News

ಸಾಲ ಕೊಡಿಸುವ ನೆಪದಲ್ಲಿ ವಂಚನೆ; ಕಂಪನಿಗಳ ಮಾಲೀಕರ ಬಂಧನ

Share It

ಬೆಂಗಳೂರು: ಪ್ರಧಾನ ಮಂತ್ರಿ ಯೋಜನೆಯ ಹೆಸರಿನಲ್ಲಿ ನಗರದ ಎರಡು ವಿದ್ಯುತ್ ವಾಹನ ಉತ್ಪಾದನಾ ಕಂಪನಿಗಳು ಸಬ್ಸಿಡಿ ಬೆಲೆಯಲ್ಲಿ ವಿದ್ಯುತ್ ದ್ವಿಚಕ್ರ ವಾಹನಗಳನ್ನು ನೀಡಿ ನಂತರ ಜನರನ್ನು ವಂಚಿಸಿದ್ದು, ಈ ಸಂಬಂಧ ಎರಡು ಸಂಸ್ಥೆಗಳ ಮಾಲೀಕರನ್ನು ಬಂಧಿಸಲಾಗಿದೆ.

ನಾಗಸಂದ್ರದ ರಾಮಯ್ಯ ಬಡಾವಣೆಯ ಬಿಳ್ಕರ್ ಟೆಕ್ನಾಲಜಿ ಮಾಲೀಕ ಹನುಮಂತ ಬಿಳ್ಕರ್ ಹಾಗೂ ಪೀಣ್ಯದಲ್ಲಿ ಕಚೇರಿಯನ್ನು ಹೊಂದಿರುವ ಆಪ್ಕೆ ಇ.ವಿ ಮಾಲೀಕ ರಾಕೇಶ್ ಎನ್ನುವವರು ಬಂಧಿತ ಆರೋಪಿಗಳಾಗಿದ್ದಾರೆ. ಕ್ರಮವಾಗಿ ಫೆ 11 ಮತ್ತು 23 ರಂದು ಪೀಣ್ಯ ಮತ್ತು ಬಾಗಲಗುಂಟೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಸಂಬಂಧ ಈ ಕ್ರಮವನ್ನು ಕೈಗೊಳ್ಳಲಾಗಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ವಾಯುವ್ಯ ವಿಭಾಗದ ಡಿಸಿಪಿ ಡಿ.ಎಲ್ ನಾಗೇಶ್, ಎರಡೂ ಕಂಪನಿಗಳು ತಮ್ಮ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಸುಲಭವಾಗಿ ಮಾರಲು ತಾವೇ ಸಾಲದ ವ್ಯವಸ್ಥೆ ಮಾಡುವುದಾಗಿ ಹೇಳಿ ಮೊದಲು ಗ್ರಾಹಕರಿಗೆ ನಂಬಿಸಿದ್ದಾರೆ. ನಂತರ ಸಾಲವನ್ನು ದ್ವಿಚಕ್ರ ವಾಹನದ ಎರಡು ಪಟ್ಟು ಸಿಗುವಂತೆ ನೋಡಿಕೊಂಡು ಕೇವಲ ಮೂರ್ನಾಲ್ಕು ತಿಂಗಳ ಸಾಲದ ಕಂತುಗಳನ್ನು ಕಟ್ಟಿದರೆ ದ್ವಿಚಕ್ರ ವಾಹನಗಳು ಪೂರ್ತಿಯಾಗಿ ತಮ್ಮದಾಗುತ್ತವೆ ಎಂದು ಹೇಳಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ಸಾಲದ ಕಂತುಗಳನ್ನು ಕೆಲ ತಿಂಗಳ ಕಾಲ ಕಟ್ಟಿದ ಕಂಪನಿಗಳು ನಂತರ ಯಾವುದೇ ಕಂತನ್ನು ಪಾವತಿಸಿಲ್ಲ ಆಗ ಗ್ರಾಹಕರಿಗೆ ಬ್ಯಾಂಕ್ ಗಳು ಮತ್ತು ಫೈನಾನ್ಸ್ ಕಂಪನಿಗಳಿಂದ ಕಂತುಗಳನ್ನು ಕಟ್ಟುವಂತೆ ಕರೆ ಬರಲು ಪ್ರಾರಂಭವಾಗಿದೆ. ಆಗ ಅನುಮಾನಗೊಂಡ ಗ್ರಾಹಕರು ಪೊಲೀಸ್ ಠಾಣೆಗಳಿಗೆ ದೂರನ್ನು ನೀಡಿದ್ದಾರೆ. ಕೆಲ ಗ್ರಾಹಕರಿಗೆ ದ್ವಿಚಕ್ರ ವಾಹನಗಳನ್ನು ನೀಡಲಾಗಿದ್ದು, ಇನ್ನೂ ಕೆಲವರಿಗೆ ವಾಹನಗಳನ್ನು ಕೂಡ ನೀಡದೆ ವಂಚಿಸಲಾಗಿದೆ. ಸರಿಸುಮಾರು 900 ಗ್ರಾಹಕರು ಮೋಸಕ್ಕೆ ಒಳಗಾಗಿದ್ದಾರೆ ಎಂದು ತಿಳಿಸಿದ್ದಾರೆ.


Share It

You cannot copy content of this page