ಮುಂಬೈ: ವಕೀಲೆ ಹಾಗು ಅವರ ಪತಿಗೆ ಮಾನಸಿಕ ಮತ್ತು ದೈಹಿಕ ಕಿರುಕುಳ ನೀಡಿದ ಪೊಲೀಸರಿಂದ 2.5 ಲಕ್ಷ ವಸೂಲಿ ಮಾಡಿ ಪರಿಹಾರ ನೀಡುವಂತೆ ಮಹಾರಾಷ್ಟ್ರ ಮಾನವ ಹಕ್ಕುಗಳ ಆಯೋಗ ಅಲ್ಲಿನ ಪೊಲೀಸ್ ಇಲಾಖೆ ಮುಖ್ಯಸ್ಥರಿಗೆ ಆದೇಶಿಸಿದೆ.
ಇದೇ ವೇಳೆ ನಾಗರಿಕರೊಂದಿಗೆ ಸೌಜನ್ಯದಿಂದ ಮತ್ತು ಜವಾಬ್ದಾರಿಯುತವಾಗಿ ವರ್ತಿಸುವ ಕುರಿತು ಪೊಲೀಸ್ ಅಧಿಕಾರಿಗಳಿಗೆ ನಿಯಮಿತವಾಗಿ ತರಗತಿಗಳನ್ನು ಆಯೋಜಿಸುವಂತೆ ಮಹಾರಾಷ್ಟ್ರ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ನಿರ್ದೇಶನ ನೀಡಿದೆ.
ವಕೀಲೆ ಅಂಕಿತಾ ಶಾ ಮುಖೇಜಾ ಹಾಗು ಅವರ ಪತಿ ನಿಲೇಶ್ ಮುಖೇಜಾ ತಮಗೆ ಕಿರುಕುಳ ನೀಡಿದ ಪೊಲೀಸರ ವಿರುದ್ಧ ಮಹಾರಾಷ್ಟ್ರ ಮಾನವ ಹಕ್ಕುಗಳ ಆಯೋಗದಲ್ಲಿ ದೂರು ದಾಖಲಿಸಿದ್ದರು. ಬೀದಿ ನಾಯಿಗಳಿಗೆ ನೆರೆ ಮನೆಯವರು ಕಲ್ಲು ಹೊಡೆದು ಹಿಂಸಿಸಿದ ವಿಚಾರವಾಗಿ ಪೊಲೀಸರಿಗೆ ದೂರು ನೀಡಿದ್ದೆವು. ಆದರೆ, ಪೊಲೀಸರು ತಮ್ಮನ್ನು ಠಾಣೆಗೆ ಕರೆಸಿ ಅಕ್ರಮ ಬಂಧನದಲ್ಲಿಟ್ಟರು ಹಾಗೂ ಕಿರುಕುಳ ನೀಡಿದರೆಂದು ಆರೋಪಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಆಯೋಗ, ಪೊಲೀಸರು ದೂರುದಾರರ ಘನತೆ ಹಾಗೂ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಹೀಗಾಗಿ 6 ವಾರಗಳಲ್ಲಿ 2.5 ಲಕ್ಷ ರೂಪಾಯಿಯನ್ನು ತಪ್ಪಿತಸ್ಥ ಪೊಲೀಸರಿಂದ ವಸೂಲು ಮಾಡಿ ಸಂತ್ರಸ್ತ ದೂರುದಾರರಿಗೆ ಪರಿಹಾರವಾಗಿ ನೀಡಬೇಕು ಎಂದು ಆದೇಶಿಸಿದೆ. ಹಾಗೆಯೇ, ಪೊಲೀಸ್ ಠಾಣೆಗಳಲ್ಲಿ ಇಂತಹ ಘಟನೆಗಳು ಏರಿಕೆಯಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ಕಳವಳ ವ್ಯಕ್ತಪಡಿಸಿದೆ.
ಇದೇ ವೇಳೆ ನಾಲ್ವರು ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳದ ನಾಗಪುರ ಪೊಲೀಸ್ ಆಯುಕ್ತರ ನಡವಳಿಕೆಯನ್ನು ಟೀಕಿಸಿರುವ ಆಯೋಗ, ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲು ದಂಪತಿಗೆ ಸ್ವಾತಂತ್ರ್ಯವಿದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಇನ್ನು ತಪ್ಪಿತಸ್ಥ ಪೊಲೀಸರ ವಿರುದ್ಧ ಇಲಾಖಾ ವಿಚಾರಣೆ ನಡೆಸಲಾಗಿದೆ ಹಾಗೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು ವರ್ಗಾವಣೆ ಮಾಡಲಾಗಿದೆ ಎಂಬ ವಾದವನ್ನು ಪರಿಗಣಿಸಿ ದಂಡ ವಿಧಿಸುವುದನ್ನು ಕೈಬಿಡುವಂತೆ ಕೋರಿದ್ದ ಪೊಲೀಸರ ಮನವಿಯನ್ನು ಆಯೋಗ ತಿರಸ್ಕರಿಸಿದೆ.
