Health News

ರೊಬೋಟಿಕ್ ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆಯಿಂದ 48 ಕೆ.ಜಿ ತೂಕ ಕಳೆದುಕೊಂಡ ವ್ಯಕ್ತಿ

Share It

ಬೆಂಗಳೂರು: 160 ಕೆಜಿ ತೂಕ ಹೊಂದಿದ್ದ 35 ವರ್ಷದ ವ್ಯಕ್ತಿಗೆ ರೋಬೋಟ್ ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಬಳಿಕ ಬರೋಬ್ಬರಿ 48 ಕೆ.ಜಿ. ತೂಕ ಕಳೆದುಕೊಂಡಿದ್ದಾರೆ. ಫೋರ್ಟಿಸ್‌ ಆಸ್ಪತ್ರೆಯ ಸರ್ಜಿಕಲ್ ಗ್ಯಾಸ್ಟ್ರೋಎಂಟರಾಲಜಿ, ಬಾರಿಯಾಟ್ರಿಕ್ ಮತ್ತು ರೊಬೊಟಿಕ್ ಸರ್ಜರಿ ಹೆಚ್ಚುವರಿ ನಿರ್ದೇಶಕ ಡಾ. ಮನೀಶ್ ಜೋಶಿ ಅವರ ತಂಡ ಈ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದೆ.

ಈ ಕುರಿತು ಮಾತನಾಡಿರುವ ಡಾ. ಮನೀಶ್ ಜೋಶಿ, ಬೆಂಗಳೂರು ಮೂಲದ 35 ವರ್ಷದ ವ್ಯಕ್ತಿ ಕಳೆದ ಐದು ವರ್ಷಗಳಿಂದ ಅತಿಯಾದ ಸ್ಥೂಲಕಾಯತೆ ಹೊಂದಿದ್ದರು. ಇದರಿಂದ ಆತನಿಗೆ ಸ್ಲೀಪ್‌ ಅಪ್ನಿಯಾ(ನಿದ್ರೆಯಲ್ಲಿ ಉಸಿರುಗಟ್ಟುವಿಕೆ) ಸಮಸ್ಯೆಗೆ ಒಳಗಾಗಿದ್ದರು. ಕೋವಿಡ್‌ ಸಾಂಕ್ರಮಿಕದ ಬಳಿಕ ಇವರ ಅತಿಯಾದ ತೂಕದಿಂದ ನಡೆಯಲೂ ಸಾಧ್ಯವಾಗದೇ ಬಿಪ್ಯಾಪ್‌ ಯಂತ್ರದ ಮೇಲೆ ಅವಲಂಬಿತರಾಗಿದ್ದರು. ಈ ಯಂತ್ರವು ನಿದ್ರೆ ಸಂದರ್ಭದಲ್ಲಿ ಸರಾಗವಾಗಿ ಉಸಿರಾಡಲು ಅನುವು ಮಾಡಿಕೊಡುತ್ತದೆ. ಇದಷ್ಟೇ ಅಲ್ಲದೆ, ಇವರ ಅತಿಯಾದ ತೂಕವು ಇವರ ದೈನಂದಿನ ಕೆಲಸಕಾರ್ಯಗಳಿಗೂ ಅಡ್ಡಿಯಾಗಿ, ನಿರಂತರ ಆಯಾಸ, ಉಸಿರಾಟ ಮತ್ತು ನಡೆಯಲು ತೊಂದರೆ, ಅನಿಯಮಿತ ನಿದ್ರೆಯ ಸಮಸ್ಯೆಗೆ ಒಳಗಾಗಿದ್ದರು. ಅಷ್ಟೆ ಅಲ್ಲದೆ, ಆಗಾಗ್ಗೇ ಆಸ್ಪತ್ರೆಗೆ ದಾಖಲಾಗುವ ಸ್ಥಿತಿಯೂ ನಿರ್ಮಾಣವಾಗಿತ್ತು ಎಂದು ಹೇಳಿದ್ದಾರೆ.

ಇವರಿಗೆ ಬೊಜ್ಜು ಹೈಪೋವೆಂಟಿಲೇಷನ್ ಸಿಂಡ್ರೋಮ್‌ ಸಮಸ್ಯೆ ಇರುವುದು ತಿಳಿದು ಬಂದಿತು. ಇವರು ತೂಕ ಇಳಿಸದೇ ಹೋದಲ್ಲಿ ಜೀವಕ್ಕೇ ಆಪತ್ತು ಎದುರಾಗುವ ಸ್ಥಿತಿ ನಿರ್ಮಾಣವಾಗಿತ್ತು. ಹೀಗಾಗಿ ಅವರಿಗೆ ರೋಬೋಟ್-ನೆರವಿನ ಬಾರಿಯಾಟ್ರಿಕ್ ಶಸ್ತ್ರಚಿಕಿತ್ಸೆ ನಡೆಸಲಾಯಿತು. ಇದರಿಂದ ಅವರ ಹೊಟ್ಟೆಯಲ್ಲಿನ ಬೊಜ್ಜನ್ನು ಹೊರತೆಗೆದು, ಅವರ ಹೊಟ್ಟೆಯ ಗಾತ್ರವನ್ನು ಕಡಿಮೆ ಮಾಡಲಾಯಿತು. ರೋಬೋಟ್ ತಂತ್ರಜ್ಞಾನ ಬಳಕೆಯಿಂದ ಈ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು, ಹೆಚ್ಚು ನಿಖರತೆ ನೀಡಿ, ವೇಗವಾಗಿ ಚೇತರಿಸಿಕೊಳ್ಳಲು ನೆರವಾಯಿತು. ಶಸ್ತ್ರಚಿಕಿತ್ಸೆಯ ಬಳಿಕ ಅವರು 48 ಕೆ.ಜಿ ತೂಕವನ್ನು ಕಳೆದುಕೊಂಡಿದ್ದು, ಚೇತರಿಕೆಯ ಹಾದಿಯಲ್ಲಿದ್ದಾರೆ ಎಂದು ಡಾ. ಮನೀಶ್ ಜೋಶಿ ವಿವರಿಸಿದ್ದಾರೆ.


Share It

You cannot copy content of this page