News

ಪತ್ನಿ ದುಡಿಯಲು ಸಮರ್ಥಳಿದ್ದರೂ ಪತಿ ಜೀವನಾಂಶ ನೀಡಬೇಕು: ಹೈಕೋರ್ಟ್

Share It

ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು.

ಮಕ್ಕಳನ್ನು ನೋಡಿಕೊಳ್ಳುವುದು ಸ್ವಲ್ಪ ಹೊತ್ತಿನ ಕೆಲಸವಷ್ಟೇ. ನಂತರ ಪತ್ನಿ ಉದ್ಯೋಗ ಮಾಡಬಹುದು. ಉದ್ಯೋಗ ಮಾಡಲು ಆಕೆ ಸಮರ್ಥಳಿದ್ದರೂ ಮಾಡುತ್ತಿಲ್ಲ. ಹೀಗಾಗಿ ಆಕೆಗೆ ಜೀವನಾಂಶ ನೀಡಲು ಸಾಧ್ಯವಿಲ್ಲ ಎಂಬ ಪತಿಯ ವಾದವನ್ನು ತಿರಸ್ಕರಿಸಿರುವ ಹೈಕೋರ್ಟ್, ಪತ್ನಿಗೆ ಜೀವನಾಂಶ ನೀಡಲೇಬೇಕು ಎಂದು ಆದೇಶಿಸಿದೆ.

ಇದೇ ವೇಳೆ, ಮಕ್ಕಳನ್ನು ಪಾಲನೆ ಮಾಡುವುದು ಪೂರ್ಣಾವಧಿ ಕೆಲಸ. ಹೀಗಾಗಿ ಪತ್ನಿ ಸೋಮಾರಿಯಂತೆ ಓಡಾಡಿಕೊಂಡಿದ್ದಾಳೆ ಎಂಬ ಪತಿಯ ವಾದವನ್ನು ಒಪ್ಪಲಾಗದು. ಹಾಗೆಯೇ ಮಕ್ಕಳ ಪಾಲನೆಗೆ ಆಕೆಯೂ ದುಡಿಯಬೇಕು ಎಂಬುದು ಸಮಂಜಸವಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.

ಕೌಟುಂಬಿಕ ನ್ಯಾಯಾಲಯ ನಿಗದಿಪಡಿಸಿದ್ದ 18 ಸಾವಿರ ರೂಪಾಯಿ ಜೀವನಾಂಶವನ್ನು 36 ಸಾವಿರ ರೂಪಾಯಿಗೆ ಹೆಚ್ಚಿಸಬೇಕೆಂದು ಪತ್ನಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.

ಹೈಕೋರ್ಟ್ ತನ್ನ ಆದೇಶದಲ್ಲಿ, “ಮಕ್ಕಳನ್ನು ನೋಡಿಕೊಳ್ಳುವುದು ಪೂರ್ಣಾವಧಿ ಕೆಲಸ,” ಎಂದು ಅಭಿಪ್ರಾಯಪಟ್ಟಿದೆ. ಅಲ್ಲದೆ, ”ಪತಿ ಕೆನರಾ ಬ್ಯಾಂಕ್ ಮ್ಯಾನೇಜರ್ ಆಗಿದ್ದಾರೆ. ಆದು ನಿಗದಿತ ವಯಸ್ಸಿನವರೆಗೆ ಭದ್ರತೆ ಇರುವ ಉದ್ಯೋಗ, ಸದ್ಯ ಸುಮಾರು 90 ಸಾವಿರ ರೂ. ವೇತನ ಪಡೆಯುತ್ತಿದ್ದಾರೆ. ಹಾಗಾಗಿ, ಇಬ್ಬರು ಮಕ್ಕಳನ್ನು ನೋಡಿಕೊಳ್ಳಲು ಪತ್ನಿಗೆ 36 ಸಾವಿರ ರೂಪಾಯಿ ಜೀವನಾಂಶ ನೀಡಲೇಬೇಕು. ಮಕ್ಕಳನ್ನು ನೋಡಿಕೊಳ್ಳುವ ಹೊಣೆಗಾರಿಕೆಯಿಂದ ತಪ್ಪಿಸಿಕೊಳ್ಳಲಾಗದು, ಎಂದು ಹೈಕೋರ್ಟ್ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಕೆನರಾ ಬ್ಯಾಂಕ್ ಮ್ಯಾನೇಜ‌ರ್ ಮತ್ತು ಉಪನ್ಯಾಸಕಿಯಾಗಿ ಕೆಲಸ ಮಾಡುತ್ತಿದ್ದ ದಂಪತಿಗೆ 11 ಹಾಗೂ 6 ವರ್ಷದ ಮಕ್ಕಳಿದ್ದಾರೆ. ಮೊದಲ ಮಗುವಾದ ನಂತರ ಪತ್ನಿ ಉದ್ಯೋಗ ತ್ಯಜಿಸಿದ್ದರು. ಆನಂತರ ಮತ್ತೊಂದು ಮಗು ಜನಿಸಿತು. ಹೀಗಾಗಿ ಕೆಲಸಕ್ಕೆ ಹೋಗುತ್ತಿರಲಿಲ್ಲ. ನಂತರ ಇಬ್ಬರಲ್ಲಿ ಮನಸ್ತಾಪ ಉಂಟಾಗಿ ಪರಸ್ಪರ ವಿಚ್ಛೇದನ ಕೋರಿದ್ದರು. ಆ ಅರ್ಜಿ ಬಾಕಿ ಇರುವಾಗಲೇ ಪತ್ನಿ ಹಿಂದೂ ವಿವಾಹ ಕಾಯಿದೆ ಸೆಕ್ಷನ್ 24ರಡಿ ಪ್ರತಿ ತಿಂಗಳು 36 ಸಾವಿರ ರೂ. ಮಧ್ಯಂತರ ಜೀವನಾಂಶಕ್ಕೆ ಅರ್ಜಿ ಸಲ್ಲಿಸಿದ್ದರು. ಕೌಟುಂಬಿಕ ನ್ಯಾಯಾಲಯ 18 ಸಾವಿರ ರೂ. ಜೀವನಾಂಶ ನಿಗದಿಪಡಿಸಿತ್ತು. ಹೆಚ್ಚಿನ ಜೀವನಾಂಶ ಕೋರಿ ಪತ್ನಿ ಹೈಕೋರ್ಟ್ ಮೊರೆ ಹೋಗಿದ್ದರು.


Share It

You cannot copy content of this page