ಬೆಂಗಳೂರು: ರಾಜ್ಯದಲ್ಲಿ ಡೀಸೆಲ್ ಬೆಲೆ ಏರಿಕೆ, ಟೋಲ್‌ಗಳಲ್ಲಿ ಶುಲ್ಕ ಹೆಚ್ಚಳವನ್ನು ವಿರೋಧಿಸಿ ಮತ್ತು ಪರಿಷ್ಕರಣೆ ಮಾಡುವಂತೆ ಆಗ್ರಹಿಸಿ ರಾಜ್ಯ ಲಾರಿ ಮಾಲೀಕರ ಸಂಘ ಇಂದು ಮಧ್ಯರಾತ್ರಿಯಿಂದ ಅನಿರ್ಧಿಷ್ಟಾವಧಿ ಲಾರಿ ಮುಷ್ಕರಕ್ಕೆ ಕರೆ ನೀಡಿದೆ.
ಈ ಅನಿರ್ಧಿಷ್ಟಾವಧಿ ಲಾರಿ ಮುಷ್ಕರಕ್ಕೆ ಪೆಟ್ರೋಲ್ ಬಂಕ್ ಸಂಘಟನೆಗಳು, ಏರ್‌ಪೋರ್ಟ್ ಟ್ಯಾಕ್ಸಿ ಸಂಘ ಬೆಂಬಲ ಸೂಚಿಸಿದ್ದಾರೆ. ಜಲ್ಲಿಕಲ್ಲು, ಮರಳು ಲಾರಿ, ಗೂಡ್ಸ್ ವಾಹನಗಳು ಸೇರಿದಂತೆ ಎಲ್ಲ ಸರಕು ಸೇವೆಗಳು ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಜತೆಗೆ ಸರಕು ಸಾಗಣಿ ವಾಹನಗಳು, ಪೆಟ್ರೋಲ್, ಡಿಸೇಲ್ ಸಾಗಾಟ ಲಾರಿಗಳ ಚಾಲಕರು ಮುಷ್ಕರಕ್ಕೆ ಬೆಂಬಲ ಸೂಚಿಸಿವೆ.
ಇವತ್ತು ರಾತ್ರಿ 12 ಗಂಟೆಯಿಂದಲೇ ಅನಿರ್ಧಿಷ್ಟಾವಧಿ ಮುಷ್ಕರಕ್ಕೆ ರಾಜ್ಯ ಲಾರಿ ಮಾಲೀಕರ ಸಂಘ ಸಜ್ಜಾಗಿದ್ದು, ಆದರೆ ಈ ನಡುವೆ ಭಿನ್ನಾಭಿಪ್ರಾಯದ ಕಾರಣ ಮತ್ತೊಂದು ಬಣ ತೀವ್ರ ವಿರೋಧವನ್ನೂ ವ್ಯಕ್ತಪಡಿಸುತ್ತಿದೆ. ಇದು ಲಾರಿ ಮಾಲೀಕರಿಗೆ ಕೊಂಚ ಗೊಂದಲವನ್ನು ಮೂಡಿಸಿದೆ.
ಮುಷ್ಕರದ ಕುರಿತು ಮಾಹಿತಿ ನೀಡಿರುವ ರಾಜ್ಯ ಲಾರಿ ಮಾಲೀಖರ ಸಂಘದ ಅಧ್ಯಕ್ಷ ಜಿ.ಆರ್.ಷಣ್ಮುಗಪ್ಪ, ಇಂದು ಮಧ್ಯರಾತ್ರಿಯಿಂದ ಲಾರಿ ಮುಷ್ಕರ ಮಾಡಲು ನಿರ್ಧರಿಸಿದ್ದೇವೆ. ಯಾವುದೇ ಕಾರಣಕ್ಕೂ ಈ ಮುಷ್ಕರವನ್ನು ಹಿಂಪಡೆಯಲು ಸಾಧ್ಯವಿಲ್ಲ. ಹೊರ ರಾಜ್ಯಗಳ ಲಾರಿ ಮಾಲೀಕರು ಸೇರಿದಂತೆ ರಾಜ್ಯವ್ಯಾಪಿ ಮುಷ್ಕರಕ್ಕೆ ಬೆಂಬಲ ವ್ಯಕ್ತವಾಗಿದೆ ಎಂದು ಹೇಳಿದ್ದಾರೆ.
ರಾಜ್ಯದಲ್ಲಿ ಸುಮಾರು 6 ಲಕ್ಷಕ್ಕೂ ಹೆಚ್ಚು ಲಾರಿಗಳು ಇವೆ. ಮುಷ್ಕರ ಬೆಂಬಲಿಸುವ ಸಲುವಾಗಿ ಸಂಚಾರವನ್ನು ಸ್ಥಗಿತಗೊಳಿಸಲಿವೆ. ಹೀಗೆ ದರ ಏರಿಕೆಯಾಗುತ್ತಲಿದ್ದರೆ, ಬಡವರಿಗೆ ದರದ ಬರೆ ಬೀಳಲಿದೆ. ಟೋಲ್ ಮತ್ತು ಡೀಸೆಲ್ ದರ ಕಡಿಮೆ ಮಾಡಬೇಕು ಎಂದು ಆಗ್ರಹಿಸಿ ಈ ಮುಷ್ಕರವನ್ನು ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಇನ್ನೂ ಡೀಸೆಲ್ ದರ ಪರಿಷ್ಕರಣೆ ಸಂಬಂಧ ಸರ್ಕಾರದ ಯಾವುದೇ ಯಾರೂ ಲಾರಿ ಮಾಲೀಕರ ಸಂಘದ ಜತೆಗೆ ಮಾತುಕತೆ ನಡೆಸಿಲ್ಲ. ಹೀಗಾಗಿ ಮುಷ್ಕರ ನಡೆಸುವುದು ನಿಶ್ಚಿತವಾಗಿದೆ. ಸರ್ಕಾರ ನಮ್ಮೊಂದಿಗೆ ಮಾತುಕತೆ ನಡೆಸಲು ಮುಂದಾದರೆ ಮುಷ್ಕರ ಹಿಂಪಡೆಯುವ ಬಗ್ಗೆ ನಿರ್ಧರಿಸಲಾಗುವುದು ಎಂದು ಮಾಹಿತಿ ನೀಡಿದ್ದಾರೆ.