Law

ಕಾಲುದಾರಿ, ಬಂಡಿದಾರಿಯೂ ರಸ್ತೆ ಪರಿಕಲ್ಪನೆಯಲ್ಲಿ ಬರುತ್ತವೆ: ಸಾರ್ವಜನಿಕ ಹಕ್ಕು ಕಸಿದುಕೊಳ್ಳಲಾಗದು

Share It

ರಸ್ತೆಗಳು ಎಂಬ ಪರಿಕಲ್ಪನೆಯಲ್ಲಿ ಪಾದಚಾರಿ ಮಾರ್ಗಗಳು, ಕಾಲು ದಾರಿ, ಬಂಡಿ ದಾರಿಯೂ ಸೇರಿದೆ. ಬಿ ಖರಾಬು ವ್ಯಾಪ್ತಿಯಲ್ಲಿ ಸೇರುವ ಇಂತಹ ಭೂಮಿಯ ಬಳಕೆಯ ಹಕ್ಕನ್ನು ಸಾರ್ವಜನಿಕರಿಂದ ಕಸಿದುಕೊಳ್ಳಲಾಗದು ಎಂದು ಹೈಕೋರ್ಟ್ ಆದೇಶಿಸಿದೆ.

ಅಲ್ಲದೆ, ಭೂಸ್ವಾಧೀನ ಕಾಯ್ದೆ ಅಡಿ ಭೂಮಿ ಸ್ವಾಧೀನಪಡಿಸಿಕೊಂಡ ಮಾತ್ರಕ್ಕೆ ‘ಬಿ-ಖರಾಬು’ ಭೂಮಿಯಲ್ಲಿ ಸಾರ್ವಜನಿಕರ ಹಕ್ಕು ರದ್ದಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ಆದೇಶ ನೀಡಿದೆ.

ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಕರ್ನಾಟಕ ಭೂ ಕಂದಾಯ ಕಾಯ್ದೆಯ ಸೆಕ್ಷನ್ 67ರ ಪ್ರಕಾರ, ಎಲ್ಲಾ ಸಾರ್ವಜನಿಕ ರಸ್ತೆಗಳು, ಬೀದಿಗಳು, ಓಣಿಗಳು, ಪಥಗಳು, ಸೇತುವೆಗಳು, ಕಂದಕಗಳು, ತಡೆಗೋಡೆಗಳು ಮತ್ತು ಬೇಲಿಗಳು ಸರ್ಕಾರಕ್ಕೆ ಸೇರಿವೆ ಎಂದು ಸೂಚಿಸುತ್ತದೆ. ಕಾಲುದಾರಿ ಅಥವಾ ಬಂಡಿ ಜಾಡುಗಳು ಹಿಂದಿನ ರಸ್ತೆಗಳಾಗಿದ್ದು, ಸ್ಥಳೀಯರು ವಿವಿಧ ಪ್ರದೇಶಗಳನ್ನು ಪ್ರವೇಶಿಸಲು ಬಳಸುತ್ತಿದ್ದರು.

ಕಾಲುದಾರಿ, ಬಂಡಿ ಜಾಡನ್ನು ಗ್ರಾಮದ ನಕ್ಷೆಯಲ್ಲಿ ಮತ್ತು ಸಂಬಂಧಿತ ಕಂದಾಯ ದಾಖಲೆಗಳಲ್ಲಿ ಗುರುತಿಸಲಾಗಿದೆ. ಜತೆಗೆ, ಭೂಮಾಲೀಕರಿಗೆ ಸಂಬಂಧಿಸಿದಂತೆ ಈ ಭಾಗವನ್ನು ‘ಬಿ ಖರಾಬು’ ಭೂಮಿ ಎಂದು ವರ್ಗೀಕರಿಸಲಾಗಿದೆ. ಈ ‘ಬಿ ಖರಾಬು’ ಭೂಮಿ ಸರ್ಕಾರಕ್ಕೆ ಸೇರಿದ್ದರೂ, ಸಾರ್ವಜನಿಕರಿಗೆ ಬಳಕೆಯ ಹಕ್ಕನ್ನು ನೀಡಲಾಗಿರುತ್ತದೆ ಎಂದು ಹೈಕೋರ್ಟ್ ಹೇಳಿದೆ.

ಪ್ರಕರಣದ ಹಿನ್ನೆಲೆ: 1999-2000ರ ಅವಧಿಯಲ್ಲಿ ಎಪಿಎಂಸಿಗಾಗಿ ಜಮೀನು ಸ್ವಾಧೀನಪಡಿಸಿಕೊಳ್ಳಲಾಗಿತ್ತು. ಆದರೆ, ಇತ್ತೀಚಿಗೆ ಕಾಲುದಾರಿ ಮುಚ್ಚಲಾಗಿತ್ತು. ಈ ಹಿನ್ನೆಲೆಯಲ್ಲಿ 2019ರ ಫೆಬ್ರವರಿ 5ರಂದು ಕಾಲುದಾರಿಯನ್ನು ಮುಚ್ಚಿರುವ ಸಂಬಂಧ ತಹಶೀಲ್ದಾರ್ ಎಪಿಎಂಸಿಗೆ ನೋಟಿಸ್ ಜಾರಿ ಮಾಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಎಪಿಎಂಸಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಹಂಚಿಕೆ ಮಾಡಲಾಗಿದೆ. ಇಡೀ ಆಸ್ತಿ ಎಪಿಎಂಸಿಗೆ ಸೇರಿದ್ದಾಗಿದ್ದು, ಈ ಜಮೀನಿನಲ್ಲಿ ಯಾವುದೇ ಕಾಲು ದಾರಿಗೆ ಅವಕಾಶ ಇಲ್ಲ ಎಂದು ಉತ್ತರಿಸಿತ್ತು. ಈ ವಿಚಾರವಾಗಿ ಎಪಿಎಂಸಿ ಹೈಕೋರ್ಟ್ ಮುಂದೆ ಅರ್ಜಿ‌ ಸಲ್ಲಿಸಿತ್ತು.

(W.P.No.13483/2022)


Share It

You cannot copy content of this page