ಬೆಂಗಳೂರು: ಫೆ.11ರಿಂದ 14ರವರೆಗೆ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 19 ರಾಷ್ಟ್ರಗಳು ಪಾಲ್ಗೊಳ್ಳುತ್ತಿದ್ದು, ಈ ಪೈಕಿ 10 ರಾಷ್ಟ್ರಗಳೊಂದಿಗೆ ಸುಸ್ಥಿರ ಆರ್ಥಿಕ ಬೆಳವಣಿಗೆಗೆ, ಹೂಡಿಕೆಗೆ ಇರುವ ಅವಕಾಶಗಳು, ಜಾಗತಿಕ ಪೂರೈಕೆ ಸರಪಳಿಯಲ್ಲಿ ಕರ್ನಾಟಕದ ಸ್ಥಾನಮಾನ, ರಾಜ್ಯದಲ್ಲಿ ಮರುಬಳಕೆ ಇಂಧನ ಕ್ಷೇತ್ರದ ಭವಿಷ್ಯ, ಆರೋಗ್ಯ ಸೇವೆ ಮುಂತಾದ ನಿರ್ಣಾಯಕ ಕ್ಷೇತ್ರಗಳ ಕುರಿತು ಚರ್ಚೆ ನೆಡೆಯಲಿದೆ. ಈ ಮೂಲಕ 10 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಬರುವುದು ಖಾತ್ರಿಯಾಗಿದೆ.
ಸಮಾವೇಶದಲ್ಲಿ ಭವಿಷ್ಯದ ತಯಾರಿಕಾ ವಲಯ, ಸಾರಿಗೆ ಮತ್ತು ಪರಿಸರಸ್ನೇಹಿ ಇಂಧನ ಉತ್ಪಾದನೆ ವಲಯಗಳಿಗೆ ವಿಶೇಷ ಗಮನ ಕೊಡಲಾಗುತ್ತಿದೆ. ಇದರ ಅಂಗವಾಗಿ 60ಕ್ಕೂ ಹೆಚ್ಚು ಸ್ಟಾರ್ಟಪ್ ಕಂಪನಿಗಳು ಅತ್ಯಾಧುನಿಕ ತಂತ್ರಜ್ಞಾನವನ್ನು ಮತ್ತು ಅವುಗಳನ್ನು ಆಧರಿಸಿ ರೂಪಿಸಿರುವ ಪರಿಹಾರೋಪಾಯಗಳನ್ನು ಪ್ರದರ್ಶಿಸಲಿವೆ. ಇವುಗಳಲ್ಲಿ ಕಾರ್ಬನ್ ನ್ಯಾನೋಟ್ಯೂಬ್, ಅಟಾನಮಸ್ ಸಿಸ್ಟಮ್ಸ್, ಮಾನವರಹಿತ ಏರಿಯಲ್ ವೆಹಿಕಲ್ಸ್ ಮತ್ತು ಸುಧಾರಿತ ರೋಬೋಟಿಕ್ಸ್ ಮುಂತಾದವು ಸೇರಿವೆ.
ರಾಜ್ಯದ ಆರ್ಥಿಕ ಮತ್ತು ಕೈಗಾರಿಕಾ ಬೆಳವಣಿಗೆಗೆ ನಿರ್ಣಾಯಕ ಕೊಡುಗೆ ನೀಡುತ್ತಿರುವ 14 ಉದ್ಯಮಗಳನ್ನು ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ ಇದೇ ಮೊದಲ ಬಾರಿಗೆ ಗುರುತಿಸಿ, ಪುರಸ್ಕರಿಸಲಾಗುತ್ತಿದೆ. ಇವುಗಳಲ್ಲಿ ವೈಮಾಂತರಿಕ್ಷ ಮತ್ತು ರಕ್ಷಣೆ, ಆಟೋ/ಇ.ವಿ., ಜೈವಿಕ ತಂತ್ರಜ್ಞಾನ ಮತ್ತು ಜೀವವಿಜ್ಞಾನ ವಲಯಗಳ ಸಾಧಕ ಉದ್ಯಮಗಳು ಇರಲಿವೆ.
ಕೇಂದ್ರ ರಕ್ಷಣಾ ಸಚಿವರಿಂದ ಸಮಾವೇಶದ ಉದ್ಘಾಟನೆ:
ಸಮಾವೇಶದ ಉದ್ಘಾಟನೆ ಫೆ.11ರ ಸಂಜೆ 4ಕ್ಕೆ ನಡೆಯಲಿದ್ದು, ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಉದ್ಘಾಟಿಸಲಿದ್ದಾರೆ. ರಾಜ್ಯಪಾಲ ಥಾವರಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸಲಿದ್ದಾರೆ. ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಪಾಲ್ಗೊಳ್ಳಲಿದ್ದಾರೆ. ಈ ಸಂದರ್ಭದಲ್ಲಿ 2025-30ರ ಅವಧಿಯ ನೂತನ ಕೈಗಾರಿಕಾ ನೀತಿ ಮತ್ತು ಕೈಗಾರಿಕಾ ಯೋಜನೆಗಳಿಗೆ ತ್ವರಿತ ಅನುಮೋದನೆ ನೀಡಲು ಏಕಗವಾಕ್ಷಿ ಪೋರ್ಟಲ್ ಬಿಡುಗಡೆಯಾಗಲಿದೆ.
