News

ಭಾರತೀಯ ಜ್ಞಾನ ಪರಂಪರೆಯ ಅಧ್ಯಯನದಲ್ಲಿ ಪ್ರಾಚೀನ ಗ್ರಂಥಗಳ ಪಾತ್ರ ಮಹತ್ವವಾದುದು: ಜೈನ್ ವಿವಿ ನಿರ್ದೇಶಕ ಪ್ರೊ. ಆರ್. ಎನ್. ಅಯ್ಯಂಗಾರ್

Share It

ಬೆಂಗಳೂರು: ಪ್ರಾಚೀನ ಕಾಲದ ಗ್ರಂಥ ಪರಂಪರೆಯ ಇತಿಹಾಸ ಬಹಳ ಜ್ಞಾನದಾಯಕವಾಗಿದೆ. ವಿಶೇಷವಾಗಿ ಜ್ಯೋತಿಷ್ಯಶಾಸ್ತ್ರ ಮತ್ತು ಖಗೋಳಶಾಸ್ತ್ರಕ್ಕೆ ಸಂಬಂಧಿಸಿದ ಗ್ರಂಥಗಳು ತಮ್ಮದೇ ಆದ ವೈಜ್ಞಾನಿಕ ಪರಂಪರೆಯನ್ನು ಹೊಂದಿವೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ನಿಕಟಪೂರ್ವ ಪ್ರಾಧ್ಯಾಪಕರು ಮತ್ತು ಜೈನ್ ವಿಶ್ವವಿದ್ಯಾಲಯದ ಪುರಾತನ ಇತಿಹಾಸ ಮತ್ತು ಸಂಸ್ಕೃತಿ ಅಧ್ಯಯನ ಕೇಂದ್ರದ ನಿರ್ದೇಶಕರಾದ ಪ್ರೊ. ಆರ್. ಎನ್. ಅಯ್ಯಂಗಾರ್ ಹೇಳಿದರು.

ಮಿಥಿಕ್ ಸೊಸೈಟಿ ಮತ್ತು ಸಂಗಮ್ ಟಾಕ್ಸ್ (ಬೆಂಗಳೂರು ಅಧ್ಯಾಯ) ಜಂಟಿಯಾಗಿ ಆಯೋಜಿಸಿದ್ದ ಆರ್. ನರಸಿಂಹಾಚಾರ್ ಸ್ಮಾರಕ ದತ್ತಿ ಉಪನ್ಯಾಸದಲ್ಲಿ “ಮಹಾಸಲಿಲಂ” ವಿಷಯ ಕುರಿತು ಮಾತನಾಡಿದರು. ನಮ್ಮ ಪ್ರಾಚೀನ ಗ್ರಂಥಗಳ ಸರಿಯಾದ ವೈಜ್ಞಾನಿಕ ಅಧ್ಯಯನದಿಂದ ನಮ್ಮ ಪ್ರಾಚೀನರು ಈ ವಿಷಯಗಳಿಗೆ ಸಂಬಂಧಿಸಿದಂತೆ ಹೊಂದಿದ ಅಗಾಧವಾದ ಜ್ಞಾನದ ಅರಿವು ನಮಗಾಗುತ್ತದೆ ಎಂದರು.

ʼವೃದ್ಧ ಗಾರ್ಗೀಯ ಜ್ಯೋತಿಷ್ಯʼ ಪ್ರಾಚೀನ ಗ್ರಂಥಗಳಲ್ಲಿ ಒಂದು ಪ್ರಮುಖವಾದ ಹೆಸರಾಗಿದೆ. ಇದರ ಅಂಗವಾದ ʼಮಹಾಸಲಿಲಂʼ ವೇದಾಂಗ ಶಾಸ್ತ್ರದಲ್ಲಿ ಉಲ್ಲೇಖವಾಗುವ ಖಗೋಳ ವಿಜ್ಞಾನದ ಪಠ್ಯವಾಗಿದ್ದು ಇದೊಂದು ಸಾಂಸ್ಕೃತಿಕ ನಿಧಿಯಾಗಿದೆ. ಪ್ರಾಚೀನ ಕಾಲದ ವಿಜ್ಞಾನದ ಇತಿಹಾಸ ಕೂಡ ಭಾರತೀಯ ಜ್ಞಾನ ಪರಂಪರೆಯಲ್ಲಿ ಒಂದು ಪ್ರಮುಖವಾದ ಅಧ್ಯಯನದ ವಿಷಯವಾಗಿದೆ. ವೇದಗಳಲ್ಲಿಯೇ ಆಕಾಶಕಾಯಗಳಾದ ಧೂಮಕೇತುಗಳು ಮುಂತಾದವುಗಳ ಬಗ್ಗೆ ವಿವರಣೆ ದೊರೆಯುತ್ತದೆ. ಅದರಂತೆ ʼಮಹಾಸಲಿಲಂʼ ಗ್ರಂಥವು ಅನೇಕ ವಿಷಯಗಳ ಆಗರವಾಗಿದ್ದು ಭೂಗೋಳಶಾಸ್ತ್ರ, ತತ್ತ್ವಜ್ಞಾನ ಮತ್ತು ಆಕಾಶಕಾಯಗಳು ಮುಂತಾದ ವಿಷಯಗಳ ಕುರಿತಂತೆ ಪ್ರಶ್ನೋತ್ತರಗಳ ರೂಪದಲ್ಲಿ ವಿವರಣೆಯನ್ನು ನೀಡುತ್ತದೆ. ಇಂತಹ ಅನೇಕ ಅಲಕ್ಷಿತ ಗ್ರಂಥಗಳ ಬಗ್ಗೆ ವಿಮರ್ಶಾತ್ಮಕವಾಗಿ ವೈಜ್ಞಾನಿಕ ಅಧ್ಯಯನ ನಡೆಯುವುದು ಅವಶ್ಯಕವಾಗಿದೆ ಎಂದು ತಿಳಿಸಿದರು.

ದಿ ಮಿಥಿಕ್ ಸೊಸೈಟಿಯ ಆಡಳಿತ ಮಂಡಳಿಯ ಸದಸ್ಯ ಎಂ.ಆರ್. ಪ್ರಸನ್ನ ಕುಮಾರ್ ಅತಿಥಿಗಳನ್ನು ಸ್ವಾಗತಿಸಿ ವಂದಿಸಿದರು. ಬೆಲ್ಜಿಯಂನ ಹೆಸರಾಂತ ಭಾರತಶಾಸ್ತ್ರಜ್ಞ ಡಾ. ಕಾರ್ನಾಡ್ ಎಲ್ಸ್ಟ್ ಮತ್ತು ಅನೇಕ ವಿದ್ವಾಂಸರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.


Share It

You cannot copy content of this page