News

ಕರ್ನಾಟಕ ಮಾಹಿತಿ ಆಯೋಗದಿಂದ ಬಿಡಿಎ ಹಿರಿಯ ಅಧಿಕಾರಿಗಳಿಗೆ ದಂಡ ವಿಧಿಸಿ ಆದೇಶ

Share It

ಬೆಂಗಳೂರು: ಮಾಹಿತಿ ಹಕ್ಕು ಕಾಯ್ದೆಯ ಉಲ್ಲಂಘನೆಗಾಗಿ ಕರ್ನಾಟಕ ಮಾಹಿತಿ ಆಯೋಗ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಇಬ್ಬರು ಹಿರಿಯ ಅಧಿಕಾರಿಗಳಿಗ ಮಾಹಿತಿಯನ್ನು ಒದಗಿಸದಿದ್ದಕ್ಕಾಗಿ ಭಾರಿ ದಂಡ ವಿಧಿಸಿ ಆದೇಶಿಸಿದೆ.

ಆರ್‌ಟಿಐ ಅರ್ಜಿಗಳಿಗೆ ಪ್ರತಿಕ್ರಿಯಿಸಲು ನಿರ್ಲಕ್ಷ್ಯ ವಹಿಸಿದ್ದಕ್ಕಾಗಿ ಬಿಡಿಎ ಉಪ ಕಾರ್ಯದರ್ಶಿ ಉಮೇಶ್ ಅವರಿಗೆ ನಾಲ್ಕು ಪ್ರತ್ಯೇಕ ಪ್ರಕರಣಗಳ ಸಂಬಂಧ 1 ಲಕ್ಷ ರೂ. ದಂಡ ವಿಧಿಸಲಾಗಿದೆ, ಕಾರ್ಯದರ್ಶಿ ಸಿಎಲ್ ಶಿವಕುಮಾರ್ ಅವರಿಗೆ 25,000 ರೂ. ದಂಡ ವಿಧಿಸಲಾಗಿದೆ. ಮೇಲ್ಮನವಿಗಳ ವಿಚಾರಣೆ ನಡೆಸುವಾಗ, ಪದೇ ಪದೇ ಅವಕಾಶಗಳಿದ್ದರೂ ಅಧಿಕಾರಿಗಳು ಆರ್‌ಟಿಐ ಕಾಯ್ದೆಯ ನಿಬಂಧನೆಗಳನ್ನು ಪಾಲಿಸಲು ವಿಫಲರಾಗಿದ್ದಾರೆ. ಉದ್ದೇಶಪೂರ್ವಕವಾಗಿ ಮಾಹಿತಿಯನ್ನು ನಿರಾಕರಿಸುವ ಅಥವಾ ವಿಳಂಬ ಮಾಡುವವರಿಗೆ ದಂಡ ವಿಧಿಸಲು ಕಾಯ್ದೆ ಆಯೋಗಕ್ಕೆ ಅವಕಾಶ ನೀಡಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಎಲ್ಲಾ ಸಾರ್ವಜನಿಕ ಅಧಿಕಾರಿಗಳು ಕಾಯ್ದೆಯ ಸೆಕ್ಷನ್ 4 ರ ಅಡಿಯಲ್ಲಿ ತಮ್ಮ ಕಾರ್ಯನಿರ್ವಹಣೆಯ ಬಗ್ಗೆ ಪ್ರಮುಖ ಮಾಹಿತಿಯನ್ನು ಪೂರ್ವಭಾವಿಯಾಗಿ ಬಹಿರಂಗಪಡಿಸಬೇಕು. ತಮ್ಮ ಅಧಿಕೃತ ವೆಬ್‌ಸೈಟ್‌ಗಳಲ್ಲಿ ನಿಯಮಿತವಾಗಿ ನವೀಕರಿಸಬೇಕು. ಸುಪ್ರೀಂ ಕೋರ್ಟ್ ಸೆಕ್ಷನ್ 4(1)(ಎ) ಮತ್ತು ಸೆಕ್ಷನ್ 4(1)(ಬಿ) ಗಳನ್ನು ಕಟ್ಟುನಿಟ್ಟಾಗಿ ಅನುಷ್ಠಾನಗೊಂಡಿದ್ದು, ಸರ್ಕಾರಿ ಇಲಾಖೆಗಳು ನಿಯಮಿತವಾಗಿ ಮಾಹಿತಿಯನ್ನು ಪ್ರಕಟಿಸುವ ಮೂಲಕ ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳುವಂತೆ ನಿರ್ದೇಶಿಸಲಾಗಿದೆ. ಆದರೆ ಕಾಯ್ದೆ ಜಾರಿಗೆ ಬಂದ ಎರಡು ದಶಕಗಳ ನಂತರವೂ ಹಲವು ಅಧಿಕಾರಿಗಳು ಈ ಕಡ್ಡಾಯ ನಿಬಂಧನೆಗಳನ್ನು ನಿರ್ಲಕ್ಷಿಸುತ್ತಲೇ ಇದ್ದಾರೆ ಎಂದು ಆಯೋಗ ಒತ್ತಿ ಹೇಳಿದೆ.

