News

ಸೈಟು ಹಂಚಿಕೆ ಅಕ್ರಮವಾಗಿದ್ದರೆ ಸಹಕಾರಿ ಸಂಘಗಳ ರಿಜಿಸ್ಟ್ರಾರ್ ರದ್ದುಪಡಿಸಬಹುದು: ಹೈಕೋರ್ಟ್ ಮಹತ್ವದ ತೀರ್ಪು

Share It

ಸಹಕಾರಿ ಸಂಘಗಳಿಂದ ಹಂಚಿಕೆಯಾದ ನಿವೇಶನಗಳನ್ನು ಅಕ್ರಮವಾಗಿ ಪಡೆದಿದ್ದರೆ, ಅಂತಹ ಮಾರಾಟ ಅಥವಾ ಕ್ರಯ ಪತ್ರವನ್ನು ಹೆಚ್ಚುವರಿ ರಿಜಿಸ್ಟ್ರಾರ್ ರದ್ದುಗೊಳಿಸಲು ಅಧಿಕಾರ ಹೊಂದಿದ್ದಾರೆ ಎಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಮಾರಾಟ ಪತ್ರ ನೋಂದಣಿಯಾದ ನಂತರ ರಿಜಿಸ್ಟ್ರಾರ್ ಮಧ್ಯಪ್ರವೇಸುವುದು ಸರಿಯಲ್ಲ ಎಂದು ಆಕ್ಷೇಪಿಸಿ ಬೆಂಗಳೂರಿನ ಸುರೇಶ್ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ, ಸೂರಜ್ ಗೋವಿಂದರಾಜು ಅವರಿದ್ದ ಪೀಠ ಈ ತೀರ್ಪು ನೀಡಿದೆ.

ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಅಕ್ರಮ ಹಂಚಿಕೆಯನ್ನು ರದ್ದುಗೊಳಿಸಿದ ನಂತರ ಮುಂದಿನ ಕ್ರಮ ಕೈಗೊಳ್ಳಲು ಸಹಕಾರ ಸಂಘಗಳ ನಿಬಂಧಕರು, ಮುಂದಿನ ಕ್ರಮಗಳನ್ನು ಕೈಗೊಳ್ಳಲು ಸ್ಥಳೀಯ ಸಬ್ ರಿಜಿಸ್ಟ್ರಾರ್ ಗಳಿಗೆ ಸೂಚಿಸಬಹುದು. ಇದಕ್ಕೂ ಮುನ್ನ ಆಸ್ತಿ ಹಂಚಿಕೆ ಕುರಿತಂತೆ ಸೂಕ್ತ ವಿಚಾರಣೆ ನಡೆಸಬೇಕಾಗುತ್ತದೆ. ಸೂಕ್ತ ಪ್ರಕ್ರಿಯೆ ಅನುಸರಿಸಬೇಕಾಗುತ್ತದೆ. ಕರ್ನಾಟಕ ಸಹಕಾರ ಕಾಯ್ದೆ, ನಿಯಮಗಳು ಹಾಗೂ ಸೊಸೈಟಿಯ ಬೈಲಾಗಳನ್ನು ಪರಿಗಣಿಸಬೇಕಾಗುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ- ಬೆಂಗಳೂರಿನ ಚನ್ನಸಂದ್ರ ಗ್ರಾಮದಲ್ಲಿರುವ 4 ಸಾವಿರ ಚದರ ಅಡಿ ವಿಸ್ತೀರ್ಣದ ನಿವೇಶನವನ್ನು ಬಿಇಎಂಎಲ್ ನೌಕರರ ಸಂಘವು ತನ್ನ ಸದಸ್ಯರಾದ ಬಿ.ಎಂ ಯೋಗೇಶ್ ಎಂಬುವರಿಗೆ ಹಂಚಿತೆ ಮಾಡಿತ್ತು. ಹಂಚಿಕೆಯ ನಂತರ 2013ರಲ್ಲಿ ಮಾರಾಟ ಪತ್ರ ನೋಂದಾಯಿಸಲಾಗಿತ್ತು.

ನಿವೇಶನ ಪಡೆದ ಯೋಗೇಶ್ ಅದನ್ನು ಸುರೇಶ್ ಹಾಗೂ ಭಾಸ್ಕರ್ ಎಂಬವರಿಗೆ ಮಾರಾಟ ಮಾಡಿದ್ದರು. ನಂತರದ ದಿನಗಳಲ್ಲಿ ಭಾಸ್ಕರ್ ತನ್ನ ಸ್ವತ್ತನ್ನು ಸುರೇಶ್ ಅವರಿಗೆ ಮಾರಾಟ ಮಾಡಿದ್ದರು. ಪೂರ್ತಿ ನಿವೇಶನವನ್ನು ಸುಪರ್ದಿಗೆ ಪಡೆದ ಸುರೇಶ್ ಆ ಜಾಗದಲ್ಲಿ ಬಹುಮಹಡಿ ಕಟ್ಟಡ ನಿರ್ಮಿಸಲು ಮುಂದಾದರು.

ಈ ವೇಳೆ ಸೊಸೈಟಿ, ಅಂದಿನ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು ನಿವೇಶವನ್ನು ಜೇಷ್ಠತೆ ನಿಯಮಗಳನ್ನು ಮೀರಿ ಯೋಗೇಶ್ ಅವರಿಗೆ ಹಂಚಿಕೆ ಮಾಡಲಾಗಿದೆ. ಹೀಗಾಗಿ ನಿವೇಶನದ ಹಂಚಿಕೆಯೇ ನಿಯಮಬಾಹಿರವೆಂದು ಹೇಳಿ, ಮಾರಾಟ ರದ್ದುಗೊಳಿಸುವಂತೆ ಕೋರಿ ಸಹಕಾರ ಸಂಘಗಳ ಹೆಚ್ಚುವರಿ ನಿಬಂಧಕರಿಗೆ ಕೋರಿತ್ತು. ಹೆಚ್ಚುವರಿ ರಿಜಿಸ್ಟ್ರಾರ್ ಮನವಿ ತಿರಸ್ಕರಿಸಿದ್ದರು. ನಂತರ ಪ್ರಕರಣ ಕರ್ನಾಟಕ ಮೇಲ್ಮನವಿ ಪ್ರಾಧಿಕಾರದ ಮುಂದೆ ಹೋಗಿತ್ತು.

ಕರ್ನಾಟಕ ಮೇಲ್ಮನವಿ ಪ್ರಾಧಿಕಾರವು ಪ್ರಕರಣವನ್ನು ಮತ್ತೆ ಹೊಸದಾಗಿ ಪರಿಗಣಿಸಿ ಇತ್ಯರ್ಥಪಡಿಸುವಂತೆ ಹೆಚ್ಚುವರಿ ರಿಜಿಸ್ಟ್ರಾರ್ ಗೆ ನಿರ್ದೇಶಿಸಿತ್ತು. ಇದನ್ನು ಪ್ರಶ್ನಿಸಿ ಸುರೇಶ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಮಾರಾಟ ಪತ್ರ ನೋಂದಣಿಯಾದ ಮೇಲೆ ಅದರಲ್ಲಿ ರಿಜಿಸ್ಟ್ರಾರ್ ಮಧ್ಯಪ್ರವೇಶಿಸಲಾಗದು. ಇನ್ನು ಹಂಚಿಕೆ ನಮಗೆ ನೇರವಾಗಿ ಆಗಿಲ್ಲ. ಹೀಗಾಗಿ ಪ್ರಕರಣವನ್ನು ಸಿವಿಲ್ ಕೋರ್ಟ್ ನಿರ್ಧರಿಸಬೇಕಿದೆ ಎಂದು ವಾದಿಸಿದ್ದರು. ವಾದ ತಳ್ಳಿಹಾಕಿರುವ ಹೈಕೋರ್ಟ್, ಸೊಸೈಟಿಯಿಂದ ಅಕ್ರಮವಾಗಿ ಹಂಚಿಕೆ ಪಡೆದಿದ್ದಾಗ ರಿಜಿಸ್ಟ್ರಾರ್ ಗೆ ಅದನ್ನು ಪರಿಶೀಲಿಸುವ ಮತ್ತು ಕ್ರಮ ಕೈಗೊಳ್ಳುವ ಅಧಿಕಾರವಿದೆ ಎಂದು ಸ್ಪಷ್ಟಪಡಿಸಿ ತೀರ್ಪು ನೀಡಿದೆ.


Share It

You cannot copy content of this page