ಗಾಳಿಯಲ್ಲಿ ಗುಂಡು ಹಾರಿಸಿದ ವಿಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ, ಜಿಲ್ಲೆಯ ಅಫಜಲಪುರ ತಾಲೂಕಿನ ಉಡಚಣ ಗ್ರಾಮದ ಶಂಕರಲಿಂಗೇಶ್ವರ ಹಿರೇಮಠ ಸಂಸ್ಥಾನದ ಮಠಾಧೀಶರಾದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ವಿರುದ್ದ ಪೊಲೀಸರು ಸುಮೊಟೊ ಕೇಸ್ ದಾಖಲಿಸಿಕೊಂಡಿದ್ದಾರೆ.
ಈ ಸಂಬಂಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡಿರುವ ಅಫಜಲ್ಪುರ ಠಾಣೆ ಪೊಲೀಸರು, ಸ್ವಾಮೀಜಿ ವಿಚಾರಣೆ ನಡೆಸುತ್ತಿದ್ದೇವೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಆಗಿರುವಂತಹ ಘಟನೆ ನಡೆದಿಲ್ಲ. ತನಿಖೆ ನಡೆಯುತ್ತಿದೆ ಎಂದು ತಿಳಿಸಿದ್ದಾರೆ.
ಕಲಬುರಗಿ ಎಸ್ಪಿ ಈ ಬಗ್ಗೆ ಮಾಹಿತಿ ನೀಡಿ, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಒಂದು ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಬಂದೂಕು ಹಿಡಿದು ಗಾಳಿಯಲ್ಲಿ ಗುಂಡು ಹಾರಿಸಿರುವುದು ಕಂಡು ಬರುತ್ತಿದೆ. ತಕ್ಷಣ ನಮ್ಮ ಸೋಶಿಯಲ್ ಮೀಡಿಯಾ ಮಾನಿಟರಿಂಗ್ ಸೆಲ್ ವರದಿ ಅನ್ವಯ ಅಫಜಲ್ಪುರ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ಒಂದು ದೂರು ದಾಖಲಿಸಿಕೊಂಡಿದ್ದೇವೆ. ಪರಿಶೀಲನೆ ನಡೆಸಿದಾಗ ವಿಡಿಯೋದಲ್ಲಿರುವುದು ಶಂಕರಲಿಂಗೇಶ್ವರ ಸಂಸ್ಥಾನ ಹಿರೇಮಠದ ಶಾಂತಲಿಂಗ ಶಿವಾಚಾರ್ಯರು ಎಂದು ತಿಳಿದುಬಂದಿದೆ. ಅವರು ತಮ್ಮಲ್ಲಿದ್ದ ಬಂದೂಕಿನಿಂದ ಗಾಳಿಯಲ್ಲಿ ಗುಂಡು ಹಾರಿಸಿರುವುದು ಕಂಡುಬಂದಿದೆ. ಈ ಸಂಬಂಧ ಸ್ವಾಮೀಜಿಯವರ ವಿಚಾರಣೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಭಕ್ತರಿಂದ ಪ್ರತಿಭಟನೆ: ಉಡಚಣ ಗ್ರಾಮದ ಶಂಕರಲಿಂಗೇಶ್ವರ ಹಿರೇಮಠ ಸಂಸ್ಥಾನದ ಮಠಾಧೀಶ ಶ್ರೀ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ವಿರುದ್ದ ಗ್ರಾಮಸ್ಥರು ಹಾಗೂ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮಠಾಧೀಶರ ವರ್ತನೆ ಹಾಗೂ ಅನ್ಯ ಚಟುವಟಿಕೆಗಳಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿರುವ ಭಕ್ತರು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ರಾತ್ರೋರಾತ್ರಿ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ, ಶಾಂತಲಿಂಗ ಸ್ವಾಮೀಜಿ ಪೀಠಾಧಿಪತಿ ಸ್ಥಾನದಲ್ಲಿ 20 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಮದ್ಯ ಸೇವನೆ, ಕೆಟ್ಟ ಶಬ್ದಗಳ ಬಳಕೆ, ಕೆಟ್ಟ ಕೆಲಸಗಳ ಮೂಲಕ ಭಕ್ತರಿಗೆ ನೋವುಂಟು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
