ಲೇಖನ: ಮಂಜೇಗೌಡ ಕೆ.ಜಿ. ವಕೀಲರು, ಎಂಜಿ ಲೀಗಲ್, ಬೆಂಗಳೂರು.
ನಿರೀಕ್ಷಣಾ ಜಾಮೀನು/ಜಾಮೀನು ಕೋರಿ ಅರ್ಜಿ ಸಲ್ಲಿಸಿದಾಗ ನ್ಯಾಯಾಲಯಗಳು ಆದೇಶ ಪ್ರಕಟಿಸಲು ಅತಿಯಾದ ವಿಳಂಬ ಮಾಡಬಾರದು ಜತೆಗೆ ಆದೇಶಗಳು ಉದ್ದವಾಗಿರಕೂಡದು ಎಂದು ಸುಪ್ರೀಂ ಕೋರ್ಟ್ ತಾಕೀತು ಮಾಡಿದೆ.
ಪ್ರಕರಣವೊಂದರಲ್ಲಿ ನಿರೀಕ್ಷಣಾ ಜಾಮೀನು ನಿರಾಕರಿಸಿದ್ದ ಬಾಂಬೆ ಹೈಕೋರ್ಟ್ ನ ಕ್ರಮ ಪ್ರಶ್ನಿಸಿ ಸುಮಿತ್ ಸುಭಾಷ್ ಚಂದ್ರ ಗಂಗವಾಲ್ ಹಾಗೂ ಮತ್ತೋರ್ವ ಆರೋಪಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಬಿ.ಆರ್ ಗವಾಯಿ, ನ್ಯಾ. ವಿಕ್ರಮ್ ನಾಥ್ ಹಾಗೂ ನ್ಯಾ. ಸಂಜಯ್ ಕರೋಲ್ ಅವರಿದ್ದ ತ್ರಿಸದಸ್ಯ ಪೀಠ ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ನಿರೀಕ್ಷಣಾ ಜಾಮೀನು, ಜಾಮೀನು ಕೋರಿದಾಗ ಅಂತಹ ಪ್ರಕರಣಗಳಲ್ಲಿ ಸವಿಸ್ತಾರವಾದ ಸಾಕ್ಷ್ಯ ವಿಚಾರಣೆ ಮಾಡುವುದು ಹಾಗೂ ಉದ್ದುದ್ದದ ಆದೇಶಗಳನ್ನು ಬರೆಯುವುದನ್ನು ನ್ಯಾಯಾಲಯಗಳು ತಪ್ಪಿಸಬೇಕು. ವಿಚಾರಣೆ ಪೂರ್ಣಗೊಳಿಸಿದ ನಂತರ ಆದೇಶ ಪ್ರಕಟಿಸಲು ಅತಿಯಾದ ವಿಳಂಬ ಮಾಡುವುದನ್ನು ಕೈಬಿಡಬೇಕು ಎಂದು ಸುಪ್ರೀಂಕೋರ್ಟ್ ಹೇಳಿದೆ.
ಅಲ್ಲದೇ, ನ್ಯಾಯಾಲಯಗಳು ನಾಗರಿಕರ ಸ್ವಾತಂತ್ರ್ಯದ ವಿಷಯಕ್ಕೆ ಸಂಬಂಧಿಸಿದ ಆದೇಶಗಳನ್ನು ನೀಡುವಾಗ ತ್ವರಿತವಾಗಿ ಕಾರ್ಯ ನಿರ್ವಹಿಸಬೇಕು. ಅತಿಯಾದ ವಿಳಂಬ ಸಲ್ಲದು ಎಂದು ಅಭಿಪ್ರಾಯಪಟ್ಟಿದೆ. ಇದೇ ವೇಳೆ ಬಾಂಬೆ ಹೈಕೋರ್ಟ್ ನಿರೀಕ್ಷಣಾ ಜಾಮೀನು ಆದೇಶವನ್ನು 5 ವಾರ ಕಾಲ ವಿಳಂಬ ಮಾಡಿ ಪ್ರಕಟಿಸಿದ ಕ್ರಮವನ್ನು ಸುಪ್ರೀಂ ಕೋರ್ಟ್ ಟೀಕಿಸಿದ್ದು, ಅರ್ಜಿದಾರರಿಗೆ ನೀಡಿದ್ದ ಮಧ್ಯಂತರ ನಿರೀಕ್ಷಣಾ ಜಾಮೀನನ್ನು ಷರತ್ತುಗಳೊಂದಿಗೆ ಪೂರ್ಣ ಪ್ರಮಾಣದಲ್ಲಿ ವಿಸ್ತರಿಸಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರರು ನಿರೀಕ್ಷಣಾ ಜಾಮೀನು ಕೋರಿ ಬಾಂಬೆ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ಪೂರ್ಣಗೊಳಿಸಿದ್ದ ಬಾಂಬೆ ಹೈಕೋರ್ಟ್ ಆದೇಶವನ್ನು 5 ವಾರಗಳ ಬಳಿಕ ಪ್ರಕಟಿಸಿತ್ತು. 13 ಪುಟಗಳ ಆದೇಶ ನೀಡಿ ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಅರ್ಜಿದಾರರು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
Petition(s) for Special Leave to Appeal (Crl.) No(s). 3561/2023