News

ಇ-ಖಾತಾ ನೋಂದಣಿ ಇನ್ನಷ್ಟು ಸುಲಭಗೊಳಿಸಲು ಮುಂದಾದ ಪಾಲಿಕೆ

Share It

ಬೆಂಗಳೂರು: ನಗರದಲ್ಲಿ ಇ-ಖಾತಾ ನೋಂದಣಿ ಕುರಿತು ಇನ್ನೂ ಗೊಂದಲಗಳಿದ್ದು, ಕೇವಲ 2.25ಲಕ್ಷ ಜನರು ನೋಂದಾಯಿಸಿಕೊಂಡಿದ್ದು, ಈ ಸಮಸ್ಯೆಯ ಪರಿಹಾರಕ್ಕಾಗಿ ಪಾಲಿಕೆಯು ಫ್ಲಾಟ್, ಅಪಾರ್ಟ್‌ಮೆಂಟ್ ಹಾಗೂ ವಾಣಿಜಕ್ಯ ಕಟ್ಟಡಗಳಿಗೆ ಇ-ಖಾತಾ ನೀಡುವಿಕೆಯನ್ನು ಸುಲಭವಾಗಿಸಲು ಪಾಲಿಕೆ ಮುಂದಾಗಿದೆ.

ನಗರದಲ್ಲಿ ಆಸ್ತಿದಾರರಿಗೆ ಪಾಲಿಕೆಯು ಇ – ಖಾತಾ ನೀಡುವುದನ್ನು ಕಡ್ಡಾಯ ಮಾಡಿದೆ. ಅಲ್ಲದೇ ಎಲ್ಲಾ ಆಸ್ತಿದಾರರು ಇ ಖಾತಾ ಪಡೆದುಕೊಳ್ಳುವುದಕ್ಕೆ ಬೇಕಾದ ವ್ಯವಸ್ಥೆಯನ್ನು ಬಿಬಿಎಂಪಿಯು ಮಾಡುತ್ತಿದೆ. ನಗರದ ಹೆಚ್ಚಿನ ಫ್ಲಾಟ್‌ಗಳು, ವಾಣಿಜ್ಯ ಘಟಕಗಳಿಗೆ ಒಟ್ಟಾಗಿ ಹೊಸ ಖಾತಾ ನೀಡುವ ಬಗ್ಗೆ ಬಿಬಿಎಂಪಿ ಕ್ರಮಕೈಗೊಂಡಿದ್ದು, ಅತ್ಯಂತ ಸರಳವಾಗಿ ಮತ್ತು ಸ್ವತಃ ಮಾಲೀಕರೇ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಟ್ಟಿದೆ.

ಬಿಬಿಎಂಪಿ ಅಧಿಕಾರಿಗಳು ಹೇಳುವುದೇನು?

ಬೆಂಗಳೂರಿಗರು ಆಸ್ತಿಗಳಿಗೆ ಆಸ್ತಿದಾರರು ಇ ಖಾತಾ ಪಡೆಯಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಇಲ್ಲಿ ನೀವು ನಿಮ್ಮ ಎಲ್ಲಾ ಫ್ಲಾಟ್‌ಗಳು ಅಥವಾ ಬಿಬಿಎಂಪಿ ಖಾತಾ ಇಲ್ಲದೆ ಇರುವ ನಿರ್ದಿಷ್ಟ ಫ್ಲ್ಯಾಟ್‌ಗಳಿಗೆ ಹೊಸ ಬಿಬಿಎಂಪಿ ಖಾತಾವನ್ನು ರಚಿಸಿಕೊಳ್ಳಲು ಅವಕಾಶ ನೀಡಲಾಗಿದೆ ಎಂದು ಬಿಬಿಎಂಪಿ ಕಂದಾಯ ವಿಭಾಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬಿಬಿಎಂಪಿ ಖಾತಾ ಹೊಂದಿದ್ದು, ಇ-ಖಾತಾ ಬಯಸಿ ಹೊಸ ಖಾತಾ ಪಡೆಯಲು ಪ್ರಯತ್ನಿಸಬೇಡಿ. ನಕಲಿ ಖಾತೆ ಪಡೆಯುವ ಇಂತಹ ಪ್ರಯತ್ನ ಮಾಡುವ ವ್ಯಕ್ತಿಗಳನ್ನು ಕ್ರಿಮಿನಲ್ ಪ್ರಕರಣಕ್ಕೆ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದೂ ಎಚ್ಚರಿಕೆ ನೀಡಿದ್ದಾರೆ.

ಇನ್ನು ಎಲ್ಲಾ ಘಟಕಗಳಿಗೆ/ವಾಣಿಜ್ಯ ಘಟಕಗಳಿಗೆ ಹೊಸ ಬಿಬಿಎಂಪಿ ಖಾತೆ ಪಡೆಯಲು, ಆನ್‌ಲೈನ್‌ನಲ್ಲಿ ಪ್ರತಿನಿಧಿ ಅಥವಾ ಆಸ್ತಿ ಮಾಲೀಕರ ಆಧಾರ್ ಸಂಖ್ಯೆ ನಮೂದಿಸಬೇಕು. ಎ ಖಾತಾ ಬೇಕಾದಲ್ಲಿ ಕಟ್ಟಡದ ಅನುಮೋದಿತ ನಕ್ಷೆ ಮತ್ತು ಸ್ವಾಧೀನ ಪ್ರಮಾಣ ಪತ್ರ ಸಲ್ಲಿಸಬೇಕು.ಆಸ್ತಿಯ ಭಾವಚಿತ್ರವನ್ನು ಸಲ್ಲಿಕೆ ಮಾಡಬೇಕು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


Share It

You cannot copy content of this page