರೀಮಿಯಮ್ ಎಫ್ಎಆರ್ ಜಾರಿಗೆ ತರಲಾಗಿದೆ. ಇ ಖಾತಾ ವ್ಯವಸ್ಥೆ ಅನುಷ್ಠಾನಗೊಳಿಸಲಾಗಿದೆ. ಹೀಗೆ ಬೆಂಗಳೂರಿನ ಪ್ರಗತಿಗೆ ಅನೇಕ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದಕ್ಕೆ ಸಮಯದ ಅಗತ್ಯವಿದೆ. ಒಂದೇ ದಿನದಲ್ಲಿ ಮ್ಯಾಜಿಕ್ ಮಾಡಲು ಆಗುವುದಿಲ್ಲ. ಇದಕ್ಕೆ ನಿರಂತರ ಪರಿಶ್ರಮ, ಬದ್ಧತೆ, ತಾಳ್ಮೆ ಇರಬೇಕು ಎಂದು ಹೇಳಿದರು.

ನಮ್ಮನ್ನು ಆಟವಾಡಿಸಲು ಸಾಧ್ಯವಿಲ್ಲ:

ನಿಮ್ಮ ಸೇವೆ ಮಾಡಿದರೆ ನಮಗೆ ಮತ ಹಾಕುತ್ತೀರಿ ಎಂಬುದಷ್ಟೇ ನಮ್ಮ ಆಸೆಯಾಗಿದೆ. ಅದನ್ನು ಬಿಟ್ಟು ನಿಮ್ಮನ್ನು ಬೇರೆ ಏನು ಕೇಳುತ್ತೇವೆ? ನಾವು ಕೊಟ್ಟ ಮಾತಿನಂತೆ ಪಂಚ ಗ್ಯಾರಂಟಿ ಯೋಜನೆ ಜಾರಿ ಮಾಡಿದ್ದೇವೆ. ಅಪಾರ್ಟ್ ಮೆಂಟ್ ನಿವಾಸಿಗಳಿಗೆ 200 ಯೂನಿಟ್ ವರೆಗೂ ಉಚಿತ ವಿದ್ಯುತ್ ನೀಡಿದ್ದೇವೆ. ಈ ಯೋಜನೆ ಜಾರಿ ಅಸಾಧ್ಯ ಎಂದು ಪ್ರಧಾನಮಂತ್ರಿಗಳು ಹೇಳಿದ್ದರು. ಆದರೆ ಇಂದು ಬೇರೆ ರಾಜ್ಯಗಳಲ್ಲಿ ನಮ್ಮ ಯೋಜನೆಗಳೇ ಅವರನ್ನು ಕಾಪಾಡುತ್ತಿದೆ. ಕಾವೇರಿ 5ನೇ ಹಂತದ ಕುಡಿಯುವ ನೀರಿನ ಯೋಜನೆ ಜಾರಿ ಮಾಡಿ, ಮೊದಲು ನೀರಿನ ಸಂಪರ್ಕ ಪಡೆಯಿರಿ, ಒಂದು ವರ್ಷ ತಡವಾಗಿ ಬೇಕಾದರೆ ಹಣ ಪಾವತಿಸಿ ಎಂದು ಕಾಲಾವಕಾಶವನ್ನು ನೀಡಿದ್ದೇವೆ. ಆರನೇ ಹಂತದ ಯೋಜನೆಗೆ ಯೋಜನೆ ರೂಪಿಸಿದ್ದೇವೆ. ಇದನ್ನು ನೀವುಗಳು ಅರಿಯಬೇಕು. ಎಲ್ಲರನ್ನು ಆಟವಾಡಿಸಿದಂತೆ ನಮ್ಮನ್ನು ಆಟವಾಡಿಸಲು ಸಾಧ್ಯವಿಲ್ಲ ಎಂದು ಹೇಳಿದರು.

