ಸುಪ್ರೀಂಕೋರ್ಟ್ ನಲ್ಲಿ ಅನುಕೂಲಕರ ಆದೇಶ ಕೊಡಿಸುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚಿಸಿದ್ದಾರೆ ಎಂದು ಆರೋಪಿಸಿ ಕಕ್ಷೀದಾರರೊಬ್ಬರು ಬೆಂಗಳೂರಿನ ವಕೀಲರೊಬ್ಬರ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ಹೈಕೋರ್ಟ್ ರದ್ದುಪಡಿಸಿದೆ.
ಮಂಗಳೂರಿನ 2ನೇ ಜೆಎಂಎಫ್ಸಿ ಕೋರ್ಟ್ ನಲ್ಲಿ ತಮ್ಮ ವಿರುದ್ಧ ದಾಖಲಿಸಿರುವ ಖಾಸಗಿ ದೂರನ್ನು ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ಪೀಠ ಈ ತೀರ್ಪು ನೀಡಿದೆ.
ಆರೋಪವೇನು: ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ನಾಗರಿಕರಾದ 75 ವರ್ಷದ ಸಿಪ್ರಿಯನ್ ಮೆನೆಜಸ್ ಬೆಂಗಳೂರಿನ ವಕೀಲರೊಬ್ಬರ ವಿರುದ್ಧ ಮಂಗಳೂರಿನ ನ್ಯಾಯಾಲಯದಲ್ಲಿ ನಂಬಿಕೆ ದ್ರೋಹ ಹಾಗೂ ವಂಚನೆ ಆರೋಪದಡಿ ಖಾಸಗಿ ದೂರು (ಪಿಸಿಆರ್) ದಾಖಲಿಸಿದ್ದರು.
ದೂರಿನಲ್ಲಿ, ಪ್ರಕರಣವೊಂದಕ್ಕೆ ಸಂಬಂಧಿದಂತೆ ತಾವು ವಕೀಲರನ್ನು ಸಂಪರ್ಕಿಸಿದ್ದೆ. ಈ ವೇಳೆ ವೇಳೆ ವಕೀಲರು ತಮಗೆ ಸುಪ್ರೀಂಕೋರ್ಟ್ ನಲ್ಲಿ ಸಾಕಷ್ಟು ಹಿರಿಯ ವಕೀಲರ ಪರಿಚಯವಿದೆ. ಪ್ರಕರಣದಲ್ಲಿ ಅನುಕೂಲಕರ ತೀರ್ಪು ಕೊಡಿಸುತ್ತೇವೆ ಎಂದಿದ್ದರು. ಇದನ್ನು ನಂಬಿ ಲಕ್ಷಾಂತರ ರೂಪಾಯಿ ಹಣ ನೀಡಿದ್ದೆ. ಆದರೆ, ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆ ನಡೆದ ದಿನ ಸರಿಯಾದ ಮಾಹಿತಿಯನ್ನೇ ನೀಡಲಿಲ್ಲ. ಈ ಮೂಲಕ ತಮಗೆ ನಂಬಿಕೆ ದ್ರೋಹ ಮಾಡಿ ವಂಚಿಸಿದ್ದಾರೆ ಎಂದು ಆರೋಪಿಸಿ ಪಿಸಿಆರ್ ದಾಖಲಿಸಿದ್ದರು. ಈ ಕೇಸ್ ರದ್ದು ಕೋರಿ ವಕೀಲರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಹೈಕೋರ್ಟ್ ತೀರ್ಪು: ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್, ಯಾವುದೇ ಪ್ರಕರಣದಲ್ಲಿ ವಕೀಲರು ಖಂಡಿತವಾಗಿಯೂ ಕಕ್ಷೀದಾರರಿಗೆ ಪೂರಕವಾದ ಆದೇಶವನ್ನೇ ಪಡೆಯುತ್ತಾರೆ ಎಂಬುದು ನಂಬಲಾಗದ ವಿಚಾರ. ಪ್ರಕರಣದ ವಾಸ್ತವಾಂಶ ಹಾಗೂ ಕಾನೂನು ಇಲ್ಲಿ ಪ್ರಮುಖ ಅಂಶಗಳಾಗಿರುತ್ತವೆ. ವಕೀಲರಿಗೆ ಪಾವತಿಸುವ ಶುಲ್ಕಕ್ಕೂ ನ್ಯಾಯಾಲಯದ ಆದೇಶಕ್ಕೂ ಸಂಬಂಧವಿರುವುದಿಲ್ಲ. ಫೀಸು ಎಂಬುದು ವಕೀಲರು ಮತ್ತು ಕಕ್ಷೀದಾರರ ನಡುವಿನ ಖಾಸಗಿ ವಿಚಾರ.
ಇನ್ನು ವಕೀಲರು ನ್ಯಾಯಾಲಯದಲ್ಲಿ ಕಕ್ಷೀದಾರರಿಗೆ ಪೂರಕವಾದ ತೀರ್ಪು ಅಥವಾ ಆದೇಶ ಪಡೆಯಲಾಗಲಿಲ್ಲ ಎಂದಾಕ್ಷಣ ಅವರು ನಂಬಿಕೆ ದ್ರೋಹ ಎಸಗಿದ್ದಾರೆ ಎಂದರ್ಥವಲ್ಲ. ವಕೀಲರು ಪ್ರಕರಣದಲ್ಲಿ ಯಶಸ್ವಿಯಾಗು ತಮ್ಮಿಂದಾದ ಎಲ್ಲ ಪ್ರಯತ್ನ ಮಾಡಬಹುದು. ಅಂತಿಮವಾಗಿ ಪ್ರಕರಣದ ಅರ್ಹತೆ ಮತ್ತು ಕಾನೂನು ಅನ್ವಯದಂತೆ ತೀರ್ಮಾನವಾಗುತ್ತದೆ.
ಈ ಪ್ರಕರಣದಲ್ಲಿ ವಕೀಲರು ತಮ್ಮ ಕಡೆಯಿಂದ ಸಾಕಷ್ಟು ಪ್ರಯತ್ನ ಮಾಡಿದ್ದಾರೆ. ಹೀಗಾಗಿ ಅನುಕೂಲಕರ ಆದೇಶ ಪಡೆಯುತ್ತೇವೆ ಎಂದು ತಿಳಿಸಿ ನಂಬಿಕೆ ದ್ರೋಹ ಮಾಡಿದ್ದಾರೆ ಹಾಗೂ ವಂಚಿಸಿದ್ದಾರೆ ಎಂದು ಹೇಳಲಾಗದು. ಹಾಗಿದ್ದೂ, ವಕೀಲರ ವಿರುದ್ಧ ದಾಖಲಿಸಿರುವ ಪ್ರಕರಣವನ್ನು ಮುಂದುವರೆಯಲು ಬಿಟ್ಟರೆ ಕಾನೂನು ದುರ್ಬಳಕೆಗೆ ಅವಕಾಶ ಮಾಡಿಕೊಟ್ಟಂತೆ ಆಗುತ್ತದೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಹಾಗೆಯೇ, ವಕೀಲರ ವಿರುದ್ಧ ದಾಖಲಿಸಿದ್ದ ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿದೆ.
(WP 54069/2017)