ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು.
ಪತಿ ಬೇರೊಬ್ಬ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದಾಗ ಪತ್ನಿಗೆ ಆತನ ಮನೆಯಲ್ಲಿ ಇರುವಂತೆ ಒತ್ತಾಯಿಸಲಾಗದು ಎಂದು ಹಿಮಾಚಲ ಪ್ರದೇಶ ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ಪತ್ನಿ ತನ್ನನ್ನು ತೊರೆದು ಹೋಗಿದ್ದು, ವಿವಾಹ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕೌಟುಂಬಿಕ ನ್ಯಾಯಾಲಯ ಪರಿಗಣಿಸಿಲ್ಲ ಎಂದು ಆಕ್ಷೇಪಿಸಿ ಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ, ಸತ್ಯೇನ್ ವೈದ್ಯ ಅವರಿದ್ದ ಪೀಠ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದೆ.
ಪೀಠ ತನ್ನ ಆದೇಶದಲ್ಲಿ, ಪತಿ ತನ್ನೊಂದಿಗೆ ಬೇರೊಬ್ಬ ಮಹಿಳೆಯನ್ನು ಇಟ್ಟುಕೊಂಡಿರುವಾಗ ಹೆಂಡತಿಯನ್ನು ವೈವಾಹಿಕ ಮನೆಯಲ್ಲೇ ವಾಸಿಸುವಂತೆ ಒತ್ತಾಯಿಸಲು ಸಾಧ್ಯವಿಲ್ಲ. ಇಂತಹ ಸಂದರ್ಭದಲ್ಲಿ ಪತ್ನಿ ವೈವಾಹಿಕ ಮನೆಯನ್ನು ತೊರೆದುಹೋದಾಗ ಮತ್ತು ಕ್ರೌರ್ಯದ ಆರೋಪ ಪರಿಗಣಿಸಿ ವಿಚ್ಛೇದನ ನೀಡಲಾಗದು ಎಂದು ಪತಿಯ ಮನವಿಯನ್ನು ವಜಾಗೊಳಿಸಿದೆ.
ಅಲ್ಲದೇ, ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ಕೋರಿಕೆಯನ್ನು ತಿರಸ್ಕರಿಸಿ ನೀಡಿರುವ ಆದೇಶವನ್ನು ಪ್ರಶ್ನಿಸಿರುವ ಪತಿ, ಪತ್ನಿ ಸದಾ ಕಿರಿಕಿರಿ ಮಾಡುತ್ತಿದ್ದಳು ಹಾಗೂ ತನ್ನನ್ನು ತೊರೆದು ಹೋಗಿದ್ದಾಳೆ. ಆದ್ದರಿಂದ ಸೆಕ್ಷನ್ 13 ರ ಅಡಿ ಆಕೆಯ ನಡವಳಿಕೆಯನ್ನು ಕ್ರೌರ್ಯ ವ್ಯಾಪ್ತಿಯಲ್ಲಿ ಪರಿಗಣಿಸಿ ವಿಚ್ಛೇದನ ನೀಡುವಂತೆ ಕೋರಿದ್ದಾರೆ. ಆದರೆ, ಪತಿ ಆರೋಪಗಳು ಸಾಮಾನ್ಯ ಸ್ವರೂಪದಲ್ಲಿದ್ದು, ಕ್ರೌರ್ಯದ ಯಾವುದೇ ನಿರ್ದಿಷ್ಟ ಅಂಶವನ್ನು ಉಲ್ಲೇಖಿಸಿಲ್ಲ.
ಮತ್ತೊಂದೆಡೆ ಪತ್ನಿ ತನ್ನ ಗಂಡ ಬೇರೊಬ್ಬ ಮಹಿಳೆಯನ್ನು ಮನೆಗೆ ಕರೆತಂದಿದ್ದಾನೆ. ಆಕೆಯೊಂದಿಗಿನ ಸಂಬಂಧಕ್ಕೆ ಇಬ್ಬರು ಮಕ್ಕಳಿದ್ದಾರೆ ಎಂಬ ಕುರಿತಂತೆ ವಿವರವಾಗಿ ಮಾಹಿತಿ ನೀಡಿದ್ದಾರೆ. ಈ ವಿಚಾರವಾಗಿ ಪತಿ ಸೂಕ್ತ ಸಮರ್ಥನೆ ನೀಡಿಲ್ಲ. ಇವುಗಳನ್ನು ಗಮನಿಸಿದಾಗ ಪತ್ನಿ ಪ್ರತ್ಯೇಕವಾಗಿ ವಾಸಿಸಲು ಸಮರ್ಥ ಕಾರಣವಿದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಂತಿಮವಾಗಿ ಪತಿಯ ವಿಚ್ಛೇದನದ ಅರ್ಜಿಯನ್ನು ವಜಾಗೊಳಿಸಿ, ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದಿದೆ.
(FAO No. : 437 of 2010)
