ಕೇಸ್ ಗೆಲ್ಲಲಿಲ್ಲ ಎಂಬ ಕಾರಣಕ್ಕೆ ತಮ್ಮದೇ ವಕೀಲರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದ ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನಗಳ ವಿಶ್ವವಿದ್ಯಾಲಯ (ಆರ್‌ಜಿಯುಹೆಚ್‌ಎಸ್) ಮತ್ತು ಅದರ ರಿಜಿಸ್ಟ್ರಾರ್ ವಿರುದ್ಧ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಇಂತಹ ಅಜಾಗರೂಕ ಪ್ರಕರಣಗಳನ್ನು ದಾಖಲಿಸುವಾಗ ಎಚ್ಚರಿಕೆ ವಹಿಸುವಂತೆ ವಿವಿ ಮತ್ತು ಅದರ ರಿಜಿಸ್ಟ್ರಾರ್ ಗೆ ತಾಕೀತು ಮಾಡಿದೆ. ಅಲ್ಲದೇ, ವಕೀಲರ ವಿರುದ್ಧ ದಾಖಲಿಸಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಪಡಿಸಿ ಆದೇಶಿಸಿದೆ.
ಪೀಠ ತನ್ನ ತೀರ್ಪಿನಲ್ಲಿ, ವ್ಯಾಜ್ಯದಲ್ಲಿ ಸೋಲುಂಟಾದ ಮಾತ್ರಕ್ಕೆ ಕಕ್ಷೀದಾರರೊಂದಿಗೆ ವಕೀಲರು ಶಾಮೀಲಾಗಿದ್ದಾರೆ ಎಂದು ಆರೋಪಿಸುವುದು ಸರಿಯಲ್ಲ. ಆರೋಪಗಳಿಗೆ ಯಾವುದೇ ಸೂಕ್ತ ಆಧಾರಗಳಿಲ್ಲ. ಪ್ರಕರಣದಲ್ಲಿ ಪೂರಕ ಆದೇಶ ಸಿಗಲಿಲ್ಲ ಎಂಬ ಕಾರಣಕ್ಕೆ ಕ್ರಿಮಿನಲ್ ಕೇಸ್ ದಾಖಲಿಸುವ ಅಧಿಕಾರ ವಿವಿಗೆ ಇಲ್ಲ. ಮುಂದಿನ ದಿನಗಳಲ್ಲಿ ವಿವಿ ಹೀಗೆ ನಡೆದುಕೊಂಡರೆ ಅದನ್ನು ಗಂಭೀರವಾಗಿ ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ಪ್ರಕರಣದ ಹಿನ್ನೆಲೆ: ವಕೀಲರೊಬ್ಬರು ಧಾರವಾಡದಲ್ಲಿ ಕಳೆದ 15 ವರ್ಷಗಳಿಂದ ಆರ್‌ಜಿಯುಹೆಚ್‌ಎಸ್ ಪರ ವಾದ ಮಂಡಿಸುತ್ತಿದ್ದರು. ಸ್ನಾತಕೋತ್ತರ ಪ್ರವೇಶ ಪರೀಕ್ಷೆ-2010ರ ಅವ್ಯವಹಾರ ಪ್ರಕರಣದಲ್ಲಿ ಹೈಕೋರ್ಟ್ ನಲ್ಲಿ ವಿಶ್ವವಿದ್ಯಾಲಯವನ್ನು ಪ್ರತಿನಿಧಿಸಿದ್ದರು.
ಈ ಪ್ರಕರಣದಲ್ಲಿ ಆರೋಪಿಗಳು ಸಲ್ಲಿಸಿದ ಅರ್ಜಿಗಳು ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಂದಿದ್ದವು. ಹೈಕೋರ್ಟ್ ಸೂಚನೆಯ ಮೇರೆಗೆ ಆರ್‌ಜಿಯುಹೆಚ್‌ಎಸ್ ಪರವಾಗಿ ನೋಟಿಸ್ ಸ್ವೀಕರಿಸಿದ್ದರು. ಪ್ರಕರಣದಲ್ಲಿ ಈ ಹಿಂದೆ ನೀಡಿದ್ದ ಆದೇಶದ ಪ್ರಕಾರ, ಹೈಕೋರ್ಟ್ ಅರ್ಜಿಗಳನ್ನು ವಿಲೇವಾರಿ ಮಾಡಿತ್ತು.
ನ್ಯಾಯಾಲಯದ ಆದೇಶವನ್ನು ತಿಳಿಸಿದ ನಂತರ ವಿವಿ ಪರ ವಕೀಲರನ್ನು ವಿಶ್ವವಿದ್ಯಾಲಯದ ವಕೀಲರ ಸಮಿತಿಯಿಂದ ತೆಗೆದುಹಾಕಿತ್ತು. ಅಲ್ಲದೇ, 2022ರ ಜು.29ರಂದು ಆರೋಪಿಗಳ ಜೊತೆ ಸೇರಿಕೊಂಡು ಅವರ ಅರ್ಜಿಗಳನ್ನು ವಿಲೇವಾರಿ ಮಾಡಲು ಸಹಾಯ ಮಾಡಿದ್ದಾರೆ ಎಂದು ಆರೋಪಿಸಿ ಕ್ರಿಮಿನಲ್ ಕೇಸ್ ದಾಖಲಿಸಿತ್ತು. ತಮ್ಮ ವಿರುದ್ಧ ಎಫ್ಐಆರ್ ದಾಖಲಿಸಿದ ಕ್ರಮ ಪ್ರಶ್ನಿಸಿ ವಕೀಲರು ಹೈಕೋರ್ಟ್ ಮೊರೆ ಹೋಗಿದ್ದರು.