ಬೆಂಗಳೂರು: ಸರ್ಕಾರಿ ಜಮೀನು ಗುತ್ತಿಗೆ ಪಡೆದು ಅದಕ್ಕೆ ರಿಯಾಯಿತಿ ದರದಲ್ಲಿ ಬಾಡಿಗೆ ಪಾವತಿಸುತ್ತಿರುವ ‘ಕರ್ನಾಟಕ ಗಾಲ್ಫ್ ಅಸೋಸಿಯೇಷನ್’ ಸಾರ್ವಜನಿಕ ಪ್ರಾಧಿಕಾರವಾಗಿದೆ. ಹೀಗಾಗಿ, ಗಾಲ್ಫ್ ಅಸೋಸಿಯೇಷನ್ ಆರ್‌ಟಿಐ ವ್ಯಾಪ್ತಿಗೆ ಒಳಪಡುತ್ತದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಗಾಲ್ಫ್ ಕ್ಲಬ್ ಸಾರ್ವಜನಿಕ ಪ್ರಾಧಿಕಾರವಾಗಿದ್ದು, ಮಾಹಿತಿ ನೀಡುವುದು ಕಡ್ಡಾಯ ಎಂದು ಕರ್ನಾಟಕ ಮಾಹಿತಿ ಆಯೋಗ ನೀಡಿದ್ದ ಆದೇಶ ಪ್ರಶ್ನಿಸಿ ಕರ್ನಾಟಕ ಗಾಲ್ಫ್ ಅಸೋಸಿಯೇಷನ್ ಹೈಕೋರ್ಟ್ ಮೆಟ್ಟಿಲೇರಿತ್ತು.
ಈ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಎನ್.ಎಸ್. ಸಂಜಯ್ ಗೌಡ ಅವರಿದ್ದ ಪೀಠ ಗಾಲ್ಫ್ ಕ್ಲಬ್ ಮನವಿಯನ್ನು ವಜಾಗೊಳಿಸಿದೆ. ಬೆಂಗಳೂರು ಟರ್ಫ್ ಕ್ಲಬ್, ಮೈಸೂರು ಟರ್ಫ್ ಕ್ಲಬ್, ಲೇಡಿಸ್ ಕ್ಲಬ್ ಗಳು ಸಹ ರಿಯಾಯಿತಿ ದರದಲ್ಲಿ ಸರ್ಕಾರಿ ಭೂಮಿಯನ್ನು ಗುತ್ತಿಗೆ ಪಡೆದಿದ್ದು ಸರ್ಕಾರಿ ಪ್ರಾಧಿಕಾರಗಳಾಗಿ ಪರಿಗಣಿಸಲ್ಪಟ್ಟಿವೆ.
ಅಂತೆಯೇ, 124 ಎಕರೆ ಸರ್ಕಾರಿ ಜಮೀನನ್ನು 2010 ರಿಂದ 30 ವರ್ಷಗಳ ಅವಧಿಗೆ ಗುತ್ತಿಗೆ ಪಡೆದಿರುವ ಮತ್ತು ತನ್ನ ನಿವ್ವಳ ಆದಾಯದಲ್ಲಿ ಶೇಕಡಾ 2 ರಷ್ಟು ಮೊತ್ತವನ್ನಷ್ಟೇ (ರಿಯಾಯಿತಿ ದರ) ಬಾಡಿಗೆ ಪಾವತಿಸುತ್ತಿರುವ ಗಾಲ್ಫ್ ಕ್ಲಬ್ ಸಹ ಆರ್‌ಟಿಐ ವ್ಯಾಪ್ತಿಗೆ ಬರಲಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಮಾಹಿತಿ ಆಯೋಗ ನೀಡಿರುವ ಆದೇಶ ಸೂಕ್ತವಾಗಿದೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಪ್ರಕರಣದ ಹಿನ್ನೆಲೆ: ಗಾಲ್ಫ್ ಕ್ಲಬ್ ಗೆ ಸಂಬಂಧಿಸಿದಂತೆ ಕೆಲ ಮಾಹಿತಿ ಕೋರಿ ವಕೀಲ ಎಸ್. ಉಮಾಪತಿ 2012ರ ಆಗಸ್ಟ್ 30 ರಂದು ಅರ್ಜಿ ಸಲ್ಲಿಸಿದ್ದರು. ಮಾಹಿತಿ ನಿರಾಕರಿಸಿದ್ದ ಕ್ಲಬ್, ತಾನು ಮಾಹಿತಿ ಹಕ್ಕು ಕಾಯ್ದೆಗೆ ಒಳಪಡುವುದಿಲ್ಲ ಎಂದಿತ್ತು. ಬಳಿಕ ವಕೀಲ ಉಮಾಪತಿ ಮಾಹಿತಿ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ಮಾಹಿತಿ ಆಯೋಗ, ಗಾಲ್ಫ್ ಅಸೋಸಿಯೇಷನ್ ಅನ್ನು ಸಾರ್ವಜನಿಕ ಪ್ರಾಧಿಕಾರ ಎಂದು ಘೋಷಿಸಿ 2014ರ ಅಕ್ಟೋಬರ್ 14ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಗಾಲ್ಫ್ ಅಸೋಸಿಯೇಷನ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿತ್ತು.
(WP 55173/2014)
