ಬೆಂಗಳೂರು: ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ ಕನ್ನಡ ಭಾಷಾ ಪರೀಕ್ಷೆಗೆ 542 ಅಭ್ಯರ್ಥಿಗಳು ಗೈರು ಹಾಜರಾಗಿದ್ದಾರೆ.
ಮಂಗಳವಾರ ನಡೆದ ಪರೀಕ್ಷೆ ಸುಗಮವಾಗಿ ನಡೆದಿದ್ದು, ಅರ್ಜಿ ಸಲ್ಲಿಸಿದ್ದ 2,500 ಮಂದಿಯ ಪೈಕಿ 1,958 ಅಭ್ಯರ್ಥಿಗಳು ಹಾಜರಾಗಿದ್ದಾರೆ. ಬೆಂಗಳೂರು, ಮಂಗಳೂರು, ವಿಜಯಪುರ ಮತ್ತು ಬೆಳಗಾವಿ ನಗರಗಳ ಒಟ್ಟು ಐದು ಕೇಂದ್ರಗಳಲ್ಲಿ ಪರೀಕ್ಷೆ ನಡೆದಿದೆ.
ಮುಖ ಚಹರೆ ಪತ್ತೆ ಮೂಲಕ ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರದೊಳಗೆ ಬಿಡಲಾಯಿತು. ಮೊದಲ ದಿನದ ಈ ಪ್ರಯೋಗ ಯಶಸ್ವಿಯಾಗಿದ್ದು, ಆಗಿಂದಾಗಿಯೇ ಹಾಜರಾತಿ ಕೂಡ ಸಿಗುತ್ತಿತ್ತು ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ತಿಳಿಸಿದ್ದಾರೆ.
ನಾಳೆಯಿಂದ ಸಿಇಟಿ ಮುಖ್ಯ ಪರೀಕ್ಷೆ:
ಸಿಇಟಿ ಮುಖ್ಯ ಪರೀಕ್ಷೆ ಏ.16 ಮತ್ತು 17 ರಂದು ನಡೆಯಲಿದೆ. ಕೊನೆ ಹಂತದ ಸಿದ್ಧತೆಗಳನ್ನು ಪರಿಶೀಲಿಸಲಾಗಿದೆ. ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳನ್ನು ತೀವ್ರ ಶೋಧ ಮಾಡಿಯೇ ಒಳಬಿಡಲಾಗಲಿದೆ, ಈ ಕಾರಣಕ್ಕೆ ಕನಿಷ್ಠ ಒಂದೂವರೆ ಗಂಟೆ ಮುಂಚೆ ಕೇಂದ್ರಗಳಿಗೆ ಬರಬೇಕು ಎಂದು ವಿದ್ಯಾರ್ಥಿಗಳಲ್ಲಿ ಎಚ್.ಪ್ರಸನ್ನ ಮನವಿ ಮಾಡಿದ್ದಾರೆ.
ಒಟ್ಟು 3.31 ಲಕ್ಷ ಅಭ್ಯರ್ಥಿಗಳ ಪೈಕಿ 3.17 ಲಕ್ಷ ಮಂದಿ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡಿದ್ದಾರೆ. ಕಳೆದ ಎರಡು ದಿನಗಳಲ್ಲಿಯೇ ಸುಮಾರು 50 ಸಾವಿರ ಮಂದಿ ಪ್ರವೇಶ ಡೌನ್‌ಲೋಡ್ ಮಾಡಿಕೊಂಡಿದ್ದಾರೆ.
ಒಟ್ಟು 2.63 ಲಕ್ಷ ಮಂದಿ ಪಿಸಿಎಂಬಿ ಹಾಗೂ 67 ಸಾವಿರ ಮಂದಿ ಪಿಸಿಎಂ ವಿಷಯಗಳ ಪರೀಕ್ಷೆ ಗಳನ್ನು ಬರೆಯಲಿದ್ದಾರೆ. ಕೊನೆ ದಿನವಾದ ಇಂದು ಕೂಡ ಅನೇಕರು ಕೆಇಎ ಕಚೇರಿಗೆ ಬಂದು ಪ್ರವೇಶ ಪತ್ರ ಪಡೆಡಿದ್ದಾರೆ ಎಂದು ವಿವರಿಸಿದ್ದಾರೆ.
ಬೆಂಗಳೂರಿನ 155 ಸೇರಿದಂತೆ ಒಟ್ಟು 775 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿದೆ. ಬಿಗಿ ಕ್ರಮಗಳನ್ನು ಕೈಗೊಂಡಿದ್ದು, ವೆಬ್ ಕಾಸ್ಟಿಂಗ್ ಮೂಲಕ ನಿಗಾ ಇಡಲಾಗುವುದು. ಅಕ್ರಮಗಳಿಗೆ ಅವಕಾಶ ಇಲ್ಲದಂತೆ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದ್ದಾರೆ.