ಮನೆ ಖರೀದಿದಾರರು ರಿಯಲ್ ಎಸ್ಟೇಟ್ ಅಭಿವೃದ್ಧಿ ಮತ್ತು ನಿಯಂತ್ರಣ ಪ್ರಾಧಿಕಾರ (ರೇರಾ) ಹಾಗೂ ಗ್ರಾಹಕ ನ್ಯಾಯಾಲಯ ಎರಡೂ ಕಡೆ ನ್ಯಾಯ ಕೋರಿ ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ ಎನ್.ಸಿ.ಡಿ.ಆರ್.ಸಿ ಸ್ಪಷ್ಟಪಡಿಸಿದೆ.
ಅಲ್ಲದೇ, ಯಾವುದಾದರೂ ಒಂದು ಕಡೆ ಮಾತ್ರ ಅರ್ಜಿ ಸಲ್ಲಿಸಬಹುದು ಎಂದು ರಾಷ್ಟ್ರೀಯ ಗ್ರಾಹಕರ ವ್ಯಾಜ್ಯ ಇತ್ಯರ್ಥ ಆಯೋಗ ಆದೇಶಿಸಿದೆ. ಇದರಿಂದಾಗಿ ಮನೆ ಖರೀದಿ ಸಂಬಂಧಿ ವ್ಯಾಜ್ಯಗಳನ್ನು ಎರಡೂ ವೇದಿಕೆಗಳಲ್ಲಿ ಹೂಡುವ ಕುರಿತ ಗೊಂದಲಕ್ಕೆ ತೆರೆ ಎಳೆದಿದೆ.
ಮುಂಬೈನಲ್ಲಿ ವಸತಿ ಸಮುಚ್ಚಯ ಸ್ವಾಧೀನ ನೀಡುವಲ್ಲಿ ವಿಳಂಬ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿದ್ದ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ರಾಷ್ಟ್ರೀಯ ಗ್ರಾಹಕರ ವ್ಯಾಜ್ಯ ಇತ್ಯರ್ಥ ಆಯೋಗ (ಎನ್‌ಸಿಡಿಆರ್‌ಸಿ)ದ ನ್ಯಾ. ರಾಮ್ ಸೂರತ್ ರಾಮ್ ಮೌರ್ಯ ಮತ್ತು ಆಯೋಗದ ಸದಸ್ಯ ಭರತ್ ಕುಮಾರ ಪಾಂಡ್ಯ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ರಾಷ್ಟ್ರೀಯ ಆಯೋಗ ತನ್ನ ಆದೇಶದಲ್ಲಿ “ಒಂದೇ ವಿಷಯದ ವ್ಯಾಜ್ಯ ಅದೇ ಪಕ್ಷಗಾರರ ನಡುವೆ ಇದ್ದಾಗ ಅವರು ರೇರಾ ಹಾಗೂ ಗ್ರಾಹಕರ ನ್ಯಾಯಾಲಯ ಎರಡೂ ಕಡೆ ಪರಿಹಾರ ಕೋರಿ ಅರ್ಜಿ ಸಲ್ಲಿಸಿದಾಗ ವ್ಯತಿರಿಕ್ತ ತೀರ್ಪುಗಳು ಬರುವ ಸಾಧ್ಯತೆ ಇರುತ್ತದೆ. ಅದೇ ರೀತಿ ಎರಡು ಕಡೆ ಅರ್ಜಿ ಸಲ್ಲಿಸುವುದರಿಂದ ವ್ಯಾಜ್ಯಗಳ ಸಂಖ್ಯೆಯೂ ಹೆಚ್ಚುತ್ತಿದೆ. ಹೀಗಾಗಿ ಎರಡೂ ಕಡೆ ದಾವೆ ಸಲ್ಲಿಸುವುದು ಸರಿಯಲ್ಲ,” ಎಂದು ಹೇಳಿದೆ.
ಹಾಗೆಯೇ, “ಎರಡು ಸಮಾನ ಪರಿಹಾರಗಳು ಲಭ್ಯವಿದ್ದಾಗ, ಸಂಬಂಧಿಸಿದ ಪಕ್ಷಗಾರರು ಒಂದನ್ನು ಆಯ್ಕೆ ಮಾಡಿಕೊಳ್ಳಬೇಕು. ಒಂದು ವೇಳೆ ಒಂದರಲ್ಲಿ ತಮ್ಮ ಹಕ್ಕು ರಕ್ಷಿಸುವಲ್ಲಿ ವಿಫಲವಾದರೆ ಆಗ ಅದೇ ಹಕ್ಕನ್ನು ಮತ್ತೊಂದು ವೇದಿಕೆ ಮುಂದೆ ಪ್ರತಿಪಾದಿಸಬಹುದು,” ಎಂದು ನ್ಯಾಯಪೀಠ ತಿಳಿಸಿದೆ.
ಅರ್ಜಿದಾರರ ಪರ ವಕೀಲರು, “ರೇರಾ ಕಾಯ್ದೆಯ ಸೆಕ್ಷನ್ 18ರಡಿ, ಬೇರೆ ನ್ಯಾಯಾಲಯದಲ್ಲಿ ಹೂಡಿರುವ ಪರಿಹಾರ ಹೊರತುಪಡಿಸಿ ಇತರ ಪರಿಹಾರ ಕೇಳಬಹುದಾಗಿದೆ. ಹಾಗಾಗಿ, ರೇರಾ ಕೋರ್ಟ್‌ನಲ್ಲಿ ಸಲ್ಲಿಸಿರುವುದಕ್ಕೂ ಗ್ರಾಹಕ ನ್ಯಾಯಾಲಯದಲ್ಲಿರುವುದಕ್ಕೂ ಸಂಬಂಧವಿಲ್ಲ. ಗ್ರಾಹಕ ನ್ಯಾಯಾಲಯ ಅರ್ಜಿ ಪುರಸ್ಕರಿಸಬೇಕು,” ಎಂದು ಕೋರಿದ್ದರು.
ಮನವಿ ತಿರಸ್ಕರಿಸಿದ ಗ್ರಾಹಕ ನ್ಯಾಯಾಲಯ ಅರ್ಜಿ ಮಾನ್ಯ ಮಾಡಲಾಗದು ಎಂದಿದ್ದು, ‘ಯಾವುದಾದರೂ ಒಂದು ವೇದಿಕೆಯಲ್ಲಿ ಮಾತ್ರ ಪರಿಹಾರ ಕಂಡುಕೊಳ್ಳಲು ಅವಕಾಶವಿದೆ. ಏಕಕಾಲದಲ್ಲಿ ಎರಡೂ ವೇದಿಕೆಗಳಲ್ಲಿ ಪರಿಹಾರ ಪಡೆಯಲಾಗದು,” ಎಂದು ಸ್ಪಷ್ಟಪಡಿಸಿದೆ.