ಬೆದರಿಸಿದರೆ ನಡೆಯುತ್ತದೆ ಎಂಬ ಭ್ರಮೆ ಬೇಡ:

ನಾನು ಸಾವಿರಾರು ಅಪಾರ್ಟ್ ಮೆಂಟ್ ಕಟ್ಟಿದ್ದೇನೆ. ಅಪಾರ್ಟ್ ಮೆಂಟ್ ಗಳಿಗೆ ಜಾಗ ಕೊಟ್ಟಿದ್ದೇನೆ. ನಾವು ಇರುವುದೇ ನಿಮ್ಮ ಸೇವೆ ಮಾಡಲು. ಚುನಾವಣೆಗಳನ್ನು ಹೇಗೆ ನಡೆಸಬೇಕು ಎಂದು ನನಗೆ ಗೊತ್ತಿದೆ. ಪ್ರತಿ ಅಪಾರ್ಟ್ ಮೆಂಟ್ ನಲ್ಲಿ ಯಾರಿಗೆ ಎಷ್ಟು ಮತ ಬೀಳುತ್ತದೆ ಎಂದೂ ನನಗೆ ಗೊತ್ತಿದೆ. ಆದರೂ ನಾವು ನಿಮ್ಮ ಸೇವೆ ಮಾಡಿ ನಿಮ್ಮ ವಿಶ್ವಾಸ ಗೆಲ್ಲಲು ಬಯಸುತ್ತೇನೆ. ನೀವು ಬಲಿಷ್ಠವಾಗಿದ್ದರೆ, ನಾವು ಬಲಿಷ್ಠ, ನೀವು ದುರ್ಬಲರಾದರೆ, ನಾವು ದುರ್ಬಲ ಎಂದು ಭಾವಿಸಿದ್ದೇನೆ. ನಾನು ನೇರವಾಗಿ, ಕಟುವಾಗಿ ಹಾಗೂ ದಿಟ್ಟವಾಗಿ ಮಾತನಾಡಿದ್ದೇನೆ. ಇದಕ್ಕೆ ಯಾರೂ ಬೇಸರ ಮಾಡಿಕೊಳ್ಳಬೇಡಿ. ಬೆದರಿಸಿದರೆ ನಡೆಯುತ್ತದೆ ಎಂಬ ಭ್ರಮೆ ಬೇಡ ಎಂದರು.

ಬೆಂಗಳೂರು ದೊಡ್ಡದಾಗಿ ಬೆಳೆದಿದೆ:

ಬೆಂಗಳೂರು ಬಹಳ ದೊಡ್ಡದಾಗಿ ಬೆಳೆದಿದ್ದು, ಉತ್ತಮ ಆಡಳಿತ ನೀಡಬೇಕು ಎಂಬ ಉದ್ದೇಶದಿಂದ ಜಿಬಿಎ ರಚನೆ ಮಾಡಿದ್ದೇವೆ. ಅನೇಕ ಪರ ವಿರೋಧದ ನಡುವೆ ಇದನ್ನು ಜಾರಿಗೆ ತಂದಿದ್ದೇವೆ. 25 ವರ್ಷಗಳ ಹಿಂದೆ ನಾನು ನಗರಾಭಿವೃದ್ಧಿ ಸಚಿವನಾಗಿದ್ದಾಗ ಬೆಂಗಳೂರಿನ ಜನಸಂಖ್ಯೆ 70 ಲಕ್ಷ ಇತ್ತು. ಈಗ ಅದು 1.40 ಕೋಟಿಗೆ ಏರಿಕೆಯಾಗಿದೆ. ನಿತ್ಯ 3 ಸಾವಿರ ವಾಹನಗಳು ನೋಂದಣಿಯಾಗುತ್ತಿವೆ. ನಗರದಲ್ಲಿ ವಾಹನಗಳ ಸಂಖ್ಯೆ 1.30 ಕೋಟಿ ಇದೆ ಎಂದರು.

ಐಟಿ ವೃತ್ತಿಪರರು ಜಾಸ್ತಿ ಅಪಾರ್ಟ್ಮೆಂಟ್ ನಲ್ಲಿ ವಾಸ:

