ಡೆಹ್ರಾಡೂನ್: ಹಿಂದೂಗಳಲ್ಲದವರು ಧರ್ಮದ ಕುರಿತು ತಮ್ಮ ನಂಬಿಕೆಯನ್ನು ದೃಢೀಕರಿಸುವ ಅಫಿಡವಿಟ್ ಸಲ್ಲಿಸಿದರೆ ಮಾತ್ರ ಬದರಿನಾಥ ಮತ್ತು ಕೇದಾರನಾಥದಲ್ಲಿ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಬದರಿ ಕೇದಾರ ದೇವಾಲಯ ಸಮಿತಿಯ ಮುಖ್ಯಸ್ಥ ಹೇಮಂತ್ ದ್ವಿವೇದಿ ಹೇಳಿದ್ದಾರೆ.
ಗರ್ವಾಲ್‌ನಲ್ಲಿರುವ 2 ಮತ್ತು ಸಮಿತಿಯ ವ್ಯಾಪ್ತಿಯ 45 ಇತರ ದೇವಾಲಯಗಳಲ್ಲಿ ಹಿಂದೂಯೇತರರ ಪ್ರವೇಶವನ್ನು ನಿಷೇಧಿಸಿರುವ ಕುರಿತು ಮತ್ತು ಕೇದಾರನಾಥಕ್ಕೆ ಆಗಾಗ್ಗೆ ಭೇಟಿ ನೀಡುವ ಬಾಲಿವುಡ್ ನಟಿ ಸಾರಾ ಅಲಿ ಖಾನ್ ಬಗ್ಗೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ಅವರು ಸನಾತನದಲ್ಲಿ ನಂಬಿಕೆ ಹೊಂದಿದ್ದಾರೆಂದು ಅಫಿಡವಿಟ್ ಸಲ್ಲಿಸಿದರೆ ಅವರಿಗೆ ದರ್ಶನಕ್ಕೆ ಅವಕಾಶವಿದೆ. ಅಫಿಡವಿಟ್ ಗಳನ್ನು ಇನ್ನು ಮುಂದೆ ಯಾವಾಗಲೂ ಲಭ್ಯವಿರುವಂತೆ ನೋಡಿಕೊಳ್ಳಲಾಗುವುದು ಎಂದಿದ್ದಾರೆ.
ಸನಾತನ ಧರ್ಮ ವಿಶಾಲವಾಗಿದ್ದು, ಅದರ ಅನುಯಾಯಿಗಳು ಪ್ರಪಂಚದಾದ್ಯಂತ ಇದ್ದಾರೆ. ಯಾವುದೇ ವ್ಯಕ್ತಿ, ಅವರ ಹಿನ್ನೆಲೆಯನ್ನು ಲೆಕ್ಕಿಸದೆ, ಸನಾತನ ಧರ್ಮದಲ್ಲಿ ನಂಬಿಕೆಯನ್ನು ವ್ಯಕ್ತಪಡಿಸಿ ಅಫಿಡವಿಟ್ ಸಲ್ಲಿಸಿದರೆ, ಬದರಿನಾಥ ಮತ್ತು ಕೇದಾರನಾಥದಲ್ಲಿ ದರ್ಶನಕ್ಕೆ ಅವಕಾಶ ನೀಡಬಹುದು. ಸನಾತನ ಧರ್ಮದಲ್ಲಿ ನಂಬಿಕೆ ಇರುವವರೆಲ್ಲರೂ ಸನಾತನಿಗಳು ಎಂದು ವ್ಯಾಖ್ಯಾನಿಸಿದ್ದಾರೆ.
ಉತ್ತರಾಖಂಡ ರಾಜ್ಯದ ಬದರಿನಾಥ, ಕೇದಾರನಾಥ ಮತ್ತು ಇತರ 45 ಪ್ರಮುಖ ದೇವಾಲಯಗಳು ಬಿಕೆಟಿಸಿ ಆಡಳಿತ ಮಂಡಳಿಯ ವ್ಯಾಪ್ತಿಗೆ ಬರುತ್ತವೆ. ಆದಿ ಶಂಕರಾಚಾರ್ಯರು ರೂಪಿಸಿರುವ ಮಾರ್ಗಸೂಚಿಗಳನ್ನ ಅನುಸರಿಸಲಾಗುತ್ತಿದೆ. ಧಾರ್ಮಿಕ ಪ್ರವಾಸೋದ್ಯಮವು ರಾಜ್ಯದ ಆರ್ಥಿಕತೆಯ ಬೆನ್ನೆಲುಬಾಗಿದೆ. ದುರದೃಷ್ಟವಶಾತ್ ಕೆಲವರಿಗೆ ಎರಡರ ನಡುವೆ ವ್ಯತ್ಯಾಸವನ್ನು ಗುರುತಿಸಲು ಸಾಧ್ಯವಾಗುತ್ತಿಲ್ಲ. ಎಂದು ಅಸಮಾಧಾನ ಹೊರ ಹಾಕಿದ್ದಾರೆ.
ದೇವಾಲಯದ ಆವರಣದಲ್ಲಿ ಫೋಟೋಗಳು ಮತ್ತು ವೀಡಿಯೊಗಳನ್ನು ನಿಷೇಧಿಸಲಾಗಿದೆ. ಈ ವರ್ಷದ ಚಾರ್ ಧಾಮ್ ಯಾತ್ರೆ ಏಪ್ರಿಲ್ 19 ರಿಂದ ಪ್ರಾರಂಭವಾಗಲಿದೆ ಎಂದು ಹೇಮಂತ್ ದ್ವಿವೇದಿ ಮಾಹಿತಿ ನೀಡಿದ್ದಾರೆ.