ಸಮಾರೋಪ ಸಮಾರಂಭದಲ್ಲಿ ರಾಜ್ಯಸಭೆಯ ವಿಪಕ್ಷ ನಾಯಕ ಖರ್ಗೆ:
ಫೆ.11-14ರ ನಡುವೆ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ, ಎಚ್ ಡಿ ಕುಮಾರಸ್ವಾಮಿ, ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಪೀಯೂಷ್ ಗೋಯಲ್, ನಿರ್ಮಲಾ ಸೀತಾರಾಮನ್, ಅಶ್ವಿನಿ ವೈಷ್ಣವ್ ಸಮಾವೇಶಕ್ಕೆ ಬರಲಿದ್ದಾರೆ. ರಾಜ್ಯಸಭೆಯ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಸಮಾರೋಪಕ್ಕೆ ಆಗಮಿಸಲಿದ್ದಾರೆ.
ಸಮಾವೇಶದಲ್ಲಿ ಕ್ವಿನ್ ಸಿಟಿ ಒಡಂಬಡಿಕೆಗಳು:
ಸಮಾವೇಶದಲ್ಲಿ ಮಹತ್ವಾಕಾಂಕ್ಷಿಯ ಕ್ವಿನ್ ಸಿಟಿ ಯೋಜನೆ ಸಂಬಂಧ ದೇಶ-ವಿದೇಶದ ಕೆಲವು ವಿಶ್ವವಿದ್ಯಾಲಯಗಳ ಜತೆ ಒಡಂಬಡಿಕೆ ಆಗಲಿದೆ. ಆರ್ಥಿಕ ಬೆಳವಣಿಗೆ ಕುರಿತು ಮಾಂಟೆಕ್ ಸಿಂಗ್ ಅಹ್ಲುವಾಲಿಯಾ, ಲಾಜಿಸ್ಟಿಕ್ಸ್ ವಲಯದಲ್ಲಿ ನಡೆಯುತ್ತಿರುವ ಆವಿಷ್ಕಾರಗಳನ್ನು ಕುರಿತು ವೋಲ್ವೊ ಸಮೂಹದ ಮುಖ್ಯಸ್ಥ ಮಾರ್ಟಿನ್ ಲುಂಡ್ ಸ್ಟೆಡ್, ಸಂದೀಪ್ ದೇಶಮುಖ್ ಮತ್ತು ಚಾಣಕ್ಯ ಹೃದಯ, ಯುವ ಸಂಶೋಧಕರನ್ನು ಕುರಿತು ಝೆರೋದಾ ಸಂಸ್ಥಾಪಕ ನಿಖಿಲ್ ಕಾಮತ್ ಅವರು ಉದ್ಯಮಿಗಳಾದ ಪಾರ್ಥ ಜಿಂದಾಲ್ ಹಾಗೂ ಸುಝಾನಾ ಮುತ್ತೂಟ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಎರಡು ಪಟ್ಟು ಹೆಚ್ಚು ಗೋಷ್ಠಿ ಆಯೋಜನೆ:
ಹಿಂದಿನ ಸಲದ ಸಮಾವೇಶಕ್ಕೆ ಹೋಲಿಸಿದರೆ ಎರಡು ಪಟ್ಟು ಹೆಚ್ಚು ಗೋಷ್ಠಿಗಳನ್ನು ಏರ್ಪಡಿಸಲಾಗಿದೆ. ಇವುಗಳಲ್ಲಿ ಗೂಗಲ್ ಎಕ್ಸ್ ಸಂಸ್ಥಾಪಕ ಸೆಬಾಸ್ಟಿಯನ್ ತ್ರನ್, ಲ್ಯಾಮ್ ರೀಸರ್ಚ್ ಮುಖ್ಯಸ್ಥ ಪ್ಯಾಟ್ರಿಕ್ ಲಾರ್ಡ್, ಜನರಲ್ ಅಟಾಮಿಕ್ಸ್ ಗ್ಲೋಬಲ್ ಕಾರ್ಪೊರೇಷನ್ ಸಿಇಒ ವಿವೇಕ್ ಲಾಲ್, ಟಿವಿಎಸ್ ಮೋಟಾರ್ಸ್ ವ್ಯವಸ್ಥಾಪಕ ನಿರ್ದೇಶಕ ಸುದರ್ಶನ್ ವೇಣು, ಬೋಯಿಂಗ್ ಕಂಪನಿಯ ಉನ್ನತಾಧಿಕಾರಿ ರಾಬ್ ಬಾಯ್ಡ್, ನಥಿಂಗ್ ಕಂಪನಿಯ ಸಹ ಸಂಸ್ಥಾಪಕ ಅಕಿಸ್ ಇವ್ಯಾಂಜಿಲೈಡಿಸ್, ಗ್ರೀಸ್ ದೇಶದ ಮಾಜಿ ಪ್ರಧಾನಿ ಜಾರ್ಜ್ ಪೆಪೆಂಡ್ರಿಯೊ ಮುಂತಾದವರು ಮಾತನಾಡಲಿದ್ದಾರೆ.
