ಕೇವಲ ವಸತಿ ಫ್ಲ್ಯಾಟ್ ಗಳಷ್ಟೇ ಇರುವ ಅಪಾರ್ಟ್‌ಮೆಂಟ್ ನ ನಿರ್ವಹಣೆಯನ್ನು ನೋಡಿಕೊಳ್ಳಲು ಮಾಲೀಕರು ಕರ್ನಾಟಕ ಅಪಾರ್ಟ್ಮೆಂಟ್ ಓನರ್ಶಿಪ್ ಕಾಯ್ದೆ 1972 ರ ಅಡಿ ನೋಂದಣಿ ಮಾಡಿಕೊಳ್ಳಬೇಕೇ ಹೊರತು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959 ಅಡಿ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಕೆಂಗೇರಿ ಬಳಿಯ ಡಿಎಸ್ ಮ್ಯಾಕ್ಸ್ ಸ್ಟಾರ್ ನೆಸ್ಟ್‌ನ ಫ್ಲ್ಯಾಟ್ ಮಾಲೀಕರಾದ ಆರ್. ಅರುಣ್ ಕುಮಾರ್ ಮತ್ತಿತರರು ಸಲ್ಲಿಸಿದ್ದ ಅರ್ಜಿ ಪರಿಶೀಲಿಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.
ಅಲ್ಲದೆ, ಅರ್ಜಿದಾರರಿಗೆ ಸಂಘ ನೋಂದಾಯಿಸಲು ಪ್ರತಿವಾದಿ ಬಿಲ್ಡರ್ ಹಾಗೂ ಇನ್ನಿತರರು ಸಹಕಾರ ನೀಡಬೇಕು ಎಂದು ಹೇಳಿರುವ ನ್ಯಾಯಾಲಯ, ಸೊಸೈಟಿ ಕಾಯ್ದೆ ಅಡಿ ಸಂಘದ ನೋಂದಣಿಗೆ ಸಹಕಾರ ಸಂಘಗಳ ರಿಜಿಸ್ಟ್ರಾರ್ ನೀಡಿದ್ದ ಅನುಮತಿಯನ್ನು ರದ್ದುಗೊಳಿಸಿದೆ.
ಹೈಕೋರ್ಟ್ ತನ್ನ ತೀರ್ಪಿನಲ್ಲಿ, “ಅರ್ಜಿದಾರರು ಹೇಳಿರುವಂತೆ ಇದು ವಸತಿ ಸಂಕೀರ್ಣದ ಯೋಜನೆಯಾಗಿದ್ದು, ಇದರಲ್ಲಿ ಯಾವುದೇ ವಾಣಿಜ್ಯ ಉದ್ದೇಶದ ಜಾಗವಿಲ್ಲ, ಖರೀದಿದಾರರ ಪರವಾಗಿ ನೀಡಲಾಗಿರುವ ಕ್ರಯ ಪತ್ರ (ಸೇಲ್ ಡೀಡ್)ಗಳಲ್ಲೂ ಅವುಗಳನ್ನು ಕರ್ನಾಟಕ ಅಪಾರ್ಟ್ ಮೆಂಟ್ ಓನರ್‌ಶಿಪ್ ಕಾಯಿದೆ- 1972ರಡಿ ನೋಂದಣಿ ಮಾಡಿಕೊಡಲಾಗಿದೆ. ಹೀಗಾಗಿ, ಫ್ಲಾಟ್ ಗಳ ನಿರ್ವಹಣೆ ಕೈಗೊಳ್ಳಲು ಅರ್ಜಿದಾರರು ಹಾಗೂ ಉದ್ದೇಶಿತ ಸಂಘದ ಸದಸ್ಯರು ಅಸೋಸಿಯೇಷನ್ ಅನ್ನು 1972ರ ಕರ್ನಾಟಕ ಅಪಾರ್ಟ್ಮೆಂಟ್ ಓನರ್ಶಿಪ್ ಆಕ್ಟ್ (ಕೆಎಬಿಎ) ಅನ್ವಯವೇ ನೋಂದಣಿ ಮಾಡಿಸಬೇಕಾಗುತ್ತದೆ,” ಎಂದು ಹೇಳಿದೆ.
ಅಲ್ಲದೇ, ‘ಕರ್ನಾಟಕ ಓನರ್ಶಿಪ್ ಫ್ಲ್ಯಾಟ್ಸ್ ನಿರ್ಮಾಣ, ಮಾರಾಟ, ನಿರ್ವಹಣೆ ಮತ್ತು ವರ್ಗಾವಣೆ ಉತ್ತೇಜನ ನಿಯಂತ್ರಣ) ಕಾಯ್ದೆ- 1972 ಮತ್ತು ಅದರಡಿ ಬರುವ 1975ರ ನಿಯಮಗಳು ವಸತಿ ಸಂಕೀರ್ಣದಲ್ಲಿ ವಸತಿ ಘಟಕ ಮತ್ತು ವಾಣಿಜ್ಯ ಘಟಕಗಳಿದ್ದರೆ ಮಾತ್ರ ಅನ್ವಯಿಸುತ್ತದೆ.” “ಆದರೆ, ಈ ಪ್ರಕರಣದಲ್ಲಿ ವಾಣಿಜ್ಯ ಉದ್ದೇಶದ ಜಾಗವಿಲ್ಲ, ಎಲ್ಲಾ ವಸತಿ ಫ್ಲ್ಯಾಟ್ ಗಳೇ ಇರುವುದರಿಂದ ಸೊಸೈಟಿ ಕಾಯ್ದೆ ಅನ್ವಯಿಸುವುದಿಲ್ಲ” ಎಂದು ನ್ಯಾಯಪೀಠ ಆದೇಶಿಸಿದೆ.
ಪ್ರಕರಣದ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, “ಉದ್ದೇಶಿತ ಸ್ಟಾರ್ ನೆಸ್ಟ್ ಅಪಾರ್ಟ್ ಮೆಂಟ್ ಓನರ್ಸ್ ಕೋ ಅಪರೇಟಿವ್ ಸೊಸೈಟಿ ಲಿಮಿಟೆಡ್ ಅನ್ನು ಸಹಕಾರ ಸಂಘಗಳ ಕಾಯ್ದೆ ಅಡಿ ನೋಂದಣಿ ಮಾಡಿಸಲಾಗುತ್ತಿದೆ. ಅದಕ್ಕೆ ಈಗಾಗಲೇ ಸಹಕಾರ ಸಂಘಗಳ ರಿಜಿಸ್ಟ್ರಾರ್ ಕೂಡ ಅನುಮತಿ ನೀಡಿದ್ದಾರೆ. ಆದರೆ, 1972ರ ಕೆಎಒಎ ಕಾಯ್ದೆ ಅನ್ವಯ ಕ್ರಯಪತ್ರದ ಪ್ರಕಾರ ಫ್ಲ್ಯಾಟ್ ಗಳನ್ನು ಖರೀದಿ ಮಾಡಲಾಗಿದೆ ಮತ್ತು ಅದೇ ಕಾಯ್ದೆ ಅಡಿಯೇ ಸಂಘವನ್ನು ನೋಂದಣಿ ಮಾಡಲು ಬಯಸಿದ್ದಾರೆ” ಎಂದು ನ್ಯಾಯಪೀಠಕ್ಕೆ ವಿವರಿಸಿದ್ದರು.
