ದೆಹಲಿ: ನಿಮ್ಮ ತನಿಖಾ ವೈಖರಿಯೇ ಕ್ರಮಬದ್ಧವಾಗಿಲ್ಲ, ಅಮಾನವೀಯ ರೀತಿಯಲ್ಲಿ ತನಿಖೆ ಮಾಡುವುದನ್ನು ಬಿಡಿ. ನ್ಯಾಯಯುತ ತನಿಖೆ ನಡೆಸಿ ಎಂದು ಸುಪ್ರೀಂಕೋರ್ಟ್ ದೇಶದ ಉನ್ನತ ತನಿಖಾ ಸಂಸ್ಥೆ ಜಾರಿ ನಿರ್ದೇಶನಾಲಯಕ್ಕೆ ಚಾಟಿ ಬೀಸಿದೆ.
ಹರಿಯಾಣದ ಮಾಜಿ ಕಾಂಗ್ರೆಸ್ ಶಾಸಕ ಸುರೇಂದರ್ ಪನ್ವರ್ ಅವರನ್ನು ಅಕ್ರಮ ಹಣ ವರ್ಗಾವಣೆ ಆರೋಪದಡಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿ, ಸತತ 14 ತಾಸು ವಿಚಾರಣೆಗೆ ಒಳಪಡಿಸಿದ್ದರು. ಈ ಕ್ರಮವನ್ನು ತೀವ್ರವಾಗಿ ಖಂಡಿಸಿರುವ ಸುಪ್ರೀಂಕೋರ್ಟ್ ಅಧಿಕಾರಿಗಳ ನಡೆಗೆ ಅಸಮಾಧಾನ ವ್ಯಕ್ತಪಡಿಸಿದೆ.
ನ್ಯಾ. ಅಭಯ್ ಶ್ರೀನಿವಾಸ್ ಓಕ ಹಾಗು ನ್ಯಾ. ಅಗಸ್ಟಿನ್ ಜಾರ್ಜ್ ಅವರಿದ್ದ ಪೀಠ, ನೀವು ನಡೆಸುವ ವಿಚಾರಣಾ ಶೈಲಿಯೇ ಕ್ರಮಬದ್ಧವಾಗಿಲ್ಲ. ಅಮಾನವೀಯ ರೀತಿಯಲ್ಲಿ ವಿಚಾರಣೆ ನಡೆಸುತ್ತಿದ್ದೀರಿ. ನಿಮ್ಮ ವಿಚಾರಣೆಯ ಶೈಲಿ ಶಾಕ್ ತರುವಂತಿದೆ ಎಂದು ಇಡಿ ಅಧಿಕಾರಿಗಳ ಕಿವಿ ಹಿಂಡಿದೆ. ಅಲ್ಲದೇ, ದರ್ಪ, ಅಹಂಕಾರವನ್ನು ಬಿಟ್ಟು ನ್ಯಾಯಯುತ ತನಿಖೆ ನಡೆಸುವಂತೆ ತಾಕೀತು ಮಾಡಿದೆ.
ಪ್ರಕರಣದ ಹಿನ್ನೆಲೆ: ಕಾಂಗ್ರೆಸ್ ನ ಮಾಜಿ ಶಾಸಕ ಸುರೇಂದರ್ ಪನ್ವರ್ ಅವರನ್ನು ಇಡಿ ಅಧಿಕಾರಿಗಳು ಕಳೆದ ಜುಲೈನಲ್ಲಿ ಬಂಧಿಸಿದ್ದರು. ಸತತ 14 ಗಂಟೆಗೂ ಹೆಚ್ಚು ಕಾಲ ವಿಚಾರಣೆಗೆ ಒಳಪಡಿಸಿದ್ದರು. ತಮ್ಮ ಬಂಧನ ಕಾನೂನು ಬಾಹಿರವೆಂದು ಆರೋಪಿಸಿ ಶಾಸಕ ಪನ್ವರ್ ಹೈಕೋರ್ಟ್ ಮೊರೆ ಹೋಗಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್ ಆರೋಪಿಯ ಬಂಧನ ನಿಯಮಾನುಸಾರ ಇಲ್ಲ ಎಂದು ಜಾಮೀನು ನೀಡಿತ್ತು.
ಹೈಕೋರ್ಟ್ ಅದೇಶ ಪ್ರಶ್ನಿಸಿ ಇಡಿ ಅಧಿಕಾರಿಗಳು ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿದ್ದರು. ಇಡಿ ಪರ ವಕೀಲರು ಆರೋಪಿತ ಶಾಸಕರನ್ನು ನಿರಂತರ 14 ಗಂಟೆ ವಿಚಾರಣೆ ನಡೆಸಿರಲಿಲ್ಲ. ಉಟಕ್ಕೆ ಅವಕಾಶ ನೀಡಲಾಗಿತ್ತು. ತುರ್ತು ವಿಚಾರಣೆ ಅಗತ್ಯವಿದ್ದುದರಿಂದ ತಡರಾತ್ರಿವರೆಗೂ ವಿಚಾರಣೆಗೆ ಒಳಪಡಿಸಲಾಗಿತ್ತು ಎಂದು ವಾದಿಸಿದ್ದರು.