ಯಾವುದೇ ದಾವೆದಾರರು ಅಥವಾ ವಕೀಲರು ಕೈಮುಗಿದು ವಾದಿಸಬೇಕಿಲ್ಲ, ನ್ಯಾಯಾಧೀಶರು ಅವರ ಸಾಂವಿಧಾನಿಕ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗೆಯೇ, ನ್ಯಾಯಾಲಯದ ಮುಂದೆ ವಾದಿಸುವುದು ದಾವೆದಾರರ ಸಾಂವಿಧಾನಿಕ ಹಕ್ಕು ಎಂದು ಕೇರಳ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ.
ದಾವೆದಾರರೊಬ್ಬರು ತಮ್ಮ ಪ್ರಕರಣದಲ್ಲಿ ವಾದ ಮಂಡಿಸುವಾಗ ಕೈಮುಗಿದು, ಕಣ್ಣೀರಿಟ್ಟಿದ್ದನ್ನು ಗಮನಿಸಿದ ನ್ಯಾಯಮೂರ್ತಿ ಪಿ.ವಿ. ಕುನ್ಹಿಕೃಷ್ಣನ್ ಅವರು ಈ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನ್ಯಾಯಾಲಯವು ನ್ಯಾಯದೇಗುಲ ಎಂದೇ ಪ್ರಚಲಿತವಾದರೂ ವಕೀಲರಿಂದ ಹಾಗೂ ಕಕ್ಷಿದಾರರಿಂದ ವಿಧೇಯತೆಯನ್ನು ಬಯಸುವಂತಹ ಯಾವುದೇ ದೇವರುಗಳು ಪೀಠದಲ್ಲಿ ಕುಳಿತಿರುವುದಿಲ್ಲ. ವಾದ ಮಂಡಿಸುವವರು ನ್ಯಾಯಾಲಯದ ಘನತೆಯನ್ನು ಕಾಯ್ದುಕೊಂಡರೆ ಅಷ್ಟೇ ಸಾಕು ಎಂದು ನ್ಯಾಯಮೂರ್ತಿ ಪಿ.ವಿ. ಕುನ್ಹಿಕೃಷ್ಣನ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಅಲ್ಲದೇ, ದಾವೆದಾರರು ಅಥವಾ ವಕೀಲರು ಕಾನೂನಿನ ನ್ಯಾಯಾಲಯದ ಮುಂದೆ ವಾದಿಸುವ ಸಾಂವಿಧಾನಿಕ ಹಕ್ಕು ಹೊಂದಿರುತ್ತಾರೆ. ಸಾಮಾನ್ಯವಾಗಿ ಕಾನೂನು ನ್ಯಾಯಾಲಯವನ್ನು ನ್ಯಾಯದೇಗುಲ ಎನ್ನಲಾಗುತ್ತದೆ. ಆದರೆ, ಪೀಠದಲ್ಲಿ ಯಾವುದೇ ದೇವರು ಕುಳಿತಿಲ್ಲ. ನ್ಯಾಯಮೂರ್ತಿಗಳು ತಮ್ಮ ಸಾಂವಿಧಾನಿಕ ಕರ್ತವ್ಯ ಹಾಗೂ ಕಟ್ಟುಪಾಡುಗಳನ್ನು ನಿಭಾಯಿಸುತ್ತಾರೆ. ಹೀಗಾಗಿ, ಕೈಮುಗಿದು, ಕಣ್ಣೀರಿಟ್ಟು ವಾದಿಸಬೇಕಿಲ್ಲ ಎಂದು ನ್ಯಾಯಪೀಠ ಹೇಳಿದೆ.
