News

ಭಕ್ತಾದಿ ಸ್ನೇಹೀ ಕ್ರಮಗಳ ಜಾರಿಗೆ ಮುಂದಾದ ಟಿಟಿಡಿ ಆಡಳಿತ ಮಂಡಳಿ

Share It

ಬೆಂಗಳೂರು: ಹೊಸ ಆಡಳಿತ ಮಂಡಳಿ ಕಳೆದ ಜೂನ್‌ ನಿಂದ ಟಿಟಿಡಿಯನ್ನು ಭಕ್ತಾದಿಗಳ ಸ್ನೇಹೀ ಧಾರ್ಮಿಕ ಸ್ಥಳವನ್ನಾಗಿಸುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಟಿಟಿಡಿ ಸದಸ್ಯ ನರೇಶ್‌ ಕುಮಾರ್‌, ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹಾಗೂ ಟಿಟಿಡಿ ಅಧ್ಯಕ್ಷ ಬಿ ಆರ್‌ ನಾಯ್ಡು ಅವರ ನೇತೃತ್ವದಲ್ಲಿ ದೇವಸ್ಥಾನಕ್ಕೆ ಸಂಬಂಧಿಸಿದ ಹಲವಾರು ಸಮಸ್ಯೆಗಳನ್ನು ಪರಿಹರಿಸಲಾಗಿದೆ. ಇದರಿಂದಾಗಿ ಅನ್ನಪ್ರಸಾದ ಮತ್ತು ಲಡ್ಡು ಪ್ರಸಾದದ ಗುಣಮಟ್ಟದಲ್ಲಿ ಗಣನೀಯವಾಗಿ ಬದಲಾವಣೆಯಾಗಿದೆ. ಸೇವೆಗಳು, ವಾಸ್ತವ್ಯ ಹಾಗೂ ದರ್ಶನಗಳ ಟಿಕೇಟ್‌ನಲ್ಲಿ ಪಾರದರ್ಶಕತೆಯನ್ನು ತರಲಾಗಿದೆ. ಇದರಿಂದ ಸಾಮಾನ್ಯ ಭಕ್ತಾದಿಗಳು ಹೆಚ್ಚಿನ ತೊಂದರೆಯಿಲ್ಲದೆ ದರ್ಶನ ಪಡೆದುಕೊಳ್ಳಲು ಅನುವು ಮಾಡಿ ಕೊಡಲಾಗಿದೆ ಎಂದು ತಿಳಿಸಿದ್ದಾರೆ.

ಟಿಟಿಡಿ ಗೋಶಾಲೆಯಲ್ಲಿ ಪ್ರತಿ ತಿಂಗಳು ಹಲವಾರು ಕಾರಣಗಳಿಂದ ಸರಾಸರಿ 15 ಗೋವುಗಳು ಸಾವನ್ನಪ್ಪುತ್ತಿವೆ. ಕಾಯಿಲೆಗಳು, ವಯಸ್ಸು ಹೀಗೆ ಹತ್ತು ಹಲವು ಕಾರಣಗಳು ಇದರ ಹಿಂದೆ ಇವೆ. 2024 ರಲ್ಲಿ 179 ಗೋವುಗಳು ಸಾವನ್ನಪ್ಪಿದ್ದು, 2025ರ ಫೆಬ್ರವರಿ ಹಾಗೂ ಜನವರಿಯಲ್ಲಿ 43 ಗೋವುಗಳು ವಯೋಸಹಜ ಕಾರಣಗಳಿಂದ ಸಾವನ್ನಪ್ಪಿವೆ. ಈಗ ಈ ಕುರಿತು ಹಿಂದಿನ ಆಡಳಿತ ಮಂಡಳಿಯ ಅಧ್ಯಕ್ಷರು ಇಲ್ಲಸಲ್ಲದ ಆರೋಪಗಳನ್ನು ಮಾಡುವ ಮೂಲಕ ಟಿಟಿಡಿಗೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುತ್ತಿದ್ದಾರೆ. ಇಂತಹ ಅಪಪ್ರಚಾರದ ಮೂಲಕ ದೇಶ ವಿದೇಶಗಳಲ್ಲಿರುವ ಲಕ್ಷಾಂತರ ಭಕ್ತರ ಭಾವನೆಗಳಿಗೆ ಧಕ್ಕೆ ತರುವುದು ಅವರ ಉದ್ದೇಶವಾಗಿದೆ ಎಂದಿದ್ದಾರೆ.

ತಿರುಪತಿ- ತಿರುಮಲಕ್ಕೆ ಭೇಟಿ ನೀಡುತ್ತಿರುವಂತಹ ಭಕ್ತಾದಿಗಳು ಹೊಸ ಆಡಳಿತ ಮಂಡಳಿ ತಂದಿರುವ ಬದಲಾವಣೆಗಳ ಬಗ್ಗೆ ಬಹಳ ಸಂತಸ ವ್ಯಕ್ತಪಡಿಸಿದ್ದಾರೆ. ಹೊಸ ಆಡಳಿತ ಮಂಡಳಿ ಭಕ್ತಾದಿಗಳಿಗೆ ಹೆಚ್ಚಿನ ಅನುಕೂಲ ಹಾಗೂ ಅವುಗಳ ಮೂಲಕ ಟಿಟಿಡಿಯ ಸಮಗ್ರ ಅಭಿವೃದ್ದಿಯ ದೃಷ್ಟಿಕೋನವನ್ನು ಹೊಂದಿದೆ ಎಂದು ಹೇಳಿದ್ದಾರೆ.


Share It

You cannot copy content of this page