ಬೆಂಗಳೂರು: 21 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಸಿಗರೇಟ್ ಮಾರಾಟ ಮಾಡುವುದನ್ನು ನಿಷೇಧಿಸಿರುವ ರಾಜ್ಯ ಸರ್ಕಾರ, ರಾಜ್ಯಾದ್ಯಂತ ಹುಕ್ಕಾ ಬಾರ್ ಗಳನ್ನು ರದ್ದುಪಡಿಸಿ ಕಾನೂನು ಜಾರಿ ಮಾಡಿದೆ.
ಈ ಕುರಿತಂತೆ ವಿಧಾನಸಭೆಯಲ್ಲಿ ತಂಬಾಕು ಉತ್ಪನ್ನಗಳ ಕಾಯಿದೆ (COTPA) ಕೋಟ್ಪಾ ಕಾಯ್ದೆಗೆ ಅಂಗೀಕಾರ ಸಿಕ್ಕಿದ್ದು, ಈ ಮೂಲಕ ರಾಜ್ಯದಾದ್ಯಂತ ಎಲ್ಲಾ ಹುಕ್ಕಾ ಬಾರ್ ಗಳನ್ನು ಅಧಿಕೃತವಾಗಿ ನಿಷೇಧಿಸಲಾಗಿದೆ. ರಾಜ್ಯದಲ್ಲಿ ಈಗಾಗಲೇ ಹುಕ್ಕಾಬಾರ್ ನಿಷೇಧಿಸಲಾಗಿದ್ದು, ಇದಕ್ಕೆ ವಿಧಾನಸಭೆಯಲ್ಲಿ ಮಸೂದೆ ಮಂಡಿಸಿ ಅಂಗೀಕಾರ ಪಡೆಯಲಾಗಿದೆ.
ಹುಕ್ಕಾ ಬಾರನ್ನು ಅನಧಿಕೃತವಾಗಿ ನಡೆಸಿದರೆ ಒಂದು ವರ್ಷಕ್ಕೆ ಕಡಿಮೆ ಇಲ್ಲದ ಹಾಗೂ 3 ವರ್ಷಕ್ಕೆ ವಿಸ್ತರಣೆ ಮಾಡುವ ಜೈಲು ಶಿಕ್ಷೆಗೆ ಅವಕಾಶ ಇದೆ. ಮತ್ತು 50 ರಿಂದ ಒಂದು ಲಕ್ಷ ದಂಡ ವಿಧಿಸಲು ಅವಕಾಶ ವಿಧೇಯಕದಲ್ಲಿದೆ.
ಇನ್ನು ಸಿಗರೇಟ್ ಸೇರಿದಂತೆ ತಂಬಾಕು ಉತ್ಪನ್ನಗಳನ್ನು 18 ವರ್ಷದೊಳಗಿನವರಿಗೆ ಮಾರಾಟ ಮಾಡಬಾರದು ಎಂಬ ನಿಯಮವನ್ನು ಪರಿಷ್ಕರಿಸಿದ್ದು 21 ವರ್ಷಕ್ಕೆ ಏರಿಸಲಾಗಿದೆ. ಅದರಂತೆ 21 ವರ್ಷದೊಳಗಿನವರಿಗೆ ಸಿಗರೇಟ್ ಮಾರಾಟ ಮಾಡುವುದು ನಿಯಮಬಾಹಿರವಾಗಲಿದೆ. ಈ ಅಪರಾಧಕ್ಕೆ ವಿಧಿಸುತ್ತಿದ್ದ ದಂಡದ ಮೊತ್ತವನ್ನು 100 ರೂ ನಿಂದ 1000 ರೂಗಳಿಗೆ ಏರಿಸಲಾಗಿದೆ. ಜೊತೆಗೆ ಶಾಲಾ ಕಾಲೇಜು ಆವರಣದಲ್ಲಿ ತಂಬಾಕು ಮಾರಾಟ ನಿಷೇಧ ಮಿತಿ ನೂರು ಯಾರ್ಡ್ ಇದ್ದಿದ್ದನ್ನು ನೂರು ಮೀಟರ್ ಎಂದು ಬದಲಾವಣೆ ಮಾಡಲಾಗಿದೆ.
