ಬೆಂಗಳೂರು: ತಡ ರಾತ್ರಿ ಸಂಭವಿಸಿದ ಸಿಲಿಂಡರ್ ಸ್ಪೋಟದಲ್ಲಿ 28 ವರ್ಷದ ಮಹಿಳೆ ಮತ್ತು 9 ವರ್ಷ ವಯಸ್ಸಿನ ಮಗು ಗಂಭೀರವಾಗಿ ಗಾಯಗೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ಈ ಅವಘಡದಲ್ಲಿ ವಾಷಿಂಗ್ ಮಷೀನ, ಟಿವಿ, ಬಟ್ಟೆಗಳು ಸೇರಿದಂತೆ ಹಲವು ಗೃಹುಪಯೋಗಿ ವಸ್ತುಗಳಿಗೆ ಹಾನಿಯಾಗುವುದು ಸಹ ತಿಳಿದು ಬಂದಿದೆ. ಘಟನೆಯ ಕುರಿತು ಮುನೇಶ್ವರ ಬಡಾವಣೆಯ ನಿವಾಸಿ ಅಮಿತಾ ಪಾಲ್ ನೀಡಿರುವ ದೂರಿನ ಅನ್ವಯ ಅವಘಡಕ್ಕೆ ತುತ್ತಾಗಿರುವ ಕುಟುಂಬವು ನಾಲ್ಕನೇಯ ಮಹಡಿಯಲ್ಲಿ ವಾಸಿಸುತ್ತಿತ್ತು, ಮಾರ್ಚ್ 11 ರಂದು ಸುಮಾರು 11.40 ಗಂಟೆಗೆ ಜೋರಾದ ಶಬ್ದ ಕೇಳಿದ್ದರಿಂದ ಹೊರಗೆ ಬಂದು ನೋಡಿದಾಗ ಮನೆ ಹೊತ್ತಿ ಉರಿಯುತ್ತಿರುವುದು ಕಂಡು ಬಂದಿದೆ.
ಆಗ ದೂರುದಾರರ ಪತಿ ಅವರ ಮನೆಗೆ ನುಗ್ಗಿ ತಾಯಿ ಮತ್ತು ಮಗಳನ್ನು ಸುರಕ್ಷಿತವಾಗಿ ಹೊರತಂದರೂ ಸಹ ಅವರಿಬ್ಬರಿಗೂ ಸಾಕಷ್ಟು ಗಾಯಗಳಾಗಿದ್ದವು ಆ ಸಮಯಕ್ಕೆ ಅಕ್ಕ ಪಕ್ಕದವರೂ ಸಹ ಬೆಂಕಿಯನ್ನು ನಂದಿಸಿದ್ದಾರೆ. ಸುಟ್ಟು ಗಾಯಗಳಾಗಿದ್ದ ಇಬ್ಬರನ್ನೂ ಸಹ ಕೂಡಲೇ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
