ಬೆಂಗಳೂರು: ಇತ್ತೀಚೆಗೆ ಗೋವುಗಳಿಗೆ ಹೆಮರಾಜಿಕ್ ಸಿಂಡ್ರೋಮ್ ಎಂಬ ಮಾರಣಾಂತಿಕ ರೋಗ ವ್ಯಾಪಿಸಿದ್ದು, ಹಸುಗಳು ಹಠಾತ್ ಸಾವೀಗೀಡಾಗುತ್ತಿವೆ. ರಾಜ್ಯ ಸರ್ಕಾರದ ನಿಷ್ಕಾಳಜಿಯಿಂದಾಗಿ ಸಮಸ್ಯೆ ತೀವ್ರ ಸ್ವರೂಪ ಪಡೆದುಕೊಂಡಿದೆ.
ಮಾಗಡಿ, ತೀರ್ಥಹಳ್ಳಿ, ಚಿತ್ರದುರ್ಗ ಮತ್ತು ಕೋಡಿಹಳ್ಳಿ ಮತ್ತಿತರೆ ಪ್ರದೇಶಗಳಲ್ಲಿ ವಿಶೇಷವಾಗಿ ನಾಟಿ ಹಸುಗಳು ರೋಗದಿಂದ ಸಾವಿಗೀಡಾಗುತ್ತಿವೆ. ಡೈರಿ ವಲಯ, ರೈತರು ಮತ್ತು ಗೋವುಗಳಿಗೆ ಇದರಿಂದ ತೀವ್ರ ಸಂಕಷ್ಟ ಎದುರಾಗಿದೆ. ಹೆಮರಾಜಿಕ್ ಸಿಂಡ್ರೋಮ್ ನಿಂದಾಗಿ ಹೆಚ್ಚಿನ ಸಂಖ್ಯೆಯ ಹಸುಗಳು ಸಾವನ್ನಪ್ಪುತ್ತಿವೆ. ಇದರಿಂದ ಹೈನೋತ್ಪಾದನೆ ಮತ್ತು ಕೃಷಿ ಚಟುವಟಿಕೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದೆ.
ಈ ಕುರಿತು ಪ್ರೆಸ್ ಕ್ಲಬ್ ನಲ್ಲಿ ಶನಿವಾರ ನೆಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಎಪಿಎಸ್ ಅಕ್ಷಯ ಫೌಂಡೇಷನ್ ಟ್ರಸ್ಟ್ ಸಂಘಟನಾ ಕಾರ್ಯದರ್ಶಿ ಆರ್ ಸಿದ್ದೇಶ್ ಕುಮಾರ್, ಪುಣ್ಯಕೋಟಿ ಗೋಶಾಲೆ ಸರ್ಕಾರದ ಪಶುಸಂಗೋಪನೆ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆಯ ಪಶುವೈದ್ಯರ ಸಹಾಯದಿಂದ ಡೈರಿ ಹಸುಗಳನ್ನು ವೈಜ್ಞಾನಿಕವಾಗಿ ನಿರ್ವಹಿಸುತ್ತಿದೆ. ಐಸಿಎಆರ್ ಎನ್.ಡಿ.ಆರ್.ಐ ಬೆಂಗಳೂರು ಮತ್ತು ಸಂಶೋಧನಾ ಸಂಸ್ಥೆಗಳು ಮತ್ತು ಪಶುವೈದ್ಯಕೀಯ ಕಾಲೇಜುಗಳಿಂದ ಇತರ ತಜ್ಞರು ಸಹ ಪರಿಶೀಲಿಸುತ್ತಿದ್ದಾರೆ. ಕಳೆದ 15 ದಿನಗಳಲ್ಲಿ, ನಮ್ಮ ಗೋಶಾಲೆ ಹಸುಗಳು ಗುರುತಿಸಲಾಗದ ಆರೋಗ್ಯ ಸಮಸ್ಯೆಗಳಿಂದ ನರಳುತ್ತಿದ್ದು, ಗಂಭೀರ ಸಮಸ್ಯೆಗಳನ್ನು ಎದುರಿಸುತ್ತಿವೆ. ಇದು 25 ಕ್ಕೂ ಹೆಚ್ಚು ಹಸುಗಳ ಸಾವಿಗೆ ಕಾರಣವಾಗಿದೆ. ಜನವರಿ 21 ರಂದು ಆರು ಹಸುಗಳು ರೋಗ ಕಾಣಿಸಿಕೊಂಡ 24 ರಿಂದ 48 ಗಂಟೆಗಳ ಒಳಗಾಗಿ ಮೃತಪಟ್ಟಿವೆ ಎಂದರು.
