ಹಿಂದೂ ಉತ್ತರಾಧಿಕಾರ ಕಾಯ್ದೆಗೆ ತಿದ್ದುಪಡಿ ತರುವ ಮುನ್ನವೇ ಮಗಳು ಮೃತಪಟ್ಟಿದ್ದಾಳೆ ಎಂಬ ಕಾರಣಕ್ಕೆ ಆಕೆಯ ಉತ್ತರಾಧಿಕಾರಿಗಳಿಗೆ ಆಸ್ತಿ ಹಕ್ಕು ಇಲ್ಲ ಎಂದು ಹೇಳಲು ಬರುವುದಿಲ್ಲ ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.
ಹೆಣ್ಣು ಮಕ್ಕಳಿಗೆ ಕೊ-ಪಾರ್ಸೆನರಿ ಹಕ್ಕುಗಳನ್ನು ನೀಡಲು ಕಾಯ್ದೆಗೆ ತಿದ್ದುಪಡಿಯಾದ ಅವಧಿಗೆ (2005ರ ಸೆಪ್ಟೆಂಬರ್ 9ಕ್ಕೆ) ಮುನ್ನವೇ ಮಹಿಳೆ ಮೃತಪಟ್ಟಿದ್ದಾರೆ ಎಂಬ ಕಾರಣಕ್ಕೆ ಪೂರ್ವಜರ ಆಸ್ತಿಯ ಮೇಲಿನ ಆಸ್ತಿಯ ಹಕ್ಕುಗಳನ್ನು ಆಕೆಯ ಕಾನೂನಾತ್ಮಕ ವಾರಸುದಾರರಿಂದ ಕಸಿದುಕೊಳ್ಳುವಂತಿಲ್ಲ ಎಂದು ಹೈಕೋರ್ಟ್ ಇತ್ತೀಚಿನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.
ಗದಗ ಜಿಲ್ಲೆಯ ನರಗುಂದ ತಾಲೂಕಿನ ನಿವಾಸಿ ಚನ್ನಬಸಪ್ಪ ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸುವ ವೇಳೆ ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ಪೀಠ, ವಿನೀತಾ ಶರ್ಮಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನ ವಿಸ್ತೃತ ಪೀಠವು ಈ ನಿಲುವನ್ನು ಸ್ಪಷ್ಟಪಡಿಸಿದೆ ಎಂದು ಹೇಳಿದೆ.
ಪೀಠ ತನ್ನ ತೀರ್ಪಿನಲ್ಲಿ, ತಿದ್ದುಪಡಿ ಕಾಯ್ದೆಯು ಲಿಂಗ ಸಮಾನತೆಯನ್ನು ಖಾತ್ರಿಪಡಿಸುತ್ತದೆ ಹಾಗೂ ಹೆಣ್ಣುಮಕ್ಕಳು ಮತ್ತು ಅವರ ವಾರಸುದಾರರು ಅವರ ಸರಿಯಾದ ಪಾಲನ್ನು ಪಡೆಯಲು ಅವಕಾಶ ಕಲ್ಪಿಸುತ್ತದೆ.
ಅದೇ ರೀತಿ ತಿದ್ದುಪಡಿ ನಿಯಮಗಳು ಪೂರ್ವಾನ್ವಯವಾಗಿವೆ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ. ಹಾಗೆಯೇ, ಮಿತಾಕ್ಷರ ಸಹ-ಪಾರ್ಸೆನರಿಯು ಮಗಳನ್ನು ಕೊ-ಪಾರ್ಸೆನರ್ ಎಂದು ಉಲ್ಲೇಖಿಸುತ್ತದೆ. ಪೂರ್ವಜರ ಆಸ್ತಿ, ಮಗಳು ತೀರಿಕೊಂಡಾಗ ಆಕೆಯ ಕಾನೂನು ವಾರಸುದಾರರಿಗೆ ಲಭಿಸಲಿದೆ. ಗಂಡು ಮಕ್ಕಳಂತೆಯೇ ಹೆಣ್ಣು ಮಕ್ಕಳಿಗೂ ಆಸ್ತಿ ಹಕ್ಕು ನೀಡುವ ಮೂಲಕ ಐತಿಹಾಸಿಕ ಅಸಮತೋಲನವನ್ನು ಸರಿಪಡಿಸುತ್ತದೆ. ಹೀಗಾಗಿ ಪುತ್ರರಂತೆಯೇ ಪುತ್ರಿ/ಮಗಳು ಕೂಡ ಮರಣ ಹೊಂದಿದಾಗ ಅವರು ಪೂರ್ವಜರ ಆಸ್ತಿಯಲ್ಲಿ ಪುತ್ರರಿಗೆ ಸಮಾನವಾದ ಹಕ್ಕುಗಳನ್ನು ಹೊಂದಿರುತ್ತಾರೆ” ಎಂದು ಹೈಕೋರ್ಟ್ ತೀರ್ಪಿನಲ್ಲಿ ವಿವರಿಸಿದೆ.
ಹಿನ್ನೆಲೆ: 2023ರ ಅಕ್ಟೋಬರ್ 3ರಂದು ಗದಗ್ ನ ಪ್ರಧಾನ ಸಿವಿಲ್ ನ್ಯಾಯಾಲಯ ಮೃತ ಪುತ್ರಿಯರ ಕಾನೂನಾತ್ಮಕ ವಾರಸುದಾರರಿಗೆ ಅವರ ಪೂರ್ವಜರ ಆಸ್ತಿಯಲ್ಲಿ ಸಮಪಾಲು ನೀಡಿ ಆದೇಶಿಸಿತ್ತು ಈ ಆದೇಶ ಪ್ರಶ್ನಿಸಿ ಚನ್ನಬಸಪ್ಪ ಎಂಬುವವರು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.
ಹಿಂದೂ ಉತ್ತರಾಧಿಕಾರ ಕಾಯ್ದೆ, 2005 ರ ತಿದ್ದುಪಡಿಗೆ ಮೊದಲೇ ಪುತ್ರಿಯರು ನಿಧನರಾಗಿದ್ದರು. ಹೀಗಾಗಿ ಮೃತ ಪುತ್ರಿಯರ ಕಾನೂನುಬದ್ಧ ವಾರಸುದಾರರಿಗೆ ಸಮಾನ ಪಾಲು ನೀಡುವ ಸಿವಿಲ್ ಕೋರ್ಟ್ ಆದೇಶ ಸೂಕ್ತವಲ್ಲ ಎಂದು ಆಕ್ಷೇಪಿಸಿದ್ದರು.
ಪ್ರಕರಣದ ವಿಚಾರಣೆ ನಡೆಸಿದ ಹೈಕೋರ್ಟ್, ವಿನೀತಾ ಶರ್ಮಾ ಪ್ರಕರಣದ ತೀರ್ಪು ಹಿಂದಿನ ಪ್ರಕರಣಗಳಿಗೆ ಅನ್ವಯಿಸುತ್ತದೆ. 2005 ರ ತಿದ್ದುಪಡಿಯ ಪ್ರಯೋಜನವನ್ನು ಹೆಣ್ಣುಮಕ್ಕಳಿಗೆ ವಿಸ್ತರಿಸುತ್ತದೆ, ಅಂದರೆ ಪೂರ್ವಜರ ಮಗಳ ಕಾನೂನುಬದ್ಧ ಉತ್ತರಾಧಿಕಾರಿಗಳು ಪೂರ್ವಜರ ಆಸ್ತಿಯ ಪಾಲು ಹೊಂದುತ್ತಾರೆ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
