News

ರಜೆ ವಿಚಾರದಲ್ಲಿ ಹೈಕೋರ್ಟ್-ಟ್ರಯಲ್ ಕೋರ್ಟ್ ನಡುವೆ ಭಿನ್ನ ನಿಲುವು ಬೇಡ: ಎಎಬಿ ಒತ್ತಾಯ

Share It

ದೀಪಾವಳಿ ಹಬ್ಬಕ್ಕೆ ರಜೆ ನೀಡುವ ವಿಚಾರದಲ್ಲಿ ಹೈಕೋರ್ಟ್ ಮತ್ತು ವಿಚಾರಣಾ ನ್ಯಾಯಾಲಯಗಳಿಗೆ ಪ್ರತ್ಯೇಕ ನಿಲುವು ಬೇಡ. ಅಕ್ಟೋಬರ್ 25ರಂದು ವಿಚಾರಣಾ ನ್ಯಾಯಾಲಯಗಳಿಗೂ ರಜೆ ವಿಸ್ತರಿಸಬೇಕು ಎಂದು ಬೆಂಗಳೂರು ವಕೀಲರ ಸಂಘ ಹೈಕೋರ್ಟ್ ಗೆ ಮನವಿ ಮಾಡಿದೆ.

ಈ ಕುರಿತಂತೆ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ವಿವೇಕ್ ಸುಬ್ಬಾರೆಡ್ಡಿ, ಪ್ರಧಾನ ಕಾರ್ಯದರ್ಶಿ ಟಿ.ಜಿ ರವಿ ಹಾಗೂ ಖಜಾಂಚಿ ಹರೀಶ್ ಎಂ.ಟಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ, ವರಾಳೆ ಅವರಿಗೆ ಪತ್ರ ಬರೆದಿದ್ದಾರೆ.

ಪತ್ರದ ಸಾರಾಂಶ: ದೀಪಾವಳಿ ಹಬ್ಬ ಆಚರಿಸಲು ಅಕ್ಟೋಬರ್ 25ರಂದು ಹೈಕೋರ್ಟ್ ಗೆ ರಜೆ ನೀಡಲಾಗಿದೆ. ಆದರೆ, ಇದೇ 25 ರಂದು ವಿಚಾರಣಾ ನ್ಯಾಯಾಲಯಗಳಿಗೆ ಕರ್ತವ್ಯದ ದಿನವಾಗಿದೆ.

ಇಂತಹ ಭಿನ್ನ ಧೋರಣೆಯಿಂದಾಗಿ ಸಾವಿರಾರು ವಕೀಲರು ಹಾಗೂ ನ್ಯಾಯಾಂಗ ಅಧಿಕಾರಿಗಳು ಮತ್ತು ಕೋರ್ಟ್ ಸಿಬ್ಬಂದಿಗೆ ದೀಪಾವಳಿ ಹಬ್ಬ ಆಚರಿಸಲು ತೊಂದರೆಯಾಗಿದೆ. ಹೀಗಾಗಿ, ದೀಪಾವಳಿ ಆಚರಿಸಲು ವಿಚಾರಣಾ ನ್ಯಾಯಾಲಯಗಳನ್ನೂ ಸಮಾನವಾಗಿ ಕಾಣಬೇಕು ಎಂದು ಎಎಬಿ ಒತ್ತಾಯಿಸಿದೆ.

ರಜೆ ನೀಡುವ ವಿಚಾರದಲ್ಲಿ ಹೈಕೋರ್ಟ್ ಹಾಗೂ ವಿಚಾರಣಾ ನ್ಯಾಯಾಲಯಗಳಿಗೆ ಪ್ರತ್ಯೇಕ ನಿಲುವು ಅನುಸರಿಸಲಾಗುತ್ತಿದೆ ಎಂಬ ಭಾವ ವಕೀಲರು ಮತ್ತು ನ್ಯಾಯಾಂಗ ಅಧಿಕಾರಿಗಳಲ್ಲಿ ಮೂಡಿದೆ. ಈ ಭಾವನೆಯನ್ನು ಹೋಗಲಾಡಿಸಲು ವಿಚಾರಣಾ ನ್ಯಾಯಾಲಯಗಳಿಗೂ ದೀಪಾವಳಿ ಹಬ್ಬ ಆಚರಣೆಗಾಗಿ ಅ.25ರಂದು ರಜೆ ನೀಡಬೇಕು ಎಂದು ಎಎಬಿ ಪತ್ರದಲ್ಲಿ ಮನವಿ ಮಾಡಿದೆ.

ಹಾಗೆಯೇ, ದೀಪಾವಳಿ ಹಬ್ಬದ ಆಚರಣೆಗೆ ಅ.25ರಂದು ನೀಡುವ ರಜೆಗೆ ಪರ್ಯಾಯವಾಗಿ ಎರಡನೇ ಅಥವಾ ನಾಲ್ಕನೇ ಶನಿವಾರವನ್ನು ಕೆಲಸದ ದಿನವಾಗಿ ಪರಿವರ್ತಿಸಬಹುದು ಎಂದು ಎಎಬಿ ಸಲಹೆ ನೀಡಿದೆ.

ಅಲ್ಲದೇ, ಈ ಕುರಿತಂತೆ ಎಎಬಿ ಅಧ್ಯಕ್ಷ ವಿವೇಕ್ ಸುಬ್ಬಾರೆಡ್ಡಿ ಅವರು ಮುಖ್ಯ ನ್ಯಾಯಮೂರ್ತಿ ಜತೆ ಚರ್ಚಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಸಿಜೆ ಪಿ.ವಿ ವರಾಳೆ ಮುಂದಿನ ಕ್ಯಾಲೆಂಡರ್ ವರ್ಷದಿಂದ ಇಂತಹ ಪ್ರತ್ಯೇಕತೆ ಇರದಂತೆ ನೋಡಿಕೊಳ್ಳಲಾಗುವುದು ಹಾಗೂ ಇದೇ ಅ.25ರ ರಜೆ ಕುರಿತಂತೆ ಶನಿವಾರ ಸಂಜೆಯೊಳಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಎನ್ನಲಾಗಿದೆ.


Share It

You cannot copy content of this page