ಆಂಕ್ರೋಸಿಸ್ ನಿಂದಾಗಿ ತೀವ್ರವಾಗಿ ಕರುಳಿನ ರಕ್ತಸ್ರಾವ ಉಂಟಾಗಿದೆ. ಹೆಬ್ಬಾಳದ ಪಶು ಆರೋಗ್ಯ ಮತ್ತು ಪಶುವೈದ್ಯಕೀಯ ಮತ್ತು ಜೈವಿಕ ಉತ್ಪನ್ನಗಳ ಸಂಸ್ಥೆಗೂ ಸಹ ಸತ್ತ ಪ್ರಾಣಿಗಳು ಮಾದರಿಗಳನ್ನು ಕಳುಹಿಸಲಾಗಿತ್ತು. ಶಂಕಿತ ಹೆಮ್ರಾ ಜಿಕಲ್ ಕರುಳಿನ ಸಿಂಡ್ರೋಮ್ ವಿವಿಧ ಕಾರಣಗಳಿಂದ ಉಂಟಾಗುವ ಖಾಯಿಲೆಯಾಗಿದೆ. ಈ ಮಧ್ಯೆ, ಹೆಚ್ಚಿನ ಹಸುಗಳು ಇದೇ ರೀತಿಯ ರೋಗ ಚಿಹ್ನೆಗಳನ್ನು ಹೊಂದಿವೆ. ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡರೂ ಮತ್ತು ತಜ್ಞರು ನಿಗದಿಪಡಿಸಿದ ಎಲ್ಲಾ ಮಾರ್ಗಸೂಚಿ ಅನುಸರಣೆಯ ಹೊರತಾಗಿಯೂ, ಗುರುತಿಸಲಾಗದ ಕಾಯಿಲೆ ಕಾರಣದಿಂದಾಗಿ ಎರಡು ವಾರಗಳಲ್ಲಿ 25 ಹಸುಗಳು ಮರಣಗೊಂಡಿವೆ ಎಂದು ಹೇಳಿದರು.
ಮುಂತಾದ ಸ್ಥಳಗಳಲ್ಲಿ ಇಂತಹ ಸಮಸ್ಯೆಗಳು ಕಂಡು ಬಂದಿವೆ. ಹೆಮ್ರಾಮಿಕ್ ಎಂಟರಾನೆಲ್ ಸಿಂಡ್ರೋಮ್ ರಾಜ್ಯದ ತುರ್ತು ಸಮಸ್ಯೆಯಾಗಿ ಮಾರ್ಪಟ್ಟಿದೆ. ಈ ಮಾರಣಾಂತಿಕ ರೋಗವು ಮುಖ್ಯವಾಗಿ ವಯಸ್ಕ ಡೈರಿ ಹಸುಗಳ ಮೇಲೆ ಪರಿಣಾಮ ಬೀರಿ ರೈತರಿಗೆ ಗಮನಾರ್ಹ ಆರ್ಥಿಕ ನಷ್ಟ ಉಂಟುಮಾಡುತ್ತಿದೆ. ಡೈರಿ ಉದ್ಯಮಕ್ಕೆ ಗಂಭೀರ ಸವಾಲು ಎದುರಾಗುವಂತೆ ಮಾಡಿದೆ. ಹಠಾತ್ ಕರುಳಿನ ರಕ್ತಸ್ರಾವ ಮತ್ತು ಗುಳ್ಳೆ ರಚನೆಗೆ ಚಿಕಿತ್ಸೆ ನೀಡದಿದ್ದರೆ, ಗಂಟೆಗಳೊಳಗೆ ಹಸುಗಳು ಸಾವಿಗೀಡಾಗುತ್ತವೆ. 1991 ರಲ್ಲಿ ಮೊದಲು ಈ ಸಮಸ್ಯೆ ಕಂಡು ಬಂದಿತ್ತಾದರೂ ನಿಖರವಾದ ಕಾರಣ ಇನ್ನೂ ತಿಳಿದಿಲ್ಲ ಎಂದರು.
ರೋಗ ನಿಯಂತ್ರಣ ಕ್ರಮಗಳ ಮೇಲ್ವಿಚಾರಣೆಗೆ ತಜ್ಞರ ಸಮಿತಿ ರಚಿಸಿ ಪರಿಸ್ಥಿತಿ ನಿಭಾಯಿಸಬೇಕು. ರೈತರಿಗೆ ಹೆಚ್ಚಿನ ಪರಿಹಾರ ಒದಗಿಸುವ ಜೊತೆಗೆ ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ಸುಧಾರಿಸಲು ಶಾಶ್ವತ ತಜ್ಞರ ಸಲಹಾ ಸಮಿತಿ ಅಸ್ಥಿತ್ವಕ್ಕೆ ತರಬೇಕು. ಪ್ರತ್ಯೇಕವಾಗಿ ಸ್ಥಳೀಯ ಡೈರಿ ಹಸುಗಳು ಮತ್ತು ಇತರ ಜಾನುವಾರುಗಳನ್ನು ಸುಧಾರಿಸಲು ಮತ್ತು ಅವರ ರೋಗಗಳ ತಡೆಗಟ್ಟುವಿಕೆಗೆ 500 ಕೋಟಿ ರೂಪಾಯಿ ನಿಧಿ ಸ್ಥಾಪಿಸಬೇಕು ಎಂದು ಆಗ್ರಹಿಸಿದರು.