ಬೆಂಗಳೂರು: ಹಕ್ಕಿಜ್ವರ ನಿಯಂತ್ರಣಕ್ಕಾಗಿ ಅಗತ್ಯ ಕ್ರಮ ಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ.
ಇತ್ತೀಚಿನ ದಿನಗಳಲ್ಲಿ ಬೇರೆ-ಬೇರೆ ಜಿಲ್ಲೆಗಳಲ್ಲಿ ಹಕ್ಕಿಜ್ವರ ಪ್ರಕರಣಗಳು ವರದಿಯಾಗುತ್ತಿರುವುದರಿಂದ, ಪಾಲಿಕೆ ವ್ಯಾಪ್ತಿಯಲ್ಲಿ ಹಕ್ಕಿ ಜ್ವರ ಪ್ರಕರಣಗಳನ್ನು ನಿಯಂತ್ರಿಸುವ ಸಲುವಾಗಿ ಎಲ್ಲಾ ವಲಯಗಳಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸಕಲ ಸಿದ್ಧತೆ ನಡೆಸಿದೆ.
ಹಕ್ಕಿಜ್ವರ ಅಥವಾ ಕೋಳಿ ಶೀತ ಜ್ವರ ಹೆಚ್5ಎನ್1 ವೈರಸ್‌ನಿಂದ ಹರಡುವ ರೋಗವಾಗಿದ್ದು, ಇದು ಟರ್ಕಿ ಕೋಳಿ, ಗಿಣಿ ಕೋಳಿ, ಬಾತು ಕೋಳಿ, ಗೀಜಗ ಮುಂತಾದ ಹಕ್ಕಿಗಳಲ್ಲಿ ಕಾಣಿಸಿಕೊಳ್ಳುವ ಸಾಂಕ್ರಾಮಿಕ ಖಾಯಿಲೆಯಾಗಿದೆ. ಸಾಮಾನ್ಯವಾಗಿ ಹಕ್ಕಿಗಳಿಂದ ಹಕ್ಕಿಗಳಿಗೆ ಹರಡಲಿದ್ದು, ಕೆಲವೊಮ್ಮೆ ರೋಗ ಪೀಡಿತ ಹಕ್ಕಿಗಳ ಸಂಪರ್ಕದಿಂದ ಮನುಷ್ಯರಲ್ಲೂ ಈ ಜ್ವರದ ಲಕ್ಷಣಗಳು ಕಾಣಿಸಿಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪಾಲಿಕೆಯ 8 ವಲಯಗಳಲ್ಲಿ ಬರುವ ಎಲ್ಲಾ ವಾರ್ಡ್ ಗಳಲ್ಲಿಯೂ ಹಕ್ಕಿಜ್ವರ ನಿಯಂತ್ರಣ ಕಾರ್ಯಕ್ರಮದ ಅರಿವು ಮೂಡಿಸುವ ಹಾಗೂ ತಡೆಗಟ್ಟಲು ಸೂಕ್ತ ಕ್ರಮಗಳನ್ನು ಜರುಗಿಸಲು ಸಿದ್ಧತೆ ನಡೆಸುತ್ತಿದೆ.
ಹಕ್ಕಿಜ್ವರ ತಡೆಗಟ್ಟುವುದು ಹೇಗೆ?
ಹಕ್ಕಿಜ್ವರ ಪೀಡಿತ ಪ್ರದೇಶಗಳಲ್ಲಿ ನಾಗರಿಕರು ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡರೆ ಹಕ್ಕಿಜ್ವರದ ತಡೆಯಬಹುದಾಗಿದೆ. ಶಂಕಿತ ಹಕ್ಕಿಜ್ವರ ಪೀಡಿತ ಹಕ್ಕಿಗಳ ಸಂಪರ್ಕಕ್ಕೆ ಬರದಂತೆ ಎಚ್ಚರ ವಹಿಸುವುದು ಹಾಗೂ ಫಾರಂಗಳಿಗೆ ಭೇಟಿ ನೀಡುವುದನ್ನು ನಿಯಂತ್ರಿಸಬೇಕಿದೆ. ಸೊಂಕಿತ ಪ್ರದೇಶಗಳಿಗೆ ಭೇಟಿ ನೀಡಿ ಯಾವುದೇ ವಸ್ತುಗಳನ್ನು ಮುಟ್ಟಿದಲ್ಲಿ ಸಾಬೂನಿನಿಂದ ಕೈಕಾಲು ಮುಖ ತೊಳೆದು ಬಟ್ಟೆ ಬದಲಿಸುವುದು ಮತ್ತು ಮುಂದಿನ 4 ದಿನದವರೆಗೂ ದೇಹದಲ್ಲಿ ಆಗುವ ಬದಲಾವಣೆಗಳನ್ನು ಗಮನಿಸಬೇಕಿದೆ. ಜ್ವರ ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕಿದೆ. ಕೋಳಿ ಮಾಂಸ ಮತ್ತು ಮೊಟ್ಟೆಯನ್ನು 70 ಡಿಗ್ರಿ ಗಿಂತ ಅಧಿಕ ಉಷ್ಣಾಂಶದಲ್ಲಿ ಬೇಯಿಸಿದ ನಂತರವೇ ಸೇವಿಸಬೇಕಿದೆ.
ಪಾಲಿಕೆಯಿಂದ ಸಮೀಕ್ಷಾ ಕಾರ್ಯ:
ಪಾಲಿಕೆಯ ಪಶುಸಂಗೋಪನಾ ಅಧಿಕಾರಿಗಳು, ಪ್ರಾಥಮಿಕ ಆರೋಗ್ಯ ಸುರಕ್ಷಣಾ ಅಧಿಕಾರಿಗಳು, ಆಶಾ ಕಾರ್ಯಕರ್ತೆಯರು, ನಮ್ಮ ಕ್ಲಿನಿಕ್ ವೈದ್ಯರ ತಂಡ ಹಾಗೂ ನಗರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿ ಮತ್ತು ಸಿಬ್ಬಂದಿಗಳ ತಂಡಗಳನ್ನು ರಚಿಸಿಕೊಂಡು ಪ್ರದೇಶಗಳಲ್ಲಿ ಹಕ್ಕಿಜ್ವರ ಪ್ರಕರಣಗಳ ಪತ್ತೆ ಹಚ್ಚುವ ಸಮೀಕ್ಷೆ ಕಾರ್ಯವನ್ನು ಚುರುಕುಗೊಳಿಸಿದ್ದಾರೆ.