ಬೆಂಗಳೂರು: ಜನರು ತಮ್ಮ ವೈಯಕ್ತಿಕ ಸೇಡು ತೀರಿಸಿಕೊಳ್ಳಲು ಸಲ್ಲಿಸುವ ದೂರಗಳ ಬಗ್ಗೆ ಎಚ್ಚರ ವಹಿಸುವಂತೆ ಹೈಕೋರ್ಟ್ ಬಿಬಿಎಂಪಿಗೆ ಸೂಚನೆ ನೀಡಿದೆ.
ಬೆಂಗಳೂರಿನ ನಾಗವಾರ ನಿವಾಸಿ ರಾಮಮೂರ್ತಿ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ಈ ಸಲಹೆ ನೀಡಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರ ರಾಮಮೂರ್ತಿ ಅವರಿಗೆ ಸೇರಿದ ಕಟ್ಟಡದ ಕೆಲ ಭಾಗವನ್ನು ಬಿಬಿಎಂಪಿ ರಸ್ತೆ ಅಗಲೀಕರಣಕ್ಕಾಗಿ ತೆರವು ಮಾಡಿತ್ತು. ಈ ಹಿನ್ನೆಲೆಯಲ್ಲಿ ತೆರವಾಗಿದ್ದ ಕಟ್ಟಡದ ಜಾಗದಲ್ಲಿ ಪ್ಲಾಸ್ಟಿಂಗ್ ಮಾಡಿಸಿ, ರೋಲಿಂಗ್ ಶೆಟರ್ ಅಳವಡಿಸಿದ್ದರು.
ಈ ಕುರಿತಂತೆ ರಾಮಮೂರ್ತಿ ಸಹೋದರ ರಾಧಾಕೃಷ್ಣ ಬಿಬಿಎಂಪಿಗೆ ದೂರು ನೀಡಿದ್ದರು. ದೂರಿನಲ್ಲಿ, ರಾಮಮೂರ್ತಿ ಅವರು ಮುನಿಸಿಪಲ್ ಕಾರ್ಪೋರೇಷನ್ ಕಾಯ್ದೆ ಸೆಕ್ಷನ್ 321ರ ಅಡಿಯಲ್ಲಿ ಅನುಮತಿ ಪಡೆಯದೆ ಕಟ್ಟಡ ಮಾರ್ಪಾಡು ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದರು.
ದೂರನ್ನು ಪರಿಗಣಿಸಿ ಬಿಬಿಎಂಪಿ ರಾಮಮೂರ್ತಿ ಅವರಿಗೆ ಕಾರಣ ಕೇಳಿ ನೋಟಿಸ್ ನೀಡಿತ್ತು. ಹಾಗೆಯೇ ಕಾನೂನು ಕ್ರಮ ಜರುಗಿಸುವ ಎಚ್ಚರಿಕೆ ರವಾನಿಸಿತ್ತು. ಬಿಬಿಎಂಪಿಯ ಈ ಕ್ರಮ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಮೇಲ್ಮನವಿ ಪ್ರಾಧಿಕಾರ ತಿರಸ್ಕರಿಸಿತ್ತು. ಹೀಗಾಗಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್ ಆದೇಶ: ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಕೆಎಂಸಿ ಕಾಯ್ದೆ ನಿಯಮಗಳ ಪ್ರಕಾರ ಕೇವಲ ದುರಸ್ತಿ ಮಾಡುವುದರಿಂದ ಕಟ್ಟಡದ ಸ್ಥಿತಿಗತಿ ಅಥವಾ ವಿಸ್ತೀರ್ಣ ಬದಲಾಣೆಯಾಗುವುದಿಲ್ಲ. ಪ್ರಕರಣದಲ್ಲಿ ಕಟ್ಟಡವನ್ನು ವಾಸಯೋಗ್ಯವನ್ನಾಗಿ ಮಾಡಲು ದುರಸ್ತಿ ಮಾಡಲಾಗಿದೆ. ಆದ್ದರಿಂದ, ಪಾಲಿಕೆ ಅರ್ಜಿದಾರರಿಗೆ ನೋಟಿಸ್ ನೀಡಿರುವ ಕ್ರಮ ಸರಿಯಲ್ಲ.
ಇನ್ನು ದೂರನ್ನು ಗಮನಿಸಿದರೆ ಸಹೋದರರ ನಡುವಿನ ವೈಯಕ್ತಿಕ ಸೇಡಿನ ಹಿನ್ನೆಲೆಯಲ್ಲಿ ಉಂಟಾದ ವ್ಯಾಜ್ಯದಂತೆ ಕಾಣುತ್ತದೆ. ವೈಯಕ್ತಿಕ ಸೇಡಿನ ಹಿನ್ನೆಲೆಯಲ್ಲಿ ಸಲ್ಲಿಕೆಯಾಗುವ ದೂರುಗಳ ಬಗ್ಗೆ ಮಹಾನಗರ ಪಾಲಿಕೆ ಎಚ್ಚರಿಕೆಯಿಂದ ವ್ಯವಹರಿಸಬೇಕು ಎಂದು ಹೈಕೋರ್ಟ್ ಸಲಹೆ ನೀಡಿದೆ. ಇದೇ ವೇಳೆ, ರಾಮಮೂರ್ತಿ ವಿರುದ್ಧ ನೀಡಿದ್ದ ದೂರು ಆಧರಿಸಿ ಕೆಎಂಸಿ ಕಾಯ್ದೆ ಸೆಕ್ಷನ್-321(3) ಅಡಿಯಲ್ಲಿ ಬಿಬಿಎಂಪಿ ಜಾರಿ ಮಾಡಿದ್ದ ನೋಟಿಸನ್ನು ರದ್ದುಪಡಿಸಿದೆ.