ದಿನದಿಂದ ದಿನಕ್ಕೆ ಸುಡು ಬಿಸಿಲು ಜಾಸ್ತಿಯಾಗುತ್ತಿದೆ. ಇದರ ನಡುವೆಯೂ ರಾಜ್ಯದ ಹಲವೆಡೆ ಮಾ.16ರಿಂದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.
ಧರ್ಮಸ್ಥಳ, ಧಾರವಾಡ ಸೇರಿ ಉತ್ತರ ಕರ್ನಾಟಕದ ಒಂದರೆಡು ಸ್ಥಳಗಳಲ್ಲಿ ಭಾನುವಾರ ಸಾಧಾರಣ ಮಳೆಯಾಗಿದ್ದು, ದಕ್ಷಿಣ ಕನ್ನಡ, ಉಡುಪಿ, ಮೈಸೂರು, ಚಿಕ್ಕಮಗಳೂರು, ಬಾಗಲಕೋಟೆಯಲ್ಲಿ ಮಾ.16ರಿಂದ ಮಾ.21ವರೆಗೆ, ಕೊಪ್ಪಳ, ವಿಜಯಪುರ ಮತ್ತು ದಾವಣಗೆರೆಯಲ್ಲಿ ಮಾ.16ರಂದು ಮಳೆಯಾಗಲಿದೆ. ಕೊಡಗು, ಹಾಸನದಲ್ಲಿ ಮುಂದಿನ 2 ದಿನ, ಬೆಳಗಾವಿ, ಧಾರವಾಡ, ಗದಗದಲ್ಲಿ ಮಾ.18ರಿಂದ ಮುಂದಿನ 2 ದಿನ ವರ್ಷಧಾರೆಯಾಗಲಿದೆ. ಬೀದರ್, ಕಲಬುರಗಿ, ರಾಯಚೂರು, ಬೆಂಗಳೂರು ನಗರ, ಬೆಂ.ಗ್ರಾಮಾಂತರದಲ್ಲಿ ಮಾ.20ರಿಂದ ಮುಂದಿನ 2 ದಿನ, ಚಿತ್ರದುರ್ಗದಲ್ಲಿ ಮಾ.19ರಿಂದ ಮುಂದಿನ 2 ದಿನ ಸಾಧಾರಣ ಮಳೆ ಇರಲಿದೆ ಎಂದು ಇಲಾಖೆ ಮಾಹಿತಿ ನೀಡಿದೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬಿಸಿಲಿನ ಝಳ ಹೆಚ್ಚಳವಾಗಿದೆ. ಬೆಳಗ್ಗೆ 9ರಿಂದ ಸಂಜೆ 4 ಗಂಟೆವರೆಗೆ ಬಿಸಿಲಿನ ತೀವ್ರತೆ ಮತ್ತು ಸೆಖೆಯಿಂದ ಜನರು ಆಯಾಸಗೊಳ್ಳುತ್ತಿದ್ದಾರೆ. ಕಲಬುರಗಿಯಲ್ಲಿ ಭಾನುವಾರ 38.7 ಡಿ.ಸೆ. ಉಷ್ಣಾಂಶ ದಾಖಲಾಗಿದೆ.
