ಬೆಂಗಳೂರು: ಭೂ ಅಕ್ರಮ ಆರೋಪಕ್ಕೆ ಸಂಬಂಧಿಸಿದಂತೆ ಹಾಸನ ಜಿಲ್ಲೆಯ ಬೇಲೂರು ವಿಧಾನ ಸಭಾ ಕ್ಷೇತ್ರದ ಶಾಸಕ ಕೆ.ಎಸ್ ಲಿಂಗೇಶ್ ಅವರ ವಿರುದ್ಧ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಬೆಂಗಳೂರಿನ ವಿಶೇಷ ನ್ಯಾಯಾಲಯ ಆದೇಶಿಸಿದೆ.
ಬೆಂಗಳೂರಿನ ಜನಪ್ರತಿನಿಧಿಗಳ ವಿರುದ್ಧದ ಕ್ರಿಮಿನಲ್ ಪ್ರಕರಣಗಳ ವಿಚಾರಣಾ ವಿಶೇಷ ನ್ಯಾಯಾಲಯದ ನ್ಯಾಯಾಧೀಶೆ ಜೆ. ಪ್ರೀತ್ ಶಾಸಕ ಕೆ.ಎಸ್ ಲಿಂಗೇಶ್ ಸೇರಿದಂತೆ 15 ಮಂದಿ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ. ಬೇಲೂರು ಪೊಲೀಸ್ ಠಾಣೆ ಎಸ್.ಎಚ್.ಒ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಆರ್.ಪಿ.ಸಿ ಸೆಕ್ಷನ್ 156(3) ಅಡಿ ತನಿಖೆ ನಡೆಸಿ ಜುಲೈ 7ರೊಳಗೆ ವರದಿ ನೀಡುವಂತೆ ನಿರ್ದೇಶಿಸಿದ್ದಾರೆ.
ಶಾಸಕ ಲಿಂಗೇಶ್ ಹಾಗೂ ಅಷ್ಟೇ ಅಲ್ಲದೇ ಐವರು ತಹಶೀಲ್ದಾರರ ವಿರುದ್ಧವೂ ತನಿಖೆ ನಡೆಸುವಂತೆ ಕೋರ್ಟ್ ಆದೇಶಿಸಿದೆ. ಈ ಹಿಂದೆ ಬೇಲೂರು ತಹಶೀಲ್ದಾರ್ ಆಗಿ ಕಾರ್ಯ ನಿರ್ವಹಿಸಿರುವ ಎ. ಜಗದೀಶ್, ಹೆಚ್.ಎಸ್ ಪರಮೇಶ್, ಜೆ. ಉಮೇಶ್, ಬಿ.ಎಸ್ ಪುಟ್ಟಶೆಟ್ಟಿ, ಯು.ಎಮ್ ಮೋಹನ್ ಕುಮಾರ್ ವಿರುದ್ಧವೂ ತನಿಖೆ ನಡೆಸುವಂತೆ ಕೋರ್ಟ್ ನಿರ್ದೇಶಿಸಿದೆ.
ದೂರುದಾರರ ಆರೋಪವೇನು: ತಾಲೂಕು ಭೂ ಸಕ್ರಮೀಕರಣ ಸಮಿತಿ ಅಧ್ಯಕ್ಷರಾದ ಶಾಸಕ ಕೆ.ಎಸ್ ಲಿಂಗೇಶ್, ಸದಸ್ಯರಾದ ಜಿ.ಕೆ.ಕುಮಾರ್, ಶೈಲಾ ಮೋಹನ್, ಟಿ.ಆರ್ ರಮೇಶ್, ಪರ್ವತಗೌಡ, ಎಂ.ಆರ್ ಚೇತನ, ಈಶ್ವರ್ ಪ್ರಸಾದ್, ಎಸ್.ಎನ್ ಲಿಂಗೇಶ್, ರಂಗನಾಥ್ ಹಾಗೂ ಭಾಗ್ಯಮ್ಮ ಅವರು 2016-2022ರ ನಡುವೆ ಅಂದಾಜು 775 ಕೋಟಿ ರೂಪಾಯಿ ಮೌಲ್ಯದ 2750 ಎಕರೆ ಸರ್ಕಾರಿ ಭೂಮಿಯನ್ನು 1250ಕ್ಕೂ ಹೆಚ್ಚು ಮಂದಿಗೆ ಅಕ್ರಮವಾಗಿ ಮಂಜೂರು ಮಾಡಿದ್ದಾರೆ ಎಂದು ದೂರುದಾರರಾದ ಕೆ.ಸಿ ರಾಜಣ್ಣ ಆರೋಪಿಸಿದ್ದಾರೆ.
ಹಾಗೆಯೇ, ಅರ್ಜಿದಾರರ ನೈಜತೆ ಪರಿಶೀಲಿಸದೆ ತಾಲೂಕಿನ ಹೊರಗಿನ ಜನರಿಗೂ ಭೂಮಿ ಹಂಚಿಕೆ ಮಾಡಿದ್ದಾರೆ. ಭೂ ಮಂಜೂರಾತಿಗೆ ಹಾಗೂ ಸಕ್ರಮಕ್ಕೆ ಸಲ್ಲಿಸಿದ್ದ ನಮೂನೆ 53 ರ ಅರ್ಜಿಗಳು ಕೂಡ ನಾಪತ್ತೆಯಾಗಿವೆ. ಬೇಲೂರು ಪಟ್ಟಣ ವ್ಯಾಪ್ತಿಯಲ್ಲೂ ಅಕ್ರಮಾಗಿ ಭೂ ಮಂಜೂರು ಮಾಡಲಾಗಿದೆ. ಇದಕ್ಕೆ ಅಧಿಕಾರಿಗಳು ಕೂಡ ಸಾಥ್ ನೀಡಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.
ಅಲ್ಲದೇ, ಸಕಲೇಶಪುರದ ಈ ಹಿಂದಿನ ಉಪವಿಭಾಗಾಧಿಕಾರಿ ಪ್ರತೀಕ್ ಭಾಯಿಲ್ ಪ್ರಕರಣದ ತನಿಖೆ ನಡೆಸಿ ಸರ್ಕಾರಕ್ಕೆ ವರದಿ ನೀಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಲೂರು ಪೊಲೀಸರಿಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಆದ್ದರಿಂದ ತನಿಖೆ ನಡೆಸಲು ನಿರ್ದೇಶಬೇಕು ಹಾಗೂ ಆರೋಪಿತರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಅರ್ಜಿದಾರರ ಪರ ವಕೀಲರಾದ ಉಮಾಪತಿ, ಸುಧಾ ಕಟ್ವಾ ವಾದ ಮಂಡಿಸಿದರು.