ಬೆಂಗಳೂರಿನ ಜನಸಂಖ್ಯೆಯಲ್ಲಿ 19% ಜನ ಅಪಾರ್ಟ್ಮೆಂಟ್ ನಿವಾಸಿಗಳಾಗಿದ್ದಾರೆ. ಇಂದು ಇಡೀ ವಿಶ್ವ ಬೆಂಗಳೂರಿನತ್ತ ತಿರುಗಿ ನೋಡುತ್ತಿದೆ ಎಂದು ಅಟಲ್ ಬಿಹಾರಿ ವಾಜಪೇಯಿ ಅವರು ಹೇಳಿದ್ದರು. ಬೆಂಗಳೂರು ಅತ್ಯುತ್ತಮ ಹವಾಮಾನ, ಸಂಸ್ಕೃತಿ ಹೊಂದಿದೆ. ಬೆಂಗಳೂರಿನಲ್ಲಿ 2 ಲಕ್ಷ ವಿದೇಶಿ ಪಾಸ್ ಪೋರ್ಟ್ ಹೊಂದಿರುವವರು ಇದ್ದಾರೆ. ಕ್ಯಾಲಿಫೋರ್ನಿಯದಲ್ಲಿ 13 ಲಕ್ಷ ಐಟಿ ವೃತ್ತಿಪರರು ಇದ್ದರೆ ಬೆಂಗಳೂರಿನಲ್ಲಿ 25 ಲಕ್ಷ ಐಟಿ ವೃತ್ತಿಪರರು ಇದ್ದಾರೆ. ಇದರಲ್ಲಿ ಬಹುತೇಕರು ನಿಮ್ಮ ಅಪಾರ್ಟ್ ಮೆಂಟ್ ನಲ್ಲಿ ಇದ್ದಾರೆ ಎಂದು ಹೇಳಿದರು.

ಬರುವ ಜನರನ್ನು ತಡೆಯಲು ಸಾಧ್ಯವಿಲ್ಲ:

1972ರಲ್ಲಿ ಅಪಾರ್ಟ್ಮೆಂಟ್ ಕಾಯ್ದೆ ಬಂದ ನಂತರ ಮತ್ತೆ ಯಾವುದೇ ಸರ್ಕಾರಗಳು ಅಪಾರ್ಟ್ಮೆಂಟ್ ಗಳಿಗೆ ಶಕ್ತಿ ತುಂಬಲಿಲ್ಲ. ಬೆಂಗಳೂರು ಪೂರ್ವನಿಯೋಜಿತ ನಗರವಲ್ಲ. ಆದರೂ ಭವಿಷ್ಯದ ದೃಷ್ಟಿಯಿಂದ ನಾವು ಉತ್ತಮ ಯೋಜನೆ ರೂಪಿಸಬೇಕು. ಕೆಂಪೇಗೌಡ, ಕೆಂಗಲ್ ಹನುಮಂತಯ್ಯ, ಎಸ್.ಎಂ ಕೃಷ್ಣ ಅವರು ಬೆಂಗಳೂರಿನ ಮೂವರು ಪ್ರಮುಖ ವ್ಯಕ್ತಿಗಳು. ಹೈದರಾಬಾದ್ ನಲ್ಲಿ 30 ಸಾವಿರ ಎಕರೆಯಲ್ಲಿ ಭವಿಷ್ಯದ ನಗರ ನಿರ್ಮಾಣ ಮಾಡುತ್ತಿದ್ದಾರೆ. ನಮ್ಮಲ್ಲಿ ಬಿಡದಿ, ನಂದಗುಡಿ ಹಾಗೂ ಸೋಲೂರಿನಲ್ಲಿ ನೂತನ ನಗರ ನಿರ್ಮಾಣ ಮಾಡುತ್ತಿದ್ದೇವೆ. ಬೆಂಗಳೂರಿನ ಮೇಲಿರುವ ಒತ್ತಡ ಇಳಿಸಬೇಕು. ನಾವು ಬೆಂಗಳೂರಿಗೆ ಬರುವ ಜನರು ಹಾಗೂ ಜನರ ವಾಹನ ಖರೀದಿ ತಡೆಯಲು ಆಗುವುದಿಲ್ಲ ಎಂದು ಹೇಳಿದರು.

