ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು.
ಪತ್ನಿಗೆ ಕಡಿಮೆ ಜೀವನಾಂಶ ನೀಡಲು ಕೃತಕ ಕಡಿತಗಳನ್ನು ಸೃಷ್ಟಿಸುವುದು ಸಲ್ಲದು. ಪತಿಯ ವೇತನದಲ್ಲಿ ಭವಿಷ್ಯ ನಿಧಿ, ಮನೆ ಬಾಡಿಗೆ, ಪೀಠೋಪಕರಣಗಳ ಖರೀದಿಗೆ ಆಗುತ್ತಿರುವ ವೆಚ್ಚ ಪರಿಗಣಿಸಿ ಪತ್ನಿಗೆ ನೀಡುವ ಜೀವನಾಂಶ ಮೊತ್ತವನ್ನು ಕಡಿಮೆ ಮಾಡಲಾಗದು ಎಂದು ಹೈಕೋರ್ಟ್ ಆದೇಶಿಸಿದೆ.
ಇದೇ ವೇಳೆ ಕೌಟುಂಬಿಕ ನ್ಯಾಯಾಲಯ ಜೀವನಾಂಶ ಪಾವತಿಸುವಂತೆ ಹೊರಡಿಸಿದ್ದ ಆದೇಶ ಪ್ರಶ್ನಿಸಿದ್ದ ಪತಿಗೆ ಹೈಕೋರ್ಟ್ ₹15,000 ರೂಪಾಯಿ ದಂಡ ವಿಧಿಸಿದ್ದು, ಪತ್ನಿಗೆ ಜೀವನಾಂಶ ಪಾವತಿ ಮಾಡುವಂತೆ ಸೂಚನೆ ನೀಡಿದೆ.
ಪತ್ನಿಯ ಜೀವನಾಂಶಕ್ಕಾಗಿ ಮಾಸಿಕ ₹15,000 ಸಾವಿರ ಮತ್ತು ಮಕ್ಕಳ ಪೋಷಣೆಗೆ ₹10,000 ಸಾವಿರ ರೂಪಾಯಿಗಳನ್ನು ಪಾವತಿಸುವಂತೆ ನೀಡಿದ್ದ ಆದೇಶ ಪ್ರಶ್ನಿಸಿ ಮೈಸೂರಿನ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.
ಹೈಕೋರ್ಟ್ ತನ್ನ ತೀರ್ಪಿನಲ್ಲಿ, ಅರ್ಜಿದಾರರ ವೇತನದಿಂದ ವೃತ್ತಿ ತೆರಿಗೆ ಮತ್ತು ಆದಾಯ ತೆರಿಗೆ ಮಾತ್ರ ಕಡ್ಡಾಯವಾಗಿ ಕಡಿತವಾಗುತ್ತದೆ. ಇನ್ನುಳಿದ ಹಣ ಎಲ್‌ಐಸಿ, ಪೀಠೋಪಕರಣಗಳ ಖರೀದಿ, ಭವಿಷ್ಯ ನಿಧಿ ಎಲ್ಲವೂ ಅರ್ಜಿದಾರರ ಪ್ರಯೋಜನಕ್ಕಾಗಿ ಕಡಿತವಾಗುತ್ತಿವೆ. ಹೀಗಾಗಿ, ಪತ್ನಿಗೆ ಜೀವನಾಂಶ ನೀಡುವ ಸಂದರ್ಭದಲ್ಲಿ ಈ ಮೊತ್ತಗಳನ್ನು ಪರಿಗಣಿಸಿ ಜೀವನಾಂಶ ಕಡಿತಗೊಳಿಸುವುದಕ್ಕೆ ಅವಕಾಶವಿಲ್ಲ ಎಂದು ತಿಳಿಸಿದೆ.
ಅಲ್ಲದೇ, ಸಿಆರ್‌ಪಿಸಿ ಸೆಕ್ಷನ್ 125ರ (ಜೀವನಾಂಶ ಕೋರಿಕೆ) ಅಡಿಯಲ್ಲಿ ಸಲ್ಲಿಸಲಾದ ಅರ್ಜಿಯ ಪ್ರತಿಯೊಂದು ಪ್ರಕರಣದಲ್ಲೂ ಪತಿ ಕೃತಕ ಕಡಿತಗಳನ್ನು ಸೃಷ್ಟಿಸುವ ಪ್ರವೃತ್ತಿ ಇರುತ್ತದೆ. ಜೀವನಾಂಶ ನಿರಾಕರಿಸುವ ಸಲುವಾಗಿ ನ್ಯಾಯಾಲಯಗಳನ್ನು ದಾರಿ ತಪ್ಪಿಸುವ ಉದ್ದೇಶದಿಂದ ಕಡಿಮೆ (ಟೇಕ್ ಹೋಮ್) ಸಂಬಳ ತೋರಿಸುವ ಪ್ರಯತ್ನ ಮಾಡುತ್ತಾರೆ. ಈ ಪ್ರಕರಣದಲ್ಲಿ ಕಡಿತಗಳು ಶೇ.50ಕ್ಕಿಂತ ಹೆಚ್ಚಾಗಿದ್ದು, ಇದನ್ನು ಕಡಿಮೆ ಮೊತ್ತದ ಜೀವನಾಂಶ ಪಾವತಿಸುವ ಉದ್ದೇಶದಿಂದ ಪತಿ ಹೆಚ್ಚಿನ ಕಡಿತಗಳನ್ನು ತೋರಿಸುವ ವ್ಯವಸ್ಥೆ ಮಾಡಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.
ಹಾಗೆಯೇ, ಪತಿಯ ವೇತನದಲ್ಲಿನ ಕಡಿತಗಳು ಹೆಂಡತಿಗೆ ಕಡಿಮೆ ಪ್ರಮಾಣದ ಜೀವನಾಂಶ ನೀಡುವ ಅಂಶವಾಗಬಾರದು. ಪ್ರಸ್ತುತ ಪ್ರಕರಣದಲ್ಲಿ, ಅರ್ಜಿದಾರರಾದ ಪತಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಶಾಖಾ ವ್ಯವಸ್ಥಾಪಕರಾಗಿದ್ದು, ತಿಂಗಳಿಗೆ ₹1,00,000 ಕ್ಕೂ ಅಧಿಕ ವೇತನ ಪಡೆಯುತ್ತಿದ್ದಾರೆ. ಹೀಗಾಗಿ, ಕೌಟುಂಬಿಕ ನ್ಯಾಯಾಲಯವು ಜೀವನಾಂಶ ನೀಡುವಂತೆ ಸೂಚನೆ ನೀಡಿರುವುದರಲ್ಲಿ ಯಾವುದೇ ದೋಷಗಳು ಕಂಡು ಬಂದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ವಿಚಾರಣೆ ವೇಳೆ ಅರ್ಜಿದಾರರಾದ ಪತಿ ತಾವು ಪಡೆದುಕೊಳ್ಳುತ್ತಿರುವ ವೇತನದ ರಸೀದಿ ಸಲ್ಲಿಸಿದ್ದರು. ವೇತನದಲ್ಲಿನ ಬಹುತೇಕ ಹಣ ಕಡಿತವಾಗುತ್ತಿದೆ. ಹಾಗಾಗಿ, ಜೀವನಾಂಶ ಕಡಿಮೆ ಮಾಡಬೇಕು ಎಂದು ಕೋರಿದ್ದರು. ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಅರ್ಜಿದಾರರ ಮನವಿ ತಿರಸ್ಕರಿಸಿದೆ.
