News

ಭ್ರಷ್ಟಾಚಾರ: ನ್ಯಾಯಾಧೀಶರ ವಜಾ ಆದೇಶ ಎತ್ತಿ ಹಿಡಿದ ಹೈಕೋರ್ಟ್

Share It

ಭ್ರಷ್ಟಾಚಾರದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗೆ ಯಾವುದೇ ರೀತಿಯ ಕರುಣೆ ತೋರಿಸಲು ಸಾಧ್ಯವಿಲ್ಲ ಎಂದು ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿರುವ ಗುಜರಾತ್ ಹೈಕೋರ್ಟ್ ನ್ಯಾಯಾಧೀಶರೊಬ್ಬರ ವಜಾ ಆದೇಶವನ್ನು ಎತ್ತಿಹಿಡಿದಿದೆ.

2012 ರಿಂದ 2015 ರ ನಡುವೆ ಗುಜರಾತ್ ನ ವಾಪಿ ಪ್ರಧಾನ ಸಿವಿಲ್ ಮತ್ತು ಜೆಎಂಎಫ್ ನ್ಯಾಯಾಲಯದ ನ್ಯಾಯಾಧೀಶರಾಗಿದ್ದ ಅಜಯ್ ಆಚಾರ್ಯ ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದು ಗೌಪ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಸಹೋದ್ಯೋಗಿ ಜೊತೆ ಸೇರಿ ಭ್ರಷ್ಟಾಚಾರದಲ್ಲಿ ತೊಡಗಿದ್ದ ನ್ಯಾಯಾಧೀಶರ ಕೃತ್ಯಗಳನ್ನು ವಕೀಲ ಜಗತ್ ಪಟೇಲ್ ಹಾಗು ಪ್ಯೂನ್ ಮನೀಶ್ ಪಟೇಲ್ ಗೌಪ್ಯ ಕ್ಯಾಮರಾ ಮೂಲಕ ಸೆರೆಹಿಡಿದಿದ್ದರು.

ಅಲ್ಲದೇ, ನ್ಯಾಯಾಧೀಶರ ಭ್ರಷ್ಟಾಚಾರದ ವಿರುದ್ಧ ಸುಪ್ರೀಂ ಕೋರ್ಟ್ ಗೆ ದೂರು ಸಲ್ಲಿಸಿದ್ದರು. ಪ್ರಕರಣದ ವಿಚಾರಣೆಯನ್ನು ಸುಪ್ರೀಂಕೋರ್ಟ್, ಹೈಕೋರ್ಟ್ ಗೆ ವಹಿಸಿತ್ತು. ಹೈಕೋರ್ಟ್ ವಿಜಿಲೆನ್ಸ್ ವಿಚಾರಣೆ ವೇಳೆ ನ್ಯಾಯಾಧೀಶ ಅಜಯ್ ಆಚಾರ್ಯ, ಕೆಲ ಸ್ಥಳೀಯ ವಕೀಲರೊಂದಿಗೆ ಸೇರಿ ಭ್ರಷ್ಟಾಚಾರದಲ್ಲಿ ತೊಡಗಿದ್ದು, ಕ್ರಿಮಿನಲ್ ಮೊಕದ್ದಮೆಗಳಲ್ಲಿನ ಸಾಕ್ಷಿದಾರರ ಹೇಳಿಕೆಗಳನ್ನು ತಮ್ಮ ಕಚೇರಿಯಲ್ಲೇ ಕುಳಿತು ಬರೆಸುತ್ತಿದ್ದುದು ಪತ್ತೆಯಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನ ನ್ಯಾಯಾಧೀಶ ಆಚಾರ್ಯ ಜತೆಗೆ ಮತ್ತೋರ್ವ ನ್ಯಾಯಾಧೀಶರನ್ನು ಬಂಧಿಸಲಾಗಿತ್ತು. ವಿಚಾರಣೆ ಬಳಿಕ ಆರೋಪಿತ ನ್ಯಾಯಾಧೀಶ ಆಚಾರ್ಯ ಅವರನ್ನು ಸೇವೆಯಿಂದ ವಜಾಗೊಳಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆಚಾರ್ಯ ತಮ್ಮನ್ನು ವಜಾ ಮಾಡಿದ ಕ್ರಮ ಆಕ್ಷೇಪಿಸಿ ಗುಜರಾತ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ತಮ್ಮನ್ನು ವಜಾಗೊಳಿಸಿರುವ ಆದೇಶ ದೋಷಪೂರಿತವಾಗಿದೆ ಎಂದು ವಾದಿಸಿದ್ದರು.

ಪ್ರಕರಣದಲ್ಲಿನ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿದ ನ್ಯಾಯಮೂರ್ತಿ ಬಿರೇನ್ ವೈಷ್ಣವ್ ಮತ್ತು ನ್ಯಾಯಮೂರ್ತಿ ನಿಶಾ ಠಾಕೂರ್ ಅವರಿದ್ದ ವಿಭಾಗೀಯ ಪೀಠ “ನ್ಯಾಯಾಂಗ ಅಧಿಕಾರಿಯಾಗಿ ಅರ್ಜಿದಾರರು ನ್ಯಾಯಾಲಯದ ನಿರೀಕ್ಷಿತ ಕರ್ತವ್ಯಗಳನ್ನು ಮಾಡುವಲ್ಲಿ ವಿಫಲರಾಗಿದ್ದಾರೆ. ನ್ಯಾಯಾಲಯದ ನಿರೀಕ್ಷೆಗಳನ್ನೇ ಸುಳ್ಳಾಗಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಅಲ್ಲದೇ, ನ್ಯಾಯಾಂಗ ಅಧಿಕಾರಿಯನ್ನು ವಜಾಗೊಳಿಸಿರುವ ಆದೇಶ ಕಠಿಣವಾಗಿರಬಹುದು. ಆದರೆ, ನಿರ್ಲಜ್ಜವಾಗಿ ಮತ್ತು ನಿರ್ದಾಕ್ಷಿಣ್ಯವಾಗಿ ಭ್ರಷ್ಟಾಚಾರದಲ್ಲಿ ತೊಡಗಿರುವ ನ್ಯಾಯಾಂಗ ಅಧಿಕಾರಿಗೆ ಯಾವುದೇ ರೀತಿಯ ಕರುಣೆ ತೋರಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು, ಆಚಾರ್ಯ ಮನವಿಯನ್ನು ತಿರಸ್ಕರಿಸಿದೆ.


Share It

You cannot copy content of this page