ಬೆಂಗಳೂರು: ಕರ್ನಾಟಕ ಕಾರ್ಯ ನಿರತ ಪತ್ರಕರ್ತರ ಸಂಘ(ಕೆಯುಡಬ್ಲೂಜೆ) ಈ ಬಾರಿ ಹಾಸನ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಯೋಗದಿಂದ ಇದೇ ಏ.12 ಮತ್ತು 13ರಂದು ಕ್ರಿಕೆಟ್ ಕ್ರೀಡಾಕೂಟವನ್ನು ಏರ್ಪಡಿಸಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದರು.
ಪ್ರೆಸ್ ಕ್ಲಬ್ ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಟಿಯಲ್ಲಿ ಕ್ರಿಕೆಟ್ ಪಂದ್ಯಾವಳಿಯ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಮಾತನಾಡಿದ ಅವರು, ಮಲೆನಾಡು, ಅರೆ ಮಲೆನಾಡು, ಬಯಲು ಸೀಮೆಯ ಸಮ್ಮಿಳನ ಹೊಂದಿರುವ ಹಾಸನ ಹೊಯ್ಸಳ ಶಿಲ್ಪಕಲೆಗೆ ತವರೂರು, ಗೊಮ್ಮಟನ ನೆಲೆಬೀಡಾಗಿದೆ. ಇದೇ ಮೊದಲ ಬಾರಿಗೆ ಹಾಸನದಲ್ಲಿ ರಾಜ್ಯ ಮಟ್ಟದ ಪತ್ರಕರ್ತರ ಕ್ರಿಕೆಟ್ ಕ್ರೀಡಾಕೂಟ ಏರ್ಪಡಿಸಲಾಗಿದೆ ಎಂದರು.
ಟೂರ್ನಮೆಂಟಿನಲ್ಲಿ ಪ್ರತಿ ಜಿಲ್ಲೆಯ ತಂಡಗಳು ಭಾಗವಹಿಸಲಿದ್ದು, ಅಂತಿಮ ಹಂತದ ಸಿದ್ದತೆಗಳು ನೆಡೆಯುತ್ತಿವೆ. ಸ್ಪೀಕರ್ ಯು.ಟಿ.ಖಾದರ್ ಅವರ ಘನ ಉಪಸ್ಥಿತಿಯಲ್ಲಿ ಸಹಕಾರ ಸಚಿವ ಹಾಗೂ ಹಾಸನ ಜಿಲ್ಲಾ ಉಸ್ತುವಾರಿ ಸಚಿವರ ಕೆ.ಎನ್.ರಾಜಣ್ಣ ಈ ಪಂದ್ಯಾವಳಿಯನ್ನು ಉದ್ಘಾಟನೆ ಮಾಡಲಿದ್ದಾರೆ. ಸಿಎಂ ಮಾಧ್ಯಮ ಸಲಹೆಗಾರ ಕೆ.ವಿ.ಪ್ರಭಾಕರ್ ಪಂದ್ಯಾವಳಿಯ ಬಗ್ಗೆ ಆಶಯ ನುಡಿಗಳನ್ನಾಡಲಿದ್ದಾರೆ. ಪ್ರಸ್ತಾವಿಕವಾಗಿ ರಾಜ್ಯ ಸಮಿತಿ ಸದಸ್ಯ ಎಚ್.ಬಿ.ಮದನಗೌಡರು ಮಾತನಾಡಲಿದ್ದು, ಸಂಸದ ಶ್ರೇಯಸ್ ಪಟೇಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಲಿದ್ದಾರೆ. ಸಮಾರೋಪ ಸಮಾರಂಭದಲ್ಲಿ ಮಾಜಿ ಸಚಿವ ಎಚ್.ಡಿ.ರೇವಣ್ಣ ಮತ್ತಿತರರು ಭಾಗವಹಿಸಲಿದ್ದಾರೆ. ಕ್ರೀಡಾಕೂಟಕ್ಕೆ ಹಾಸನ ಜಿಲ್ಲೆಯ ಎಲ್ಲ ಶಾಸಕರು, ಜಿಲ್ಲೆಯ ಎಲ್ಲ ವರ್ಗದ ಸರ್ಕಾರಿ ಅಧಿಕಾರಿಗಳು ಹಾಗೂ ಹಾಸನ ಕಾರ್ಯನಿರತ ಪತ್ರಕರ್ತರ ಸಂಘದ ಎಲ್ಲ ಪದಾಧಿಕಾರಿಗಳು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಹಿರಿಯ ಪತ್ರಕರ್ತರಾದ ಧ್ಯಾನ್ ಪೂಣಚ್ಚ, ಗಿರೀಶ್ ಗರಗ, ಭಾರತಿ ರಾಜನ್, ವಿಶ್ವನಾಥ್ ಸುವರ್ಣ ಉಪಸ್ಥಿತರಿದ್ದರು.