ಕರ್ತವ್ಯ ನಿರ್ಲಕ್ಷ್ಯದ ಹಿನ್ನೆಲೆಯಲ್ಲಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ವೇದಿಕೆ ಸಕಲೇಶಪುರ ಸರ್ಕಾರಿ ಆಸ್ಪತ್ರೆಯ ವೈದ್ಯ ಡಾ. ಪುರುಷೋತ್ತಮ್ ಗೆ 11 ಲಕ್ಷ ರೂಪಾಯಿ ದಂಡ ವಿಧಿಸಿದೆ.
ಸಕಲೇಶಪುರ ತಾಲೂಕು ಆನೇಮಹಲ್ ಗ್ರಾಮದ ಎಚ್.ಎಂ.ಮೋಹನ್ ಕುಮಾರ್ ತಮ್ಮ ಪತ್ನಿ ವಿ.ಎಂ. ಆಶಾರನ್ನು ಹೆರಿಗೆ ಪೂರ್ವ ತಪಾಸಣೆಗಾಗಿ ಸಕಲೇಶಪುರದ ಕ್ರಾಫರ್ಡ್ ಸರ್ಕಾರಿ ಆಸ್ಪತ್ರೆಗೆ 2021ರ ಮಾ.26ರಂದು ಕರೆದೊಯ್ದಿದ್ದರು.
ಆಶಾ ಅವರನ್ನು ಡಾ.ಪುರುಷೋತ್ತಮ ಪರೀಕ್ಷಿಸಿ, ಸ್ಕ್ಯಾನ್ ವರದಿಯನ್ವಯ ಮಗು ಹೊಟ್ಟೆಯಲ್ಲೇ ಮರಣ ಹೊಂದಿದೆ ಎಂದು ತಿಳಿಸಿದ್ದರು. ತಕ್ಷಣವೇ ಗರ್ಭಪಾತ ಶಸ್ತ್ರಚಿಕಿತ್ಸೆ ಮಾಡುವಂತೆ ಕೇಳಿಕೊಂಡರೂ ವೈದ್ಯರು ಕೋರಿಕೆಯನ್ನು ತಿರಸ್ಕರಿಸಿದರು ಎನ್ನಲಾಗಿತ್ತು. ಅದೇ ದಿನ ರಾತ್ರಿ ಆಶಾ ಹೊಟ್ಟೆನೋವಿನಿಂದ ನರಳಾಡಿ, ಮೂರ್ಛೆ ಸ್ಥಿತಿಗೆ ಹೋಗಿದ್ದರು.
ಡಾ.ಪುರುಷೋತ್ತಮ ಮರುದಿನ ಬೆಳಗ್ಗೆ ಪರೀಕ್ಷಿಸಿ, ಹೆಚ್ಚಿನ ಚಿಕಿತ್ಸೆಗೆ ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸುವಂತೆ ತಿಳಿಸಿದ್ದರು. ಆಸ್ಪತ್ರೆಯಲ್ಲಿ ಆಶಾಗೆ ಗರ್ಭಪಾತವಾಗಿ, ರಕ್ತಸ್ರಾವದ ಕಾರಣ 2021ರ ಮಾ.29 ರಂದು ಮೃತಪಟ್ಟಿದ್ದರು.
ಆಶಾ ಸಾವಿಗೆ ವೈದ್ಯರ ನಿರ್ಲಕ್ಷ್ಯ ಕಾರಣ ಎಂದು ಆರೋಪಿಸಿ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗೆ ದೂರು ಸಲ್ಲಿಸಲಾಗಿತ್ತು. ವೇದಿಕೆ ಅಧ್ಯಕ್ಷರಾದ ಸಿ.ಎಂ, ಚಂಚಲ, ಸದಸ್ಯರಾದ ಎಚ್.ವಿ.ಮಹಾದೇವ ಹಾಗೂ ಆರ್.ಅನುಪಮಾ ವಿಚಾರಣೆ ನಡೆಸಿ, 10 ಲಕ್ಷ ರೂ.ಗಳನ್ನು ಪ್ರಕರಣ ದಾಖಲಾದ ದಿನದಿಂದ ಶೇ.9ರಂತೆ ಬಡ್ಡಿ ಸೇರಿಸಿ ಆರು ವಾರಗಳೊಳಗಾಗಿ ದೂರುದಾರರಿಗೆ ಪಾವತಿಸುವಂತೆ ಹಾಗೂ ಖರ್ಚು ವೆಚ್ಚವಾಗಿ ಒಂದು ಲಕ್ಷ ರೂಪಾಯಿ ಪಾವತಿಸಲು ಆದೇಶಿಸಿದ್ದಾರೆ.
ಅಲ್ಲದೇ, ವೈದ್ಯಕೀಯ ವರದಿಯನ್ನು ಕೆಟ್ಟ ಬರವಣಿಗೆಯಲ್ಲಿ ನಮೂದಿಸಿದ ಕಾರಣ 50 ಸಾವಿರ ರೂಪಾಯಿ ದಂಡವನ್ನು ಗ್ರಾಹಕ ಸಂರಕ್ಷಣಾ ನಿಧಿಗೆ ಪಾವತಿಸುವಂತೆ ಆದೇಶಿಸಲಾಗಿದೆ.