ಈ ಪ್ರಕರಣದಲ್ಲಿ, ತಕ್ಷಕ್, ತನ್ವಿತಾ ಗೌರ್, ಅಶ್ವಿಜಾ ಪಿ ಮತ್ತು ಬಾಲಚಂದ್ರ ರಾವ್ ಎನ್ನುವ ನಾಲ್ವರು ಅರ್ಜಿದಾರರು ಉಪ ಕಾರ್ಯದರ್ಶಿ ಕಚೇರಿಯಿಂದ ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್ 4 ರ ಅಡಿಯಲ್ಲಿ ಮಾಹಿತಿ ಕೋರಿದ್ದರು. ಅವರ ವಿನಂತಿಗಳಿಗೆ ಉತ್ತರಿಸದಿದ್ದಾಗ, ಅವರು ಕೆಐಸಿಗೆ ಮೇಲ್ಮನವಿ ಸಲ್ಲಿಸಿದ್ದರು. ಆಯೋಗವು ನೀಡಿದ ಶೋ-ಕಾಸ್ ನೋಟಿಸ್ ಹೊರತಾಗಿಯೂ, ಉಮೇಶ್ ಮಾಹಿತಿಯನ್ನು ಒದಗಿಸಲು ವಿಫಲರಾಗಿದ್ದು, ನಾಲ್ಕು ಪ್ರಕರಣಗಳಲ್ಲಿ ತಲಾ 25,000 ರೂ.ಗಳ ದಂಡವನ್ನು ಸೇರಿಸಿ ಒಟ್ಟು 1 ಲಕ್ಷ ರೂ.ಗಳನ್ನು ಪಾವತಿಸಲು ಆದೇಶಿಸಲಾಗಿದೆ. ಶಿಸ್ತು ಕ್ರಮಕ್ಕೆ ಏಕೆ ಶಿಫಾರಸು ಮಾಡಬಾರದು ಎಂದು ಕೇಳಿ ನೋಟಿಸ್ ಅನ್ನು ಸಹ ಜಾರಿಗೊಳಿಸಲಾಗಿದೆ.

ಇನ್ನೊಂದು ಪ್ರಕರಣದಲ್ಲಿ, ಆರ್‌ಟಿಐ ಅರ್ಜಿದಾರರಾದ ಸುರೇಶ್ ಚಂದ್ರ ಬಾಬು ಅವರು ಶಿವಕುಮಾರ್ ಅವರಿಂದ ಹೆಚ್ಚುವರಿ ಭೂಸ್ವಾಧೀನ ಅಧಿಕಾರಿಗಳ ವ್ಯಾಪ್ತಿಗೆ ಸಂಬಂಧಿಸಿದ ಸರ್ಕಾರಿ ಆದೇಶದ ಪ್ರತಿಯನ್ನು ಕೋರಿದ್ದರು. ಇವರ ವಿನಂತಿಯನ್ನು ನಿರ್ಲಕ್ಷಿಸಿದಾಗ ಅರ್ಜಿದಾರರು ಕೆಐಸಿಗೆ ದೂರನ್ನು ನೀಡಿದ್ದರು. ಈ ಸಂಬಂಧ ಆಯೋಗವು ಶಿವಕುಮಾರ್ ಅವರಿಗೆ ದಂಡ ವಿಧಿಸಿ, ಕೇಳಿದ ದಾಖಲೆಗಳನ್ನು ತಕ್ಷಣ ಒದಗಿಸದಿದ್ದರೆ ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್ಚರಿಸಿದೆ.


Share It

You cannot copy content of this page