Education News

775 ಕೇಂದ್ರಗಳಲ್ಲಿ ನಡೆದ ಸಿಇಟಿ ಪರೀಕ್ಷೆ ಸುಸೂತ್ರ

Share It

ಬೆಂಗಳೂರು: ಎಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್ ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬುಧವಾರ ಆಯೋಜಿಸಿದ್ದ ಮೊದಲ ದಿನದ ಸಾಮಾನ್ಯ ಪ್ರವೇಶ ಪರೀಕ್ಷೆ ಎಲ್ಲ 775 ಕೇಂದ್ರಗಳಲ್ಲಿ ಸುಸೂತ್ರವಾಗಿ‌ ನಡೆಯಿತು.

ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಂಡಿದ್ದ ಒಟ್ಟು 3,21,895 ವಿದ್ಯಾರ್ಥಿಗಳ ಪೈಕಿ 3,11,777 ಮಂದ ಪರೀಕ್ಷೆಗೆ ಹಾಜರಾಗಿದ್ದರು. ಬೆಳಗಿನ ಅವಧಿಯಲ್ಲಿ ನಡೆದ ಭೌತವಿಜ್ಞಾನ ಪತ್ರಿಕೆಗಿಂತ ಮಧ್ಯಾಹ್ನ ನಡೆದ ರಸಾಯನವಿಜ್ಞಾನ ಪತ್ರಿಕೆಯನ್ನು 183 ಮಂದಿ ಹೆಚ್ಚಿಗೆ ಬರೆದಿದ್ದಾರೆ.

ಕ್ಯಾಮರಾ ಕಣ್ಗಾವಲಿನಲ್ಲಿ ನಡೆದ ಪರೀಕ್ಷೆಗೆ ವ್ಯಾಪಕ ತಯಾರಿ‌ ಮಾಡಿಕೊಳ್ಳಲಾಗಿತ್ತು. ಕ್ಯೂ ಆರ್ ಕೋಡ್ ಮೂಲಕ ಮುಖ‌ ಚಹರೆ ಪತ್ತೆ ಹಚ್ಚಿ ಅಭ್ಯರ್ಥಿಗಳ ನೈಜತೆ ತಿಳಿಯುವ ವ್ಯವಸ್ಥೆ ಇದೇ ಮೊದಲ ಬಾರಿಗೆ ಜಾರಿ ಮಾಡಿದ್ದು ಸಂಪೂರ್ಣ ಯಶ್ವಸಿಯಾಗಿದೆ. ಬೆಳಗಿನ ಪರೀಕ್ಷೆಗೆ ಕೆಲಕಡೆ ತಾಂತ್ರಿಕ ದೋಷ ಕಂಡುಬಂದರೂ ಮಧ್ಯಾಹ್ನ ಆ ರೀತಿ ಯಾವ ತೊಂದರೆಯೂ ಆಗಲಿಲ್ಲ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಪ್ರಸನ್ನ ಮಾಹಿತಿ ನೀಡಿದ್ದಾರೆ.

ಪ್ರವೇಶ ಪತ್ರ ಇಲ್ಲದೆ, ವಿವಿಧ ಪರೀಕ್ಷಾ ಕೇಂದ್ರಗಳಿಗೆ ತೆರಳಿ ಪರದಾಡುತ್ತಿದ್ದ 30ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಕೊನೆ ಕ್ಷಣದಲ್ಲಿ ಪ್ರವೇಶ ಪತ್ರ ಒದಗಿಸುವ ಕೆಲಸವನ್ನು ಕೆಇಎ ಸಿಬ್ಬಂದಿ ಮಾಡಿದರು. ಬೆಳಿಗ್ಗೆ‌ 10 ಗಂಟೆಗೆ ಕರೆ ಮಾಡಿ ತಮ್ಮ‌ ಮೊಬೈಲ್ ನಲ್ಲಿ‌ ಕರೆನ್ಸಿ ಇಲ್ಲ, ನಂಬರ್ ಬ್ಲಾಕ್ ಅಗಿದೆ. ಹೀಗಾಗಿ ಡೌನ್‌ಲೋಡ್ ಮಾಡಿಕೊಳ್ಳಲು ಓಟಿಪಿ ಬರುತ್ತಿಲ್ಲ ಎನ್ನುತ್ತಿದ್ದವರಿಗೆ ಸಿಬ್ಬಂದಿಯೇ‌ ವಾಟ್ಸ್ ಅಪ್‌ ಮೂಲಕ ಪ್ರವೇಶ ಪತ್ರ‌ ಕಳುಹಿಸಿ ಪರಿಕ್ಷೆ ಬರೆಯಲು ನೆರವಾದರು. ‌ಹೀಗೆ‌ ಬೆಳಿಗ್ಗೆ 10.29ರವರೆಗೆ ಯುದ್ದೋಪಾದಿಯಲ್ಲಿ ಕೆಲಸ ನಿರ್ವಹಿಸಿದರು ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಾಳೆ (ಏ.17) ಬೆಳಗಿನ ಅವಧಿಯಲ್ಲಿ ಗಣಿತ ಹಾಗೂ ಮಧ್ಯಾಹ್ನ ಜೀವವಿಜ್ಞಾನ ಪತ್ರಿಕೆಗಳಿಗೆ ಪರೀಕ್ಷೆ ನಡೆಯಲಿದೆ ಎಂದು ಪ್ರಸನ್ನ ಮಾಹಿತಿ ನೀಡಿದ್ದಾರೆ.


Share It

You cannot copy content of this page