ಬೆಂಗಳೂರು: ಅಕ್ರಮ ಆಸ್ತಿ ಗಳಿಕೆ ಆರೋಪ ಪ್ರಕರಣದಲ್ಲಿ ಬಂಧನಕ್ಕೆ ಸಿಲುಕಿರುವ ಬೆಂಗಳೂರಿನ ಕೆ.ಆರ್ ಪುರ ತಹಶೀಲ್ದಾರ್ ಎಸ್. ಅಜಿತ್ ಕುಮಾರ್ ರೈ ನ್ನು ಹೆಚ್ಚಿನ ವಿಚಾರಣೆ ಹಿನ್ನೆಲೆಯಲ್ಲಿ ಪೊಲೀಸ್ ವಶಕ್ಕೆ ನೀಡಲಾಗಿದೆ.
ಪೊಲೀಸ್ ಕಸ್ಟಡಿಗೆ ಕೇಳಿ ಸಲ್ಲಿಸಿದ್ದ ಮನವಿ ಪರಿಗಣಿಸಿರುವ ಬೆಂಗಳೂರಿನ ಲೋಕಾಯುಕ್ತ ವಿಶೇಷ ನ್ಯಾಯಾಲಯ ಆರೋಪಿಯನ್ನು ಜುಲೈ 6 ರವರೆಗೆ ಲೋಕಾಯುಕ್ತ ಪೊಲೀಸರ ವಶಕ್ಕೆ ನೀಡಿದೆ.
ಲೋಕಾಯುಕ್ತ ಪೊಲೀಸರು ಅಜಿತ್ ರೈ ಮನೆ ಮೇಲೆ ದಾಳಿ ನಡೆಸಿದ ವೇಳೆ ವಶಪಡಿಸಿಕೊಂಡ ವಸ್ತುಗಳ ಮಾಹಿತಿಯನ್ನು ಒಳಗೊಂಡ ರಿಮ್ಯಾಂಡ್ ಅರ್ಜಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅಲ್ಲದೇ ಆರೋಪಿಯನ್ನು ಮತ್ತಷ್ಟು ವಿಚಾರಣೆ ನಡೆಸಲು 10 ದಿನಗಳ ಕಾಲ ವಶಕ್ಕೆ ನೀಡುವಂತೆ ಮನವಿ ಮಾಡಿದ್ದರು.
ಮನವಿ ಆಲಿಸಿದ ನ್ಯಾಯಾಧೀಶ ಕೆ. ಶ್ರೀಕಾಂತ್ ಅವರು ಆರೋಪಿತ ಅಧಿಕಾರಿಯನ್ನು 7 ದಿನಗಳ ಕಾಲ ಪೊಲೀಸರ ವಶಕ್ಕೆ ನೀಡಿ ಆದೇಶಿದ್ದಾರೆ. ಇದಕ್ಕೂ ಮುನ್ನ ಅಜಿತ್ ಪರ ವಕೀಲರು ಪೊಲೀಸ್ ಕಸ್ಟಡಿಗೆ ನೀಡುವುದನ್ನು ಆಕ್ಷೇಪಿಸಿ ವಾದ ಮಂಡಿಸಿದರಾದರೂ ನ್ಯಾಯಾಲಯ ಪರಿಗಣಿಸಲು ನಿರಾಕರಿಸಿದೆ.
ಜಾಮೀನು ಅರ್ಜಿ: ಪೊಲೀಸರು ಬಂಧಿಸಿದ ಬಳಿಕ ಅಜಿತ್ ಕುಮಾರ್ ರೈ ಪರ ವಕೀಲರು ಆರೋಪಿಗೆ ಜಾಮೀನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಲೋಕಾಯುಕ್ತ ಪರ ವಕೀಲರಿಗೆ ಸೂಚಿಸಿರುವ ನ್ಯಾಯಾಲಯ ವಿಚಾರಣೆಯನ್ನು ಜುಲೈ 6 ಕ್ಕೆ ಮುಂದೂಡಿದೆ.
ಅನುಕಂಪದ ನೌಕರಿ: ಆರೋಪಿ ಅಜಿತ್ ರೈ ಅನುಕಂಪದ ಆಧಾರದಲ್ಲಿ ಕಂದಾಯ ಇಲಾಖೆಯಲ್ಲಿ ಎಫ್.ಡಿ.ಎ ನೌಕರಿ ಗಿಟ್ಟಿಸಿದ್ದರು. ಬಳಿಕ ಬೆಂಗಳೂರು ಗ್ರಾಮಾಂತರ ದೇವನಹಳ್ಳಿ, ಚಿಕ್ಕಬಳ್ಳಾಪುರ ಇತರೆಡೆ ಕೆಲಸ ಮಾಡುತ್ತಾ ಹಂತಹಂತವಾಗಿ ತಹಶಿಲ್ದಾರ್ ಹುದ್ದೆಗೇರಿದ್ದರು. ಲೋಕಾಯುಕ್ತ ಪೊಲೀಸರ ದಾಳಿ ವೇಳೆ ಅಂದಾಜು ಐನೂರು ಕೋಟಿ ರೂ ಮೌಲ್ಯದ ಆಸ್ತಿ ಪತ್ತೆಯಾಗಿದೆ ಎನ್ನಲಾಗಿದೆ.