ಸಹಾಯ ಮಾಡಿದರೂ ಬೆಂಬಲ ನೀಡಲಿಲ್ಲ:

ಚುನಾವಣೆ ಸಮಯದಲ್ಲಿ 100 ಅಪಾರ್ಟ್ಮೆಂಟ್ ಗಳಿಗೆ ಭೇಟಿ ನೀಡಿ ನಮಗೆ ಬೆಂಬಲ ನೀಡಿ ಎಂದು ಕೇಳಿಕೊಂಡಿದ್ದೆ. ಆಗ ಬೆಂಗಳೂರಿನಲ್ಲಿ ಸುಮಾರು 6 ಸಾವಿರ ಕೊಳವೆ ಬಾವಿ ಬತ್ತಿದ್ದಾಗ ನಾನು ಎಷ್ಟೇ ಕಷ್ಟ ಆದರೂ ನಿಮಗೆ ತೊಂದರೆ ಆಗಬಾರದು ಎಂದು ಸಹಾಯ ಮಾಡಿದ್ದೆ. ಆದರೆ ಚುನಾವಣೆ ಫಲಿತಾಂಶ ಬಂದಾಗ ನೀವು ನಮಗೆ ಬೆಂಬಲ ನೀಡಲಿಲ್ಲ. ನನ್ನ ತಮ್ಮನನ್ನು 1 ಲಕ್ಷ ಮತಗಳಿಂದ ಸೋಲಿಸಿದಿರಿ. ನೀವು ನಮಗೆ ಯಾವುದೇ ರೀತಿಯ ಬೆಂಬಲ ನೀಡಲಿಲ್ಲ. ನಾವು ಕಷ್ಟಪಟ್ಟು ಸಹಾಯ ಮಾಡಿದರೂ ನೀವು ನಮಗೆ ಕರುಣೆ ತೋರಲಿಲ್ಲ. ಆಗ ನಾವು ಯಾಕೆ ಸಹಾಯ ಮಾಡಬೇಕು ಎಂದು ಅನಿಸಿದ್ದು ನಿಜ ಎಂದು ಬೇಸರ ವ್ಯಕ್ತಪಡಿಸಿದರು.

ವಿಧೇಯಕ ಇಡೀ ರಾಜ್ಯಕ್ಕೆ ಅನ್ವಯವಾಗಲಿದೆ:

ಆದರೂ ಈ ವಿಧೇಯಕದ ವಿಚಾರವಾಗಿ ನಿಮ್ಮ ಅಭಿಪ್ರಾಯ, ಸಲಹೆ ಪಡೆಯಲು ನಿಮ್ಮನ್ನು ಆಹ್ವಾನಿಸಿದ್ದೇನೆ. ಈ ವಿಧೇಯಕ ಮುಕ್ತ ಹಾಗೂ ನ್ಯಾಯ ಸಮ್ಮತವಾಗಿ ಇರಬೇಕು. ನಿಮ್ಮ ಧ್ವನಿ, ಶಾಸಕರ ಧ್ವನಿ ಸರ್ಕಾರದ ಧ್ವನಿ ಆಗಬೇಕು. ಇಲ್ಲಿ ಬರುವ ಮುನ್ನ ಅಧಿಕಾರಿಗಳ ಜೊತೆ ಚರ್ಚೆ ಮಾಡಿದೆ. ಆತುರದಲ್ಲಿ ಈ ವಿಧೇಯಕ ರೂಪಿಸುವ ಮುನ್ನ ನಿಮ್ಮೆಲ್ಲರ ಅಭಿಪ್ರಾಯ ತಿಳಿಯಲು ಬಂದಿದ್ದೇನೆ. ನಿಮ್ಮ ಅಭಿಪ್ರಾಯ ಪಡೆದ ಬಳಿಕ ಸದನದಲ್ಲಿ ಶಾಸಕರ ಜೊತೆ ಚರ್ಚೆ ಮಾಡುತ್ತೇನೆ. ಬೆಂಗಳೂರಿನಲ್ಲಿ ಐದು ಪಾಲಿಕೆ ರಚಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಪಾಲಿಕೆಗಳನ್ನು ವಿಸ್ತರಣೆ ಮಾಡಲಾಗುವುದು. ಬೆಂಗಳೂರಿನ ಹೊರ ವಲಯ ಸೇರಿದಂತೆ ಈ ವಿಧೇಯಕ ಇಡೀ ರಾಜ್ಯಕ್ಕೆ ಅನ್ವಯವಾಗಲಿದೆ ಎಂದು ಡಿ. ಕೆ ಶಿವಕುಮಾರ್ ತಿಳಿಸಿದರು.


Share It

You cannot copy content of this page