ಬೆಂಗಳೂರು: ಬಿಬಿಎಂಪಿ ಆದಾಯ ಹೆಚ್ಚಿಸಿಕೊಳ್ಳಲು ಕ್ರಮಕ್ಕೆ ಮುಂದಾಗಿದ್ದು, ರೆವೆನ್ಯೂ ನಿವೇಶನಗಳಿಗೆ ಹಾಗೂ ಸ್ವತ್ತುಗಳಿಗೆ ನಕ್ಷೆ ಮಂಜೂರು ಮಾಡಲು ಮುಂದಾಗಿದೆ.
ರೆವೆನ್ಯೂ ಸ್ವತ್ತುಗಳಿಗೆ ನಕ್ಷೆ ಮಂಜೂರು ಮಾಡುವ ಮೂಲಕ ಬಿಬಿಎಂಪಿ ಭರ್ಜರಿ ಆದಾಯ ಹರಿದು ಬರಲಿದ್ದು, ಸಾರ್ವಜನಿಕರ ಹಿತದೃಷ್ಟಿಯಿಂದ ಸುತ್ತೋಲೆ ಹೊರಡಿಸಿದೆ. ಏಕನಿವೇಶನ ವಿನ್ಯಾಸ ನಕ್ಷೆ ಮಂಜೂರಾತಿ ಅಧಿಕಾರದಲ್ಲಿ ಮಾರ್ಪಾಡು ಮಾಡಲಾಗಿದೆ. ಈ ಹಿಂದೆ ಬಿಡಿಎಗೆ ಇದ್ದ ನಕ್ಷೆ ಮಂಜೂರಾತಿ ಅಧಿಕಾರ ಬಿಬಿಎಂಪಿಗೆ ನೀಡಲಾಗಿದೆ.
ಇನ್ಮುಂದೆ ಬಿಬಿಎಂಪಿ ನಗರ ಯೋಜನೆ ಅಧಿಕಾರಿಗಳೇ ಬಿ ಖಾತಾಗಳ ನಿವೇಶನಗಳಿಗೂ ನಕ್ಷೆ ಮಂಜೂರಾತಿ ಮಾಡಿಕೊಡಲಿದ್ದಾರೆ. ಅಲ್ಲದೆ ಬಿಬಿಎಂಪಿ ನಗರ ಯೋಜನೆ ವಿಭಾಗದ ಆಯಾ ವಲಯಗಳ ಎಡಿಟಿಪಿಗಳಿಗೆ ಭೂ ಪರಿವರ್ತನೆ ಮಾಡಿ ನಕ್ಷೆ ಮಂಜೂರಾತಿ ನೀಡುವ ಅವಕಾಶ ಕಲ್ಪಿಸಿಕೊಡಲಾಗಿದೆ. ಸರ್ಕಾರದ ಈ ನಿರ್ಧಾರದಿಂದ ಬಿಬಿಎಂಪಿ ವ್ಯಾಪ್ತಿಯಲ್ಲಿರುವ ರೆವಿನ್ಯೂ ನಿವೇಶನದಾರರಿಗೆ ಅನುಕೂಲವಾಗುವುದರ ಜತೆಗೆ ಪಾಲಿಕೆ ಬೊಕ್ಕಸಕ್ಕೂ ಭಾರೀ ಆದಾಯವನ್ನು ತಂದು ಕೊಡುವ ನಿರೀಕ್ಷೆ ಇದೆ.