News

ಪರಿಹಾರ ನೀಡದೆ ಭೂಮಿ ವಶಪಡಿಸಿಕೊಳ್ಳುವಂತಿಲ್ಲ: ಸುಪ್ರೀಂಕೋರ್ಟ್

Share It

ದೆಹಲಿ: ಅಭಿವೃದ್ಧಿ ಯೋಜನೆಗಳಿಗೆ ವಶಪಡಿಸಿಕೊಳ್ಳುವ ಭೂಮಿಗೆ ಸೂಕ್ತ ಪರಿಹಾರ ನೀಡದೆ, ಯಾವುದೇ ವ್ಯಕ್ತಿಯ ಆಸ್ತಿಯನ್ನು ಸರ್ಕಾರ ವಶಪಡಿಸಿಕೊಳ್ಳುವಂತಿಲ್ಲ ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.

ಬೆಂಗಳೂರು-ಮೈಸೂರು ನೈಸ್ ಕಾರಿಡಾರ್ ಗೆ ಸಂಬಂಧಿಸಿದಂತೆ ಅಭಿವೃದ್ಧಿ ಕಾಮಗಾರಿಗಳಿಗೆ ವಶಪಡಿಸಿಕೊಂಡ ಭೂಮಿಗೆ ಕಳೆದ 22 ವರ್ಷಗಳಿಂದ ಸೂಕ್ತ ಪರಿಹಾರ ನೀಡಿಲ್ಲ ಎಂದು ಸಂತ್ರಸ್ತರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ. ಬಿ.ಆರ್ ಗವಾಯಿ ಹಾಗು ಕೆ.ವಿ ವಿಶ್ವನಾಥನ್ ಅವರಿದ್ದ ಪೀಠ ಈ ಆದೇಶ ನೀಡಿದೆ.

ಭೂಮಾಲೀಕರಿಗೆ 22 ವರ್ಷ ಅಲೆದಾಡುವಂತೆ ಮಾಡಿದ ಅಧಿಕಾರಿಗಳ ಉದಾಸೀನತೆ ಮತ್ತು ಗಾಢ ನಿದ್ರೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಕಾನೂನಿನ ಪ್ರಕಾರ ಸೂಕ್ತ ಪರಿಹಾರ ನೀಡದೇ ಯಾವುದೇ ವ್ಯಕ್ತಿಯ ಆಸ್ತಿಯನ್ನು ಕಸಿದುಕೊಳ್ಳುವಂತಿಲ್ಲ ಎಂದಿದೆ. ಆಸ್ತಿಯು ಮೂಲಭೂತ ಹಕ್ಕು ಅಲ್ಲದಿದ್ದರೂ, ಸಂವಿಧಾನದ ವಿಧಿ 300-ಎ ಅಡಿಯಲ್ಲಿ ಆಸ್ತಿ ಹೊಂದುವ ಅವಕಾಶವಿದೆ. ಆ ಪ್ರಕಾರ, ಯಾವುದೇ ವ್ಯಕ್ತಿ ತನ್ನ ಆಸ್ತಿಯಿಂದ ವಂಚಿತರಾಗುವಂತಿಲ್ಲ. ಇದು ಸಾಂವಿಧಾನಿಕ ಹಕ್ಕಾಗಿದೆ.

ಆದ್ದರಿಂದ, ಒಬ್ಬ ವ್ಯಕ್ತಿಗೆ ಸೂಕ್ತ ಪರಿಹಾರವನ್ನು ನೀಡದೇ ಆತನ ಆಸ್ತಿಯನ್ನು ಪಡೆಯಲು ಸಾಧ್ಯವಿಲ್ಲ ಎಂದು ಸುಪ್ರೀಂಕೋರ್ಟ್ ತನ್ನ 57 ಪುಟಗಳ ತೀರ್ಪಿನಲ್ಲಿ ವಿವರಿಸಿದೆ. ಅಲ್ಲದೇ, ಪ್ರಕರಣದಲ್ಲಿ, ಅರ್ಜಿದಾರರಿಗೆ ಪರಿಹಾರವನ್ನು ನೀಡದೇ ಇರಲು ಯಾವುದೇ ಸಕಾರಣಗಳಿಲ್ಲ. ಆದರೆ ಸರ್ಕಾರ ಮತ್ತು ಕೆಐಎಡಿಬಿ ಅಧಿಕಾರಿಗಳ ನಿರಾಸಕ್ತಿಯಿಂದಾಗಿ ಭೂಮಿ ಕಳೆದುಕೊಂಡವರು ಸಂಕಟ ಅನುಭವಿಸುವಂತಾಗಿದೆ ಎಂದು ಸುಪ್ರೀಂಕೋರ್ಟ್ ಟೀಕಿಸಿದೆ.

ಅಲ್ಲದೇ, ಯೋಜನೆಗಾಗಿ ಸ್ವಾಧೀನಪಡಿಸಿಕೊಂಡ ಭೂಮಿಗೆ ಎರಡು ತಿಂಗಳ ಒಳಗೆ ಪರಿಹಾರ ನೀಡಬೇಕು. 2019 ರ ಏಪ್ರಿಲ್ 22ಕ್ಕೆ ಅನ್ವಯವಾಗುವಂತೆ ವಿವಾದಿತ ಭೂಮಿಯ ಮಾರುಕಟ್ಟೆ ಮೌಲ್ಯ ನಿರ್ಧರಿಸಬೇಕು ಎಂದು ಸುಪ್ರೀಂಕೋರ್ಟ್ ತೀರ್ಪು ನೀಡಿದೆ.


Share It

You cannot copy content of